ಚಿಕ್ಕಮಗಳೂರು : ಎಲ್ಲಾ ರಾಷ್ಟ್ರೀಯ ನಾಯಕರು ನಮ್ಮವರೇ. ಯಾರೂ ಯಾರ ಬಗ್ಗೆಯೂ ಮಾತನಾಡಬಾರದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೇಂದ್ರ ಸಚಿವೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಬಂದ ಸಂಸದೆಗೆ ಬಿಜೆಪಿ ಕಾರ್ಯಕರ್ತರು ಪೂರ್ಣಕುಂಭದ ಸ್ವಾಗತ ಕೋರಿದರು. ಇದೇ ವೇಳೆ ಸಂಸದೆ ಶೋಭಾ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆಹರೂ ಹುಕ್ಕಾಬಾರ್ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಎಲ್ಲರೂ ನಮ್ಮ ಗೌರವಾನ್ವಿತ ನಾಯಕರು. ಅದಕ್ಕೆ ಜಾತಿ, ಪಕ್ಷ ಹಾಗೂ ಧರ್ಮದ ಭೇದವಿಲ್ಲ. ಅವರವರ ಕಾಲಘಟ್ಟದಲ್ಲಿ ಎಲ್ಲರೂ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಯಾರೂ ಯಾರ ಬಗ್ಗೆಯೂ ಮಾತನಾಡಬಾರದು ಎಲ್ಲರೂ ಗೌರವಾನ್ವಿತರು ಎಂದರು.
ಒಂದೇ ದಿನ ಜಿಲ್ಲೆಯ ಚಿಕ್ಕಮಗಳೂರು ನಗರ, ಆಲ್ದೂರು, ಬಾಳೆಹೊನ್ನೂರು, ಶೃಂಗೇರಿಯಲ್ಲಿ ನಾಲ್ಕು ಕಡೆ ಜನಾಶೀರ್ವಾದ ಯಾತ್ರೆ ನಡೆಸಿ ಕಾರ್ಯಕರ್ತರನ್ನ ಹುರಿದುಂಬಿಸಿದ್ರು. ಬಳಿಕ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಜಗದ್ಗುರುಗಳ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಶ್ರೀಗಳು ಸಚಿವೆ ಶೋಭಾಗೆ ಕೆಲ ಸಲಹೆಗಳನ್ನ ನೀಡಿದರು.
ಇನ್ನು ಇದೇ ವೇಳೆ ಮಾತಾನಾಡಿದ ಅವರು ರೈತರು ಸ್ವಾವಲಂಭಿಗಳಾಗಬೇಕು. ಕೃಷಿ ಉತ್ಪಾದನೆ ಹೆಚ್ಚಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ 6ವರ್ಷಗಳಿಂದ ರೈತಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದಲ್ಲಿ ತನಗೆ ಕೃಷಿ ಖಾತೆಯಂತಹ ಮಹತ್ವದ ಜವಬ್ದಾರಿಯನ್ನು ನೀಡಿದ್ದು ರೈತರು ಮತ್ತು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಪ್ರಾ ಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಕೃಷಿಕ್ಷೇತ್ರಕ್ಕೆ ನೀಡಿದ್ದಾರೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಸಂಶೋಧನೆ, ಬಿತ್ತನೆ ಜೀಜಗಳು, ಮಾರುಕಟ್ಟೆ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದೆ. ಆತ್ಮನಿರ್ಭರ, ಕಿಸಾನ್ ಸಮ್ಮಾನ್, ಫಸಲ್ಭೀಮಾ, ಕೃಷಿಸಿಂಚಾಯಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ರೈತರಿಗೆ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ: ಕುಕ್ಕೆ, ಧರ್ಮಸ್ಥಳ, ಕಟೀಲು: ಆಗಸ್ಟ್ 30 ರವರೆಗೆ ಸಾರ್ವಜನಿಕರಿಗೆ ಸಿಗುವುದಿಲ್ಲ ಯಾವುದೇ ಸೇವೆ
ದೇಶಾದ್ಯಂತ ಶೇ.85ರಷ್ಟು ಸಣ್ಣ ಮತ್ತು ಮಧ್ಯಮ ರೈತರು ಇದ್ದು ಕಿಸಾನ್ ಸಮ್ಮಾನ್ ಯೋಜನೆಯಡಿ 21ಕೋಟಿ ರೈತರ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ. ರೈತರ ಬೆಳೆಹಾನಿ, ವಿಮೆಗೆ ಸಂಬಂಧಿಸಿದಂತೆ ಬೆಳೆ ಸಮೀಕ್ಷೆಗೆ ರೈತರಿಗೆ ಅವಕಾಶ ನೀಡಿದ್ದು, ಕೋವಿಡ್ ಸಂದರ್ಭದಲ್ಲೂ ಕೃಷಿಕ್ಷೇತ್ರದಲ್ಲಿ ಶೇ.20ರಷ್ಟು ಜಿಡಿಪಿ ಹೆಚ್ಚಿದೆ ಎಂದು ಹೇಳಿದರು. ಆಹಾರ ಪದಾರ್ಥಗಳ ರಫ್ತಿನಲ್ಲಿ ಭಾರತ ದೇಶ 9ನೇ ಸ್ಥಾನದಲ್ಲಿದೆ. ಸಣ್ಣ ಮತ್ತು ಮಧ್ಯಮ ಕಾಫಿಬೆಳೆಗಾರರಿಗೆ ಹನಿನೀರಾವರಿಗೆ ಸಬ್ಸಿಡಿದರದಲ್ಲಿ ನೀಡಲು ತೀರ್ಮಾನಿ ಸಲಾಗಿದೆ. ರಾಜ್ಯದಲ್ಲಿ ತೆಂಗು ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ವಿದೇಶಗಳಿಗೆ ರಫ್ತು ಮಾಡಲು ಮುಂದಾಗುವುದಾಗಿ ತಿಳಿಸಿದ ಅವರು, ಕೃಷಿ ಉತ್ಪಾದಕ ಸಂಘ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ನಿಡಲಾಗುವುದು.
ಆಹಾರ ಸಂಸ್ಕರಣೆ ಘಟಕ, ಶೀತಸಂಗ್ರಹ ಘಟಕ ಸೇರಿದಂತೆ ಸಣ್ಣ ಮತ್ತು ಮಧ್ಯಮ ರೈತರಿಗೆ ಸಾಲಸೌಲಭ್ಯದ ಮೂಲಕ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗುವುದು ಎಂದರು. ತರೀಕೆರೆ ತಾಲ್ಲೂಕಿನ ಬಾವಿಕೆರೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಆರಂಭಕ್ಕೆ ಚಿಂತನೆ ನಡೆದಿದೆ. ಹೊಸಕೋಟೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ ಮಾಡಲು ಜಾಗ ಮೀಸಲಿರಿಸಲಾಗಿದೆ ಎಂದ ಅವರು ರೈತರ ಮತ್ತು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ದೇಶಾದ್ಯಂತ 10ಸಾವಿರ ಕೃಷಿ ಉತ್ಪಾದಕರ ಘಟಕಗಳನ್ನು ಮಾಡಲು ಸಂಕಲ್ಪ ಮಾಡ ಲಾಗಿದೆ. ಘಟಕದ ಮೂಲಕ ಸುಮಾರು 200-300 ಸಣ್ಣ, ಮಧ್ಯಮ ರೈತರ ಒಂದೊ ಂದು ಘಟಕ ಮಾಡಲಾಗುವುದು. ರೈತರ ಸ್ವಸಹಾಯಸಂಘ, ಸಹಕಾರಿ ಸಂಘಗಳಂತಹ ಚಟುವಟಿಕೆಗಳನ್ನು ಮಾಡಲು ಕೇಂದ್ರ ಸರ್ಕಾರ ಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯಡಿಯಲ್ಲಿ 1ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರ ಬಜೆಟ್ನಲ್ಲಿ ಮೀಸಲಿರಿಸಿದೆ ಎಂದು ತಿಳಿಸಿದರು.
ಅನುದಾನದಲ್ಲಿ ರೈತರಿಗೆ ವಿವಿಧ ಕೃಷಿ ಪೂರಕ ಉದ್ಯಮ ಕೋಲ್ಡ್ಸ್ಟೋರೇಜ್, ಗೋ ಡೋನ್, ಮಾರ್ಕೆಟ್, ಆಹಾರ ಉತ್ಪನ್ನ ತಯಾರಿಕೆಯಂತಹ ಚಟುವಟಿಕೆಗಳಿಗೆ ಸಾಲ ಹಾಗೂ ಸಬ್ಸಿಡಿ ನೀಡುವ ಯೋಜನೆಗೆ ಅನುದಾನ ಬಳಸಿಕೊಳ್ಳಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ