ಶಿವಮೊಗ್ಗ(ಆಗಸ್ಟ್ 06): ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ. ಒಂದೇ ದಿನದಲ್ಲಿ ಲಿಂಗನಮಕ್ಕಿ ಅಣೆಕಟ್ಟಿಗೆ ಎರಡುವರೆ ಅಡಿ ನೀರು ಹರಿದು ಬಂದಿದೆ. ತುಂಗಾ ನದಿ ಮೈದುಂಬಿ ಹರಿಯುತ್ತಿದೆ. 58 ಸಾವಿರ ಕ್ಯೂಸೆಕ್ ನೀರು ತುಂಗಾ ನದಿಗೆ ಹರಿ ಬಿಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆ, ಹೊಸನಗರ ತಾಲೂಕಿನ ಹುಲಿಕಲ್, ಮಾಣಿ, ಮಾಸ್ತಿಕಟ್ಟೆಯಲ್ಲಿ, ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ನದಿಗಳಿಗೆ ಜೀವ ಕಳೆ ಬಂದಿದೆ. ತುಂಗಾ, ಶರಾವತಿ, ಕುಮದ್ವತಿ, ಮಾಲತಿ, ವರದಾ ನದಿಗಳು ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ತುಂಗಾ ನದಿ ತುಂಬಿ ಹರಿಯುತ್ತಿದೆ.
ಗಾಜನೂರು ಅಣೆಕಟ್ಟು ಈಗಾಗಲೇ ಭರ್ತಿಯಾಗಿದ್ದು, 58 ಸಾವಿರ ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಬಿಡಲಾಗಿದೆ. ಹೊಸನಗರ ತಾಲೂಕಿನ ಎಲ್ಲಾ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ಲಿಂಗನಮಕ್ಕಿ ಅಣೆಕಟ್ಟಿಗೆ ಒಂದೇ ದಿನದಲ್ಲಿ ಎರಡುವರೆ ಅಡಿ ನೀರು ಹರಿದು ಬಂದರೆ, ಭದ್ರಾ ಅಣೆಕಟ್ಟಿನಲ್ಲಿ ಕಳೆದ 24 ಗಂಟೆಯಲ್ಲಿ ಎರಡು ಅಡಿ ನೀರು ಏರಿಕೆಯಾಗಿದೆ.
ತಾಲೂಕುವಾರು ಮಳೆ ಪ್ರಮಾಣ ಇಂತಿದೆ
ಶಿವಮೊಗ್ಗ - 44.60 ಮೀಲಿ ಮೀಟರ್. ಭದ್ರಾವತಿ - 35.60 ಮೀಲಿ ಮೀಟರ್. ತೀರ್ಥಹಳ್ಳಿ- 191.60 ಮೀಲಿ ಮೀಟರ್, ಸಾಗರ - 64.08 ಮೀಲಿ ಮೀಟರ್, ಶಿಕಾರಿಪುರ - 34.60 ಮೀಲಿ ಮೀಟರ್, ಸೊರಬ- 86.20 ಮೀಲಿ ಮೀಟರ್ , ಹೊಸನಗರ ತಾಲೂಕಿನಲ್ಲಿ 218.20 ಮೀಲಿ ಮೀಟರ್ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ.
ಇನ್ನು ಹುಲಿಕಲ್ ಘಾಟಿ ಪ್ರದೇಶದಲ್ಲಿ 332 ಮಿಲಿ ಮೀಟರ್ ಮಳೆಯಾದರೆ, ಮಾಸ್ತಿಕಟ್ಟೆಯಲ್ಲಿ 300, ಯಡೂರಿನಲ್ಲಿ 315 , ಮಾಣಿ ಪ್ರದೇಶದಲ್ಲಿ 269 ಮಿಲಿ ಮೀಟರ್ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 96.41 ಮೀಲಿ ಮೀಟರ್ ಕಳೆದ 24 ಗಂಟೆಯಲ್ಲಿ ಸುರಿದಿದೆ.
ಇದನ್ನೂ ಓದಿ :
Belagavi Rain : ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರ ಮಳೆ : ತುಂಬಿ ಹರಿಯುತ್ತಿರುವ ನದಿ, ಹಳ್ಳಗಳು, ಭತ್ತದ ಬೆಳೆ ನಾಶ..!
ಈಗಾಗಲೇ ತುಂಗಾ ಅಣೆಕಟ್ಟು ಭರ್ತಿಯಾಗಿದೆ. 22 ಗೇಟುಗಳ ಮುಖಾಂತರ ನದಿಗೆ 58 ಸಾವಿರ ಕ್ಯೂಸೆಕ್ಸ್ ನೀರು ಹರಿ ಬಿಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಮಳೆಯಾಗುತ್ತಿದ್ದು, ಭದ್ರಾ ಅಣೆಕಟ್ಟಿನ ಒಳ ಹರಿವು ಅಧಿಕಾವಾಗಿದೆ.
ಇನ್ನು ಗಾಳಿ ಮಳೆಗೆ ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಕ್ಕಿ ಬುಲ್ಡೋಜರ್ ಬಳಿ ಮನೆ ಮೇಲೆ ಮರವೊಂದು ಬಿದ್ದಿದೆ. ಕೂಲಿ ಕಾರ್ಮಿಕ ಶಂಕರ ಬಂಡಾರಿಗೆ ಸೇರಿದ ಮನೆ ಮೇಲೆ ಮರ ಬಿದ್ದಿದ್ದು, ಮನೆ ಸಂಪೂರ್ಣವಾಗಿ ಜಖಂ ಗೊಂಡಿದೆ. ಉತ್ತಮ ಮಳೆಯ ಹಿನ್ನೆಲೆಯಲ್ಲಿ ರೈತಾಪಿ ವರ್ಗದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ