ರಾಜ್ಯದ ಹಲವು ಕಾರಾಗೃಹಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ; ಶಿವಮೊಗ್ಗ ಕಾರಾಗೃಹ ಮಾತ್ರ ಕೊರೋನಾ ಮುಕ್ತ

ಸ್ಯಾನಿಟೈಸರ್ ಟನಲ್ ಯಂತ್ರ ಅಳವಡಿಸುವ ಮೂಲಕ ಶಿವಮೊಗ್ಗದ ಕಾರಾಗೃಹದಲ್ಲಿರುವ ಸಜಾ ಬಂಧಿಗಳಿಗೆ ಕೊರೋನಾ ಹರಡದಂತೆ ಸುರಕ್ಷತೆ ಮಾಡಲಾಗಿದೆ.

ಸ್ಯಾನಿಟೈಸರ್ ಟನಲ್

ಸ್ಯಾನಿಟೈಸರ್ ಟನಲ್

  • Share this:
ಶಿವಮೊಗ್ಗ(ಜುಲೈ.08): ರಾಜ್ಯದ ಹಲವಾರು ಕಾರಾಗೃಹಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಶಿವಮೊಗ್ಗದ ಈ ಕಾರಾಗೃಹದಲ್ಲಿ ಮಾತ್ರ ಇದುವರೆಗೂ ಕೊರೋನಾ ಮುಕ್ತವಾಗಿದೆ. ಕೊರೋನಾ ಬರದಂತೆ ತಡೆಗಟ್ಟಲು ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದೀಗ ಈ ಕಾರಾಗೃಹದಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿದ್ದು, ಇದು ರಾಜ್ಯದಲ್ಲೇ  ಜೈಲಿನಲ್ಲಿ ಅಳವಡಿಸಿರುವ ಪ್ರಥಮ ನ್ಯಾನಿಟೈಸರ್ ಟನಲ್ ಆಗಿದೆ.

ರಾಜ್ಯದಲ್ಲಿ ಅತ್ಯಂತ ವಿಶೇಷತೆ ಹೊಂದಿರುವ ಜೈಲು ಇದು. ಇಲ್ಲಿ ಬಂದು ನಿಂತರೆ ಸಾಕು ಸ್ವಚ್ಛಂದ ಗಾಳಿ, ಉತ್ತಮ ಪರಿಸರ, ಸುಂದರವಾದ ಪಾರ್ಕ್, ಕಣ್ಮನ ಸೆಳೆಯುತ್ತೆ. ಕೊರಿಯನ್ ಮಾದರಿಯಲ್ಲಿ ಕಟ್ಟಲಾದ ಜೈಲು ಇದು. ಹಲವು ವಿಶೇಷತೆಗಳನ್ನು ಈ ಜೈಲು ಹೊಂದಿದೆ. ಈ ಕೊರೋನಾ ಎಂಬ ಮಹಾಮಾರಿ ಜೈಲನ್ನು ಬಿಟ್ಟಿಲ್ಲ. ಅಲ್ಲಿಗೂ ತನ್ನ ಕದಂಬ ಬಾಹು ಚಾಚಿದೆ. ರಾಜ್ಯದ ಹಲವು ಜೈಲುಗಳಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಶಿವಮೊಗ್ಗ ಓತಿಘಟ್ಟದ ಬಳಿ ಇರುವ ಜೈಲಿನಲ್ಲಿ ಈಗ ಸ್ಯಾನಿಟೈಸರ್ ಮಾಡುವ ಟನಲ್ ಅಳವಡಿಸಲಾಗಿದೆ.

1 ಲಕ್ಷದ 2 ಸಾವಿರ ರೂ. ವೆಚ್ಚದಲ್ಲಿ, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಮೂಲಕ ಈ ಯಂತ್ರ ಅಳವಡಿಸಲಾಗಿದೆ. ಇದು ರಾಜ್ಯದಲ್ಲಿಯೇ ಜೈಲಿನಲ್ಲಿ ಅಳವಡಿಸಿರುವ ಪ್ರಥಮ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಟನಲ್ ಆಗಿದೆ. ಎಲ್ಲೆಡೆ ಕೊರೋನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ಈ ಕಾರಾಗೃಹದಲ್ಲಿ ಕೊರೋನಾ ಸೋಂಕು ಹರಡಬಾರದೆಂಬ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಿ ಈ ಯಂತ್ರ ಅಳವಡಿಸಲಾಗಿದೆ.

ಇದನ್ನೂ ಓದಿ : ಕಿಮ್ಸ್ ಯಡವಟ್ಟು; ಅಂತ್ಯಸಂಸ್ಕಾರದ ನಂತರ ಬಯಲಾಯಿತು ಸೋಂಕು ವಿಚಾರ; ಗುತ್ತಲ ಜನರು ಕಂಗಾಲು

ಈ ಸ್ಯಾನಿಟೈಸರ್ ಟನಲ್ ಯಂತ್ರದೊಳಗೆ ವ್ಯಕ್ತಿಯೊಬ್ಬರು ಹೋಗಿ ನಿಂತರೆ ಸಾಕು, ಮೂರು ಪೈಪ್ ಗಳಲ್ಲಿ, ಸ್ಪಿಂಕ್ಲರ್ ಮೂಲಕ ಇಡೀ ದೇಹವನ್ನು ಸ್ಯಾನಿಟೈಸರ್ ಮಾಡುತ್ತದೆ ಈ ಯಂತ್ರ. ಅದರಲ್ಲೂ, ಬಯೋ ಆರ್ಗ್ಯಾನಿಕ್ ಸ್ಯಾನಿಟೈಸರ್ ಮೂಲಕ ದೇಹವನ್ನೆಲ್ಲಾ ಸಿಂಪಡಣೆ ಮಾಡಿದರೂ ಕೂಡ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸ್ಯಾನಿಟೈಸರ್ ಅನ್ನು ಈ ಯಂತ್ರದಲ್ಲಿ ಅಳವಡಿಸಲಾಗಿದೆ. ಬಂಧಿಖಾನೆಯ ಸಿಬ್ಭಂಧಿಗಳು, ಅಧಿಕಾರಿಗಳು, ಸಜಾಬಂಧಿಗಳು ಸೇರಿದಂತೆ, ಯಾರೇ ಹೊರಗಿನಿಂದ ಬಂದರೂ ಕೂಡ ಈ ಟನಲ್ ನಿಂದಲೇ, ಕಾರಾಗೃಹದ ಒಳ ಪ್ರವೇಶಿಸಬೇಕು. ಹೀಗಾಗಿ, ಪ್ರತಿಯೊಬ್ಬ ಸಿಬ್ಭಂಧಿಗಳು, ಸಜಾ ಬಂಧಿಗಳು, ಸ್ಯಾನಿಟೈಸರ್ ಆಗುವುದರಿಂದ, ಈ ಕಾರಾಗೃಹದಲ್ಲಿ ಕೊರೊನಾ ಸೋಂಕು ಹರಡುವ ಮಾತು ದೂರವಾಗಿದೆ.

 

ಶಿವಮೊಗ್ಗ ನಗರದಿಂದ 15 ಕಿ.ಮೀ. ದೂರವಿರುವ, ಕಾರಾಗೃಹದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಕೇಸುಗಳು ಪತ್ತೆಯಾಗಿಲ್ಲ. ಸುಮಾರು 520 ಕ್ಕೂ ಹೆಚ್ಚು ಜನ ಈ ಜೈಲಿನಲ್ಲಿ ಇದ್ದಾರೆ. ಇಲ್ಲಿನ ಅಧಿಕಾರಿಗಳ ಆಸಕ್ತಿಯಿಂದಾಗಿ,  ಸ್ಯಾನಿಟೈಸರ್ ಟನಲ್ ಯಂತ್ರ ಅಳವಡಿಸುವ ಮೂಲಕ ಇಲ್ಲಿ ಸಜಾ ಬಂಧಿಗಳಿಗೆ ಕೊರೋನಾ ಹರಡದಂತೆ ಸುರಕ್ಷತೆ ಮಾಡಲಾಗಿದೆ.
Published by:G Hareeshkumar
First published: