ಈ ವರ್ಷವೂ ಅತಿವೃಷ್ಟಿಯಾದರೆ ಎದುರಿಸಲು ಶಿವಮೊಗ್ಗ ಜಿಲ್ಲಾಡಳಿತ ಸಜ್ಜು

ಜಿಲ್ಲಾಡಳಿತದ ವತಿಯಿಂದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ 6 ಬೋಟುಗಳು, 25 ರಕ್ಷಣಾ ಕವಚಗಳು, ಮುರಿದು ಬೀಳುವ ಮರಗಳನ್ನು ತೆರವುಗೊಳಿಸಲು 50 ಟ್ರೀ ಕಟ್ಟರ್​ಗಳನ್ನು ನೀಡಲಾಗಿದೆ.

ನಿಧಿಗೆ ಕೆರೆಯಲ್ಲಿ ರಕ್ಷಣಾ ಕಾರ್ಯಾಚರಣೆಯ ತರಬೇತಿ

ನಿಧಿಗೆ ಕೆರೆಯಲ್ಲಿ ರಕ್ಷಣಾ ಕಾರ್ಯಾಚರಣೆಯ ತರಬೇತಿ

  • Share this:
ಶಿವಮೊಗ್ಗ(ಜೂನ್ 03): ಕಳೆದ ವರ್ಷದ ಮುಂಗಾರು ಅವಧಿಯಲ್ಲಿ ಉಂಟಾಗಿದ್ದ ಅತಿವೃಷ್ಟಿ ಹಿನ್ನೆಲೆಯಲ್ಲಿ, ಈ ಬಾರಿ ಮೊದಲೇ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಜಿಲ್ಲಾಡಳಿತದ ಬಳಿ ಲಭ್ಯವಿರುವ ಬೋಟು, ರಕ್ಷಣಾ ಕವಚಗಳು ಇತ್ಯಾದಿ ಎಲ್ಲಾ ಸಾಧನ ಸಲಕರಣೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡಿಕೊಳ್ಳುತ್ತಿದ್ದಾರೆ. ಅವುಗಳ ದುರಸ್ತಿ ಕಾರ್ಯ ಇದ್ದರೆ, ಅದನ್ನು ಮಾಡಿಕೊಳ್ಳಲಾಗುತ್ತಿದೆ.

ಅತಿವೃಷ್ಟಿಯಿಂದ ಹಾನಿಗೀಡಾಗಬಹುದಾದ ಗ್ರಾಮಗಳನ್ನು ಈಗಲೇ ಗುರುತಿಸುವ ಕೆಲಸ ಆಗುತ್ತಿದೆ. ತಾಲೂಕಿನಲ್ಲಿ ಲಭ್ಯವಿರುವ ರಕ್ಷಣಾ ಸಾಮಾಗ್ರಿ, ಸಲಕರಣೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಮಳೆಗೆ ಸುಲಭವಾಗಿ ಕುಸಿಯಬಹುದಾದ ಮನೆ, ಕಟ್ಟಡಗಳನ್ನು ಗುರುತಿಸಿ ಅವುಗಳ ತೆರವು ಅಥವಾ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವು ತನ್ನ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.

ಜಿಲ್ಲಾಡಳಿತದ ವತಿಯಿಂದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ 6 ಬೋಟುಗಳು, 25 ರಕ್ಷಣಾ ಕವಚಗಳು, ಮುರಿದು ಬೀಳುವ ಮರಗಳನ್ನು ತೆರವುಗೊಳಿಸಲು 50 ಟ್ರೀ ಕಟ್ಟರ್​ಗಳನ್ನು ನೀಡಲಾಗಿದೆ. ಇದರೊಂದಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಹಲವಾರು ಸಾಹಸಿ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಎಲ್ಲರ ಸಹಕಾರವನ್ನು ಪಡೆಯಬೇಕು. ಇದಕ್ಕಾಗಿ ಅಂತಹ ಸಂಘಸಂಸ್ಥೆಗಳ ವಿವರ, ಅವರಲ್ಲಿ ಲಭ್ಯವಿರುವ ರಕ್ಷಣಾ ಸಲಕರಣೆಗಳ ವಿವರಗಳನ್ನು ಪಟ್ಟಿ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ.

ಇದನ್ನೂ ಓದಿ: ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಗರ್ಭಪಾತ ಆಗುತ್ತಿರುವುದೇಕೆ? ವೈದ್ಯರು ಏನ್ ಹೇಳ್ತಾರೆ?

ನೆರೆ ನೀರು ಸುಲಭವಾಗಿ ನುಗ್ಗಬಹುದಾದ ತಗ್ಗು ಪ್ರದೇಶದಲ್ಲಿರುವ ಜನರಿಗೆ ಈಗಲೇ ಎಚ್ಚರಿಸಲಾಗುತ್ತಿದೆ. ಒಂದು ವೇಳೆ ಜನರನ್ನು ತುರ್ತಾಗಿ ಸ್ಥಳಾಂತರಿಸುವ ಸಂದರ್ಭ ಬಂದರೆ ಅವರಿಗೆ ತಾತ್ಕಾಲಿಕ ಪುನರ್ವಸತಿಗಾಗಿ ಎಲ್ಲಾ ತಾಲೂಕುಗಳಲ್ಲಿ ಈಗಲೇ ಗುರುತಿಸಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಗಾಳಿ ಮಳೆಗೆ ಉರುಳಿ ಬೀಳುವ ವಿದ್ಯುತ್ ಕಂಬಗಳನ್ನು ತಕ್ಷಣ ದುರಸ್ತಿ ಮಾಡಲು ಸಿದ್ದತೆಯಾಗುತ್ತಿದೆ. ಇದಕ್ಕಾಗಿ ಅಗತ್ಯ ಪ್ರಮಾಣದ ವಿದ್ಯುತ್ ಕಂಬಗಳು, ಟ್ರಾನ್ಸ್​ಫಾರ್ಮರ್​ಗಳು, ತಂತಿಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ. ಮಳೆಯಿಂದ ಸಾವು ನೋವುಗಳು ಸಂಭವಿಸದಂತೆ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳು ಮಾಡಿಕೊಳ್ಳುತ್ತಿವೆ.

ಅತಿವೃಷ್ಟಿ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ನಿಧಿಗೆ ಕೆರೆಯಲ್ಲಿ ತರಬೇತಿ ಶಿಬಿರ ಸಹ ನಡೆಸಲಾಗುತ್ತಿದೆ.

First published: