ಕಳಪೆ ಬಿತ್ತನೆ ಬೀಜ ವಿತರಣೆ; ಜಮೀನಿನಲ್ಲೇ ಕೊಳೆಯುತ್ತಿದೆ ಆಲೂಗಡ್ಡೆ; 110 ಎಕರೆ ಬೆಳೆ ಸಂಪೂರ್ಣ ನಾಶ

ಹಲವು ವರ್ಷಗಳಿಂದಲೂ ಸರ್ಟಿಫೈ ಮಾಡದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ನಾವು ತಿನ್ನುವಂತಹ ಆಲೂಗಡ್ಡೆ ವಿತರಿಸಿರುವುದರಿಂದ ಎಲ್ಲಾ ಆಲೂಗಡ್ಡೆಯೂ ಸಂಪೂರ್ಣವಾಗಿ ಕೊಳೆಯುತ್ತಿದೆ. ಈ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕಿದೆ.

news18-kannada
Updated:May 30, 2020, 5:09 PM IST
ಕಳಪೆ ಬಿತ್ತನೆ ಬೀಜ ವಿತರಣೆ; ಜಮೀನಿನಲ್ಲೇ ಕೊಳೆಯುತ್ತಿದೆ ಆಲೂಗಡ್ಡೆ; 110 ಎಕರೆ ಬೆಳೆ ಸಂಪೂರ್ಣ ನಾಶ
ಜಮೀನಿನಲ್ಲೇ ಕೊಳೆತಿರುವ ಆಲೂಗೆಡ್ಡೆ ಬೀಜ
  • Share this:
ಹಾಸನ; ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆಯು ದಿನದಿಂದ ದಿನಕ್ಕೆ ಸಂಪೂರ್ಣವಾಗಿ ನಶಿಸುತ್ತದೆ. ಕಳೆದ ಹತ್ತು ವರ್ಷದ ಹಿಂದೆ ಇಡೀ ಜಿಲ್ಲೆಯಲ್ಲಿ 1 ಲಕ್ಷದ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿತ್ತು. ಆದರೆ ಈಗ ಕೇವಲ ಇಡೀ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಆಲೂಗಡ್ಡೆ ಬೀಜ ಬಿತ್ತನೆ ಮಾಡಲಾಗುತ್ತಿದೆ. ಆದರೆ ಕಳಪೆ ಬೀಜದಿಂದಾಗಿ ಆಲೂಗಡ್ಡೆ ಬೆಳೆ ಜಮೀನಿನಲ್ಲೇ ಕೊಳೆಯುತ್ತಿರುವ ಕಾರಣ ರೈತರು ನೇಗಿಲಿನಲ್ಲಿ ಉತ್ತು ಬೆಳೆ ನಾಶ ಮಾಡುತ್ತಿದ್ದಾರೆ.

ಹಾಸನ ತಾಲೂಕಿನ ಬೈಲಹಳ್ಳಿಯ ಸುತ್ತಮುತ್ತ 110 ಎಕರೆ ಜಮೀನಿನಲ್ಲಿ ಹಾಕಿದ್ದ ಆಲೂಗಡ್ಡೆ ಫಸಲು ಬಾರದೆ ಸಂಪೂರ್ಣವಾಗಿ ಕೊಳೆತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿದ್ದ ರೈತರು ಆಲೂಗಡ್ಡೆ ಬೆಳೆಯನ್ನು ನಾಶಪಡಿಸುತ್ತಿದ್ದಾರೆ. 20 ದಿನಗಳ ಹಿಂದೆ ಆಲೂಗಡ್ಡೆ ಫಸಲು ಬಿತ್ತನೆ ಮಾಡಲಾಗಿತ್ತು. ಆದರೆ 20 ದಿನ ಕಳೆದರೂ ಫಸಲು ಬರದೇ ಜಮೀನಿನಲ್ಲೇ ಕೊಳೆತಿದೆ. ಒಂದೇ ಒಂದು ಆಲೂಗೆಡ್ಡೆ ಬೀಜ ಮೊಳಕೆ ಬಂದಿಲ್ಲಾ. ರೈತರು ಪ್ರತೀ ಎಕರೆಗೆ 40 ರಿಂದ 50 ಸಾವಿರ ಹಣ ಖರ್ಚು ಮಾಡಿದ್ದಾರೆ. ಸರ್ಕಾರವೇ ದರ ನಿಗದಿ ಮಾಡಿ ಎಪಿಎಂಸಿ ಮೂಲಕ ಪ್ರತೀ ಕ್ವಿಂಟಾಲ್ ಆಲೂಗಡ್ಡೆಗೆ 2400 ರೂ. ಹಣ ಕೊಟ್ಟು ತಂದು ಫಸಲು ಹಾಕಿದ್ದಾರೆ. ಆದರೆ ಸರ್ಕಾರ ಕಳಪೆ ಬೀಜ ವಿತರಿಸಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಪರಿಹಾರ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಆರ್,ಗಿರೀಶ್ ಮಾತನಾಡಿ, ಕಳಪೆ ಬೀಜದಿಂದಾಗಿ ಎಷ್ಟು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಬೀಜ ಕೊಳೆತಿದೆ ಎಂಬುದನ್ನು ಸರ್ವೆ ಮಾಡುತ್ತಿದ್ದೇವೆ. ಕೆಲ ರೈತರು ಆಲೂಗಡ್ಡೆ ಬೆಳೆಯನ್ನು ನೇಗಿಲಿನಲ್ಲಿ ಉಳುಮೆ ಮಾಡಿ ನಾಶಪಡಿಸುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಆಲೂಗಡ್ಡೆ ಬೀಜ ಕೊಳೆತಿರುವುದು ನನ್ನ ಗಮನಕ್ಕೆ ಬಂದಿದೆ. ತೋಟಗಾರಿಕಾ ಇಲಾಖೆ ಸಂಶೋಧನಾ ಕೇಂದ್ರಕ್ಕೆ ಈ ಕೊಳೆತ ಬೀಜ ಕಳುಹಿಸುತ್ತಿದ್ದೇವೆ. ವಿಜ್ಞಾನಿಗಳು ಆಲೂಗಡ್ಡೆ ಬೀಜ ಕೊಳೆತಿರುವ ಬಗ್ಗೆ ಸಂಶೋಧನೆ ನಡೆಸಿ ವರದಿ ಕಳಿಸಲಿದ್ದಾರೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಿದ್ದೇನೆ. ಈಗಾಗಲೇ ಕಳಪೆ ಬೀಜದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಯಾವ ಕಾರಣದಿಂದ ಆಲೂಗಡ್ಡೆ ಬೀಜ ಕೊಳೆತಿದೆ ಎಂಬುದು ತಿಳಿದು ಬಂದಿಲ್ಲ. ಮೊದಲು ಸಂಶೋಧನಾ ಕೇಂದ್ರದಿಂದ ವರದಿ ಬರಲಿ ನಂತರ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯು ಆಲೂಗಡ್ಡೆಯಾಗಿದೆ. ಆದರೆ ಈ ಪ್ರಮುಖ ವಾಣಿಜ್ಯ ಬೆಳೆಯನ್ನು ಬೆಳೆಯುವ ಪ್ರದೇಶವು ದಿನೇ ದಿನೇ ಕ್ಷೀಣಿಸುತ್ತಿದೆ. ಈ ಆಲೂಗಡ್ಡೆ ಬೆಳೆಯನ್ನು ಸರ್ಟಿಫೈ ಮಾಡಿಲ್ಲಾ. ಹಲವು ವರ್ಷಗಳಿಂದಲೂ ಸರ್ಟಿಫೈ ಮಾಡದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ನಾವು ತಿನ್ನುವಂತಹ ಆಲೂಗಡ್ಡೆ ವಿತರಿಸಿರುವುದರಿಂದ ಎಲ್ಲಾ ಆಲೂಗಡ್ಡೆಯೂ ಸಂಪೂರ್ಣವಾಗಿ ಕೊಳೆಯುತ್ತಿದೆ. ಈ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕಿದೆ.
First published: May 30, 2020, 5:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading