‘ಶ್ರೀದೇವಿ’ ಕರ್ಮಕಾಂಡ; 15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದರೆ ಸಿಡಿ ಬಿಡುಗಡೆ – ಮಾಜಿ ಸಚಿವ ಎಚ್ಚರಿಕೆ

ಕೊಪ್ಪಳದಲ್ಲಿ ಮಟ್ಕಾ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಶ್ರೀದೇವಿ ಮಟ್ಕಾ ದಂಧೆಯಂತೂ ಎಗ್ಗಿಲ್ಲದೇ ನಡೆಯುತ್ತಿದೆ. ಇದಕ್ಕೆ ಪೊಲೀಸರ ಕುಮ್ಮಕ್ಕೂ ಇದೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪಿಸಿದ್ದಾರೆ.

ಕೊಪ್ಪಳ ಎಸ್​ಪಿ ಜೊತೆ ಶಿವರಾಜ್ ತಂಗಡಗಿ

ಕೊಪ್ಪಳ ಎಸ್​ಪಿ ಜೊತೆ ಶಿವರಾಜ್ ತಂಗಡಗಿ

  • Share this:
ಕೊಪ್ಪಳ: ಜಿಲ್ಲೆಯ ರೋಚಕ ಕ್ಷೇತ್ರ ಕನಕಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಜಿದ್ದಾಜಿದ್ದಿ ತಾರಕಕ್ಕೇರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಟ್ರ್ಯಾಕ್ಟರ್‌ ರ‌್ಯಾಲಿ ಮಾಡಿದರೆ, ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಸಹ ಭಾರೀ‌ ಪ್ರಮಾಣದ ರ‌್ಯಾಲಿ‌ ನಡೆಸಿತು. ಈ ನಡುವೆ ಶ್ರೀದೇವಿ ಹೆಸರಿನ‌ ಮಟಕಾ ದಂಧೆ ಕುರಿತು ದೊಡ್ಡ ಚರ್ಚೆಯೇ ಶುರುವಾಗಿದೆ.

ಜಿಲ್ಲೆಯಲ್ಲಿ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ‘ನಾನಾ’ ಹೆಸರಿನಲ್ಲಿ‌ ಮಟಕಾ ಆಡಿದರೆ ಪೊಲೀಸ್ ಅತಿಥಿಯಾಗುವುದು‌ ನಿಶ್ಚಿತ. ಆದರೆ ‘ಶ್ರೀದೇವಿ’ ಹೆಸರಿನ ಮಟಕಾ ಆಡಿದರೆ ಯಾವ ಪೊಲೀಸರು ಏನೂ ಮಾಡಲ್ವಂತೆ...? - ಹೀಗಂತ ದೂರು ನೀಡಿದ್ದು ಮಾಜಿ ಸಚಿವ ಶಿವರಾಜ ತಂಗಡಗಿ. ಶ್ರೀದೇವಿ ಹೆಸರಿನಲ್ಲಿ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ಆಡಿಸುತ್ತಿದ್ದಾರೆ. ಇದು ಶೇಕಡಾ ನೂರರಷ್ಟು ಸತ್ಯ. ಮೊದಲ ಹಂತವಾಗಿ ದೂರು ದಾಖಲಿಸುತ್ತಿದ್ದೇವೆ. ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿಯವರು ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಟಿ.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ಮಟಕಾ ದಂಧೆ, ಮರಳು ಅಕ್ರಮ ನಾನು ಮಂತ್ರಿಯಾದಾಗಲೂ ಕನಕಗಿರಿ ಕ್ಷೇತ್ರದಲ್ಲಿ ಇತ್ತು. ಸಾಧ್ಯವಾದಷ್ಟೂ ಅಕ್ರಮ ನಿಯಂತ್ರಣಕ್ಕೆ ಶ್ರಮಿಸಿದ್ದೇನೆ. ಈಗ ನನ್ನ ಕ್ಷೇತ್ರದಲ್ಲೇ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ದಂಧೆ ನಡೆಸಲು ಕುಮ್ಮಕ್ಕು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ರಾಸಲೀಲೆ ವಿಡಿಯೋ ರಿಲೀಸ್; ಅಜ್ಞಾತ ಸ್ಥಳದಿಂದಲೇ ರಮೇಶ್ ಜಾರಕಿಹೊಳಿ ಕಾನೂನು ಹೋರಾಟಕ್ಕೆ ಸಜ್ಜು

ಸತ್ಯಾಂಶ ಇಲ್ಲದ, ಸಮರ್ಪಕ ಸಾಕ್ಷಿಗಳಲ್ಲದ ಯಾವ ಸಂಗತಿಯ ಬೆನ್ನ ಹಿಂದೆ ಬೀಳಲ್ಲ. ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ತನಿಖೆ ಸರಿಯಾಗಿದ್ದರೆ ತಪ್ಪಿತಸ್ಥರು ಖಂಡಿತವಾಗಿ ಬಲೆಗೆ ಬೀಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತಂಗಡಗಿ, ಒಂದೊಮ್ಮೆ ಈ ಪ್ರಕರಣದ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು ಉದಾಸೀನ ಮಾಡಿದರೆ ಶ್ರೀದೇವಿ ಹೆಸರಿನ ಮಟಕಾ ದಂಧೆಗೆ ಪೊಲೀಸ್ ಅಧಿಕಾರಿ ಕುಮ್ಮಕ್ಕು ನೀಡುತ್ತಿರುವ ಆಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ಆನಂತರ ಬೀದಿಗಿಳಿದು ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಅಧಿವೇಶನದಲ್ಲೂ ನಮ್ಮ ಪಕ್ಷದ ಮುಖಂಡರು ಚರ್ಚಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ನಿರ್ದಾಕ್ಷಿಣ್ಯ ಕ್ರಮ:

"ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಸುಮಾರು 21 ಜನರನ್ನು ಗಡಿ ಪಾರು ಮಾಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿದ್ದು, ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕಡೂರು ತಹಶೀಲ್ದಾರ್ ವಿರುದ್ಧ ಭೂ ಕಬಳಿಕೆ ಆರೋಪ; ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯರ ಒತ್ತಾಯ

ಹ.... ದುಡ್ಡಿನಿಂದ ಬಿಜೆಪಿ ಅಧಿಕಾರಕ್ಕೆ:

"ಕನಕಗಿರಿ ಕ್ಷೇತ್ರದಲ್ಲೇ ಅಕ್ರಮಗಳು ಹೆಚ್ಚುತ್ತಿವೆ. ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಹ... ದುಡ್ಡಿನಿಂದ. ನಮ್ಮ ಪಕ್ಷದಲ್ಲಿ ಶಾಸಕ, ಸಚಿವರಾಗಿದ್ದವರು ಬಿಜೆಪಿ ಜೊತೆ ಕೈ ಜೋಡಿಸಿದ್ದು ಹ.... ದುಡ್ಡಿಗಾಗಿ" ಎಂದು ಶಿವರಾಜ್ ತಂಗಡಗಿ ಟೀಕಿಸಿದರು.

ವರದಿ: ಬಸವರಾಜ್ ಕರುಗಲ್
Published by:Vijayasarthy SN
First published: