ಗಡಿಯಲ್ಲಿ ಶಿವಸೇನೆ ಉದ್ದಟತನ ; ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿ ಪುಂಡಾಟಿಕೆ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿ ರಾಜ್ಯ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಶಿವಸೇನೆ ತನ್ನ ಉದ್ದಟತನವನ್ನ ಪ್ರದರ್ಶನ ಮಾಡಿದೆ.

ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿದ ಶಿವಸೇನೆ

ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿದ ಶಿವಸೇನೆ

  • Share this:
ಚಿಕ್ಕೋಡಿ(ನವೆಂಬರ್​. 03): ಶಿವಸೇನೆ ಅಂದ್ರೆ ಹಾಗೆ ಸದಾ ಒಂದಿಲ್ಲೊಂದು ಕಿರಿಕ್ ಮಾಡುವ ಮೂಲಕ ರಾಜ್ಯದ ವಿರುದ್ದ ಕಿಡಿ ಕಾರುತ್ತಲೆ ಬರುತ್ತಿದೆ. ಏನಾದರೂ ಒಂದು ವಿಚಾರ ಮುಂದಿಟ್ಟುಕೊಂಡು ರಾಜ್ಯದ ವಿರುದ್ದ ಸದಾ ಖ್ಯಾತೆ ತೆಗೆಯುತ್ತಲೆ ಇರುವ ಶಿವಸೇನೆ ಇಷ್ಟು ದಿನ ಗಡಿ ವಿಚಾರದಲ್ಲಿ ಕಿರಿಕ್ ಮಾಡುತ್ತ ರಾಜ್ಯ ಸರ್ಕಾರದ ವಿರುದ್ದ ಮಾತನಾಡುತ್ತಿತ್ತು. ಈಗ ಡಿಸಿಎಂ ಲಕ್ಷ್ಮಣ ಸವದಿ ವಿರುದ್ದ ತನ್ನ ಪುಂಡಾಟಿಕೆ ಪ್ರದರ್ಶನ ಮಾಡಿದೆ. ಪ್ರತಿ ವರ್ಷವೂ ನವೆಂಬರ್ 1 ರಂದು ರಾಜ್ಯದಲ್ಲಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಬೆಳಗಾವಿ ರಾಜ್ಯೋತ್ಸವ ಅಂದ್ರೆ ಅದೊಂದು ಹಬ್ಬ ಇದ್ದ ಹಾಗೆ ರಾಜ್ಯದ ಮೂಲೆ ಮೂಲೆಯಿಂದ ಜನ ಬೆಳಗಾವಿಗೆ ಬಂದು ಕನ್ನಡದ ಹಬ್ಬದಲ್ಲಿ ಭಾಗವಹಿಸುತ್ತಾರೆ. ಆದರೆ, ಅದಕ್ಕೆ ವಿರುದ್ಧವಾಗಿ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆಯವರು ಕರಾಳ ದಿನ ಆಚರಣೆ ಮಾಡುತ್ತಾರೆ. ಆದರೆ, ಈ ಬಾರಿ ಕರಾಳ ದಿನ ಆಚರಣೆ ಮಾಡಲು ಜಿಲ್ಲಾಡಳಿತ ಪರವಾನಗಿ ನೀಡಿರಲಿಲ್ಲ.

ಇನ್ನು ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಹಾಕಲು ಡಿಸಿಎಂ ಲಕ್ಷ್ಮಣ ಸವದಿ ಅವರು ಶಿವಸೇನೆ ಹಾಗೂ ಎಂಇಎಸ್ ಗೆ ಖಡಕ ಎಚ್ಚರಿಕೆ ಕೊಟ್ಟಿದ್ದರು. ರಾಜ್ಯದ ನೆಲ ಜನ ವಿಚಾರದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆ ಬರಲ್ಲಾ. ಸೂರ್ಯ ಚಂದ್ರರು ಇರುವವರೆಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ಕರ್ನಾಟಕದ್ದೆ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಅದಕ್ಕೆ ಮಹತ್ವ ನೀಡುವ ಅವಶ್ಯಕತೆ ಇಲ್ಲಾ ಎಂದು ಹೇಳಿಕೆ ನೀಡಿದ್ದರು.

ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಬೆನ್ನಲ್ಲೆ ಅಂಡು ಸುಟ್ಟ ಬೆಕ್ಕಿನಂತೆ ಶಿವಸೇನೆ ರಾಜ್ಯದ ಗಡಿಯಲ್ಲಿ ನಿಂತು ಪುಂಡಾಟ ಮೇರೆದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕರ್ನಾಟಕ -ಮಹಾರಾಷ್ಟ್ರ ಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಅಲ್ಲದೆ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿ ರಾಜ್ಯ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತನ್ನ ಉದ್ದಟತನವನ್ನ ಪ್ರದರ್ಶನ ಮಾಡಿದೆ.

ಇನ್ನು ಪ್ರತಿಭಟನೆ ತಡೆಯಲು ಹೋದ ಮಹಾರಾಷ್ಟ್ರ ಪೊಲೀಸರೊಂದಿಗೂ ಸಹ ವಾಗ್ವಾದ ನಡೆಸಿ ಪುಂಡಾಟಿಕೆ ನಡೆಸಿದ್ದಾರೆ ಶಿವಸೇನೆ ಕಾರ್ಯಕರ್ತರು.

ಮರಾಠಿಗರಿಂದಲೆ ರಾಜ್ಯೋತ್ಸವ ಆಚರಣೆ

ಇನ್ನು ಒಂದೆಡೆ ಭಾಷಾಭಿಮಾನ ಇಟ್ಟು ತನ್ನ ಕೀಳು ರಾಜಕೀಯಕ್ಕೆ ಇಳಿದು ಶಿವಸೇನೆ ರಾಜ್ಯೋತ್ಸವವನ್ನ ವಿರೋಧಿಸಿದ್ರೆ ಇನ್ನೊಂದೆಡೆ ಮರಾಠಿಗರೆ ಮುಂದೆ ನಿಂತು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಭಾಷಾ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ : Murder: ಗ್ರಾಮ ಪಂಚಾಯತ್​ ಸದಸ್ಯನ ಬರ್ಬರ ಹತ್ಯೆ ; ಜಮೀನು ವಿವಾದ ಕೊಲೆಯಲ್ಲಿ ಅಂತ್ಯ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಮರಾಠಿಗರೆ ಮುಂದೆ ನಿಂತು ರಾಜ್ಯೋತ್ಸವ ಆಚರಣೆ ಮಾಡಿದ್ದಾರೆ. ಮಾಂಜರಿ ಗ್ರಾಮದ ಶಿವಾಜಿ ಚೌಕನಲ್ಲಿ ಮರಾಠಿಗರಿಂದ ತಾಯಿ ಭುವನೇಶ್ವರಿ ಪೋಟೋ ಇಟ್ಟು ಪೂಜೆ ಸಲ್ಲಿಸಿ ರಾಜ್ಯೋತ್ಸವ ಆಚರಣೆ ಮಾಡುವ ಮಾದರಿಯಾಗಿದ್ದಾರೆ.

ಒಟ್ಟಿನಲ್ಲಿ ಶಿವಸೇನೆ ಸದಾ ಒಂದಿಲ್ಲೊಂದು ವಿಚಾರದಲ್ಲಿ ಗಡಿ ಖ್ಯಾತೆ ತೆಗೆದು ತಂಟೆಗೆ ಮಾಡುತ್ತಲೆ ಇರುತ್ತದೆ. ಕೆಲ ಶಿವಸೇನೆ ಪುಂಡರು ಗಡಿಯಲ್ಲಿ ರಾಜ್ಯೋತ್ಸವ ವಿರೋಧ ಮಾಡಿದ್ರೆ ಅದೆ ಮರಾಠಿಗರು ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಭಾಷೆ ವಿಚಾರದಲ್ಲಿ ಕೀಳು ರಾಜಕೀಯ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದಾರೆ‌.
Published by:G Hareeshkumar
First published: