Shivaram Hebbar: ಕಾರ್ಮಿಕರಿಗೆ-ಕಾಯಕ ಸಮಾಜದವರಿಗೆ ಸಹಾಯ ಧನ ನೀಡಲು ವಿಳಂಬ ಬೇಡ; ಶಿವರಾಮ ಹೆಬ್ಬಾರ್ ಸೂಚನೆ
ಸರ್ಕಾರವು ಬಡವರಿಗೆಂದೇ ಘೋಷಿಸಿರುವ ಹಣವನ್ನು ನೀಡಲು ಅವರಿಗೆ ಹೆಚ್ಚು ನಿಬಂಧನೆಗಳನ್ನು ಹೇರಬಾರದು. ಹಾಗಾಗಿ ಅಗತ್ಯ ದಾಖಲೆಗಳನ್ನು ಮಾತ್ರ ಪಡೆದು ಪರಿಶೀಲನೆ ಮಾಡಿ ಮುಂದಿನ ಎರಡು ಮೂರು ದಿನಗಳಲ್ಲಿ ಸಹಾಯಧನ ಲಭ್ಯವಾಗುವಂತೆ ಮಾಡಿ ಎಂದು ಸಚಿವ ಶಿವರಾಮ್ ಹೆಬ್ಬಾರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಹಾಸನ ; ಕೋವಿಡ್-19 ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅಗಸ ಮತ್ತು ಕ್ಷೌರಿಕ ವೃತ್ತಿಯನ್ನು ಮಾಡುವವರಿಗೆ ಘೋಷಿಸಿರುವ ಸಹಾಯ ಧನವನ್ನು ವಿಳಂಬ ಮಾಡದೆ, ಆದಷ್ಟು ಬೇಗ ಫಲಾನುಭವಿಗಳಿಗೆ ತಲುಪಿಸುವಂತೆ ಕಾರ್ಮಿಕ ಮತ್ತು ಸಕ್ಕರೆ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಡನೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, "ಸರ್ಕಾರವು ಬಡವರಿಗೆಂದೇ ಘೋಷಿಸಿರುವ ಹಣವನ್ನು ನೀಡಲು ಅವರಿಗೆ ಹೆಚ್ಚು ನಿಬಂಧನೆಗಳನ್ನು ಹೇರಬಾರದು. ಹಾಗಾಗಿ ಅಗತ್ಯ ದಾಖಲೆಗಳನ್ನು ಮಾತ್ರ ಪಡೆದು ಪರಿಶೀಲನೆ ಮಾಡಿ ಮುಂದಿನ ಎರಡು ಮೂರು ದಿನಗಳಲ್ಲಿ ಸಹಾಯಧನ ಲಭ್ಯವಾಗುವಂತೆ ಮಾಡಿ.
ಜಿಲ್ಲೆಯಲ್ಲಿ ಒಟ್ಟು 2,630 ಜನ ಈಗಾಗಲೇ ಸಹಾಯಧನ ಪಡೆಯಲು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 34,000 ಫಲಾನುಭವಿಗಳಿಗೆ 18 ಕೋಟಿ ರೂ.ಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಎಲ್ಲಾ ಅರ್ಹರಿಗೆ ಸಹಾಯಧನ ತಲುಪಿಸಲು ಕ್ರಮವಹಿಸಬೇಕು" ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
"ರಾಜ್ಯದಲ್ಲಿ ಇನ್ನು ಅನೇಕ ಕಾರ್ಮಿಕರು ಆರ್ಥಿಕ ಸಂಕಷ್ಟವನ್ನು ಎದರಿಸುತ್ತಿದ್ದಾರೆ. ಮನೆ ಕೆಲಸ, ಗಾರ್ಮೆಂಟ್ಗಳಲ್ಲಿ ದುಡಿಯುವ ಸುಮಾರು 20 ಲಕ್ಷ ಹೆಣ್ಣುಮಕ್ಕಳು ಇಂದು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಅನೇಕ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ಅನುಕೂಲ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಯವರು ಕಾರ್ಮಿಕರಿಗೆಂದು ಮೀಸಲಿರುವ ಹಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಗಂಭೀರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ" ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
"ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ವಾಹನ ಚಾಲಕರಿಗೆ ಪ್ರತ್ಯೇಕ ಮಂಡಳಿಗಳನ್ನು ಮಾಡಿ ಇಂಧನದಿಂದ ಬರುವ ತೆರಿಗೆಯಲ್ಲಿ ಶೇ.1 ರಷ್ಟು ಹಣವನ್ನು ನೇರವಾಗಿ ಮಂಡಳಿಗೆ ಸೇರುವಂತೆ ಮಾಡಿ ವಾಹನ ಚಾಲಕರಿಗೆ ಹಾಗೂ ಅವರ ಕುಟುಂಬಕ್ಕೆ ತುರ್ತು ಪರಿಸ್ಥಿತಿಯಲ್ಲಿ ಧನಸಹಾಯ ದೊರೆಯುವಂತೆ ಮಾಡುವ ಚಿಂತನೆ ಇದ್ದು, ಇದರಿಂದ ಅವರಿಗೆ ಭವಿಷ್ಯದಲ್ಲಿ ತುಂಬಾ ಅನುಕೂಲವಾಗಲಿದೆ" ಎಂದು ಅವರು ತಿಳಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ