ಶಿವನ ದೇಗುಲದ ಸುತ್ತಮುತ್ತಲ ಮನೆಗಳಲ್ಲಿ ಬಿಲ್ವಪತ್ರೆ ಗಿಡ ನೆಟ್ಟ ದೇವಸ್ಥಾನದವರು.. ಇದರ ಹಿಂದಿನ ಕಾರಣವೇನು?

 ಈಗಾಗಲೇ ನಗರ ಮತ್ತು ಪುತ್ತೂರು ಆಸುಪಾಸಿನಲ್ಲಿ ಐದು ಸಾವಿರಕ್ಕೂ‌ ಮಿಕ್ಕಿದ ಮನೆಗಳಿಗೆ ಗಿಡ ವಿತರಣೆ ಮಾಡಲಾಗಿದೆ. ಪುತ್ತೂರು ನಗರಸಭೆಯ 31 ವಾರ್ಡ್‌ ಗಳಿಗೆ ತೆರಳಿ ಗಿಡ ವಿತರಣೆಗೆಂದು ಪ್ರಥಮ ಹಂತದಲ್ಲಿ 2,000 ಗಿಡಗಳನ್ನು ಸಂಗ್ರಹಿಸಿಡಲಾಗಿದೆ.

ಬಿಲ್ವಪತ್ರೆ ಗಿಡ ವಿತರಣೆ

ಬಿಲ್ವಪತ್ರೆ ಗಿಡ ವಿತರಣೆ

  • Share this:
ದಕ್ಷಿಣಕನ್ನಡ : ಇತಿಹಾಸ ಪ್ರಸಿದ್ಧ ಶಿವ ಕ್ಷೇತ್ರವಾದ ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಹಾಗೂ ಪುತ್ತೂರು ನಗರಸಭೆ ಜಂಟಿಯಾಗಿ ಬಿಲ್ವ ಗಿಡ ವಿತರಣೆ ಎಂಬ ವಿಶಿಷ್ಟ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ಮುಖ್ಯವಾಗಿ ಬಿಲ್ವ ಪತ್ರೆ ಶಿವ ದೇವಾಲಯಗಳಲ್ಲಿ ಪೂಜೆಗೆ ಆವಶ್ಯ. ದೂರದ ಊರುಗಳಿಂದ ಬಿಲ್ವ ಪತ್ರೆ ತರುವುದಕ್ಕಿಂತ ದೇಗುಲ ವ್ಯಾಪ್ತಿಯ ಭಕ್ತರ ಮನೆ ವಠಾರದಿಂದ ಬಿಲ್ವಪತ್ರೆ ಸಿಕ್ಕರೆ ಉತ್ಸವ ಸಂದರ್ಭದಲ್ಲಿ ದೇವರಿಗೆ ಅರ್ಪಿಸಲು ಸಹಕಾರಿ ಎನ್ನುವ ಮುಂದಾಲೋಚನೆಯಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಈ ಅಭಿಯಾನಕ್ಕೆ ಮುಂದಡಿ ಇಟ್ಟಿದೆ. ಧಾರ್ಮಿಕದ ಜತೆಗೆ ಬಿಲ್ವ ಪತ್ರೆಯಿಂದ ಪರಿಸರದ ಮೇಲಾಗುವ ಅನೇಕ ಲಾಭಗಳ ಬಗ್ಗೆಯು ಚಿಂತಿಸಿ ಈ ವಿಶಿಷ್ಟ ಕಾರ್ಯಕ್ಕೆ ಹೆಜ್ಜೆ ಇಡಲಾಗಿದೆ.

ಅಶ್ವತ್ಥ ಗಿಡದ ಹಾಗೆ ಬಿಲ್ವ ಪತ್ರೆ ಗಿಡವು ಅತಿ ಹೆಚ್ಚು ಆಕ್ಸಿಜೆನ್ ಅನ್ನು ಪರಿಸರಕ್ಕೆ ಪೂರೈಸುತ್ತದೆ. ಪ್ರತಿ ಮನೆಯಲ್ಲಿಯೂ ಶುದ್ಧ ಆಮ್ಲಜನಕದ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಇದೊಂದು ಪೂರಕ ಪ್ರಕ್ರಿಯೆ ಆಗಬಹುದು ಎನ್ನುವ ನಿರೀಕ್ಷೆ ಕೂಡ ಹೊಂದಲಾಗಿದೆ. ಬಿಲ್ವ ಪತ್ರೆಯು ಔಷಧೀಯ ಗುಣಗಳನ್ನು ಹೊಂದಿದ್ದು ಇದರ ಹಣ್ಣಿನಿಂದ ಸ್ವಾದಿಷ್ಟ ಪೇಯ ತಯಾರಿಸಬಹುದು. ಹಣ್ಣಿನ ಹೊರಭಾಗವನ್ನು ದೇವರ ಪ್ರಸಾದ ಸಂಗ್ರಹಿಸಿಡಲು ಬಳಸಬಹುದು. ಇಂತಹ ಹಲವು ಬಹುಪಯೋಗಿ ಲೆಕ್ಕಚಾರವು ಗಿಡ ವಿತರಣೆಯ ಅಭಿಯಾನದ ಹಿಂದಿದೆ. 15 ಸಾವಿರಕ್ಕೂ ಅಧಿಲ ಮನೆ ಹೊಂದಿರುವ ಪುತ್ತೂರು ನಗರದಲ್ಲಿ ಆಸಕ್ತ ಪ್ರತಿ ಮನೆಗೆ ಬಿಲ್ವ ಪತ್ರೆಯನ್ನು ದೇವಾಲಯದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.

ಈಗಾಗಲೇ ನಗರ ಮತ್ತು ಪುತ್ತೂರು ಆಸುಪಾಸಿನಲ್ಲಿ ಐದು ಸಾವಿರಕ್ಕೂ‌ ಮಿಕ್ಕಿದ ಮನೆಗಳಿಗೆ ಗಿಡ ವಿತರಣೆ ಮಾಡಲಾಗಿದೆ. ಪುತ್ತೂರು ನಗರಸಭೆಯ 31 ವಾರ್ಡ್‌ ಗಳಿಗೆ ತೆರಳಿ ಗಿಡ ವಿತರಣೆಗೆಂದು ಪ್ರಥಮ ಹಂತದಲ್ಲಿ 2,000 ಗಿಡಗಳನ್ನು ಸಂಗ್ರಹಿಸಿಡಲಾಗಿದೆ. ಪುತ್ತೂರು, ಸುಳ್ಯ, ಕಡಬದ ಅರಣ್ಯ ಇಲಾಖೆಯ ನರ್ಸರಿಗಳಿಂದ ದೇವಸ್ಥಾನ ಹಾಗೂ ವ್ಯವಸ್ಥಾಪನಾ ಸಮಿತಿಯ ವತಿಯಿಂದ ಗಿಡಗಳನ್ನು ಖರೀದಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ಮನೆಗೊಂದು ಬಿಲ್ವ ಗಿಡ ಅಭಿಯಾನಕ್ಕೆ ನಗರಸಭೆ ಕೂಡ ಸಹಯೋಗ ನೀಡಿದೆ.

ಬಿಲ್ವಪತ್ರವನ್ನು ಸಂಸ್ಕೃತದಲ್ಲಿ ಮಹಾಫಲ, ಶಿವದ್ರುಮ, ಶ್ರೀಫಲ, ಬಿಲ್ವ, ಶಾಂಡಿಲ್ಯ ಎಂಬ ಮುಂತಾದ ಹೆಸರಿನಿಂದ, ಕನ್ನಡದಲ್ಲಿ ಬೆಲ್ಲಪತ್ರೆ, ಬಿಲ್ವ ಎಂದು ಕರೆಯುತ್ತಾರೆ. ಇದು ಹೂ ಬಿಡುವ ಸಸ್ಯ. ಮಧುರ ರಸವುಳ್ಳದ್ದು, ಹೂ ಸುವಾಸನೆಯನ್ನು ಬೀರುತ್ತದೆ. ಬಿಳಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಫೆಬ್ರವರಿಯಿಂದ ಎಪ್ರಿಲ್ ತಿಂಗಳ ತನಕ ಹೂ-ಕಾಯಿ ಬಿಡುವ ಕಾಲ. ಎಲೆಗಳು ತ್ರಿಪರ್ಣಿ ಹಾಗೂ ಸುವಾಸಿತವಾಗಿರುತ್ತವೆ. ಇದರಲ್ಲಿ ತಿಳಿ ಹಳದಿ ಬಣ್ಣದ ಕಾಯಿ ಆಗುತ್ತದೆ. ಈ ಮರ 10 ರಿಂದ 18 ಮೀಟರಿನಷ್ಟು ಎತ್ತರ ಬೆಳೆಯುತ್ತದೆ.

ಇದನ್ನೂ ಓದಿ: ಮನೆಯಲ್ಲಿ ದೀಪವನ್ನು ಬಾಯಿಯಿಂದ, ಕೈಯಿಂದ ಆರಿಸಬಾರದು ಏಕೆ ಗೊತ್ತಾ? ಹಾಗಾದರೆ ಸರಿ ವಿಧಾನ ಯಾವುದು?

ಶಿವನ ದೇವಸ್ಥಾನಗಳಲ್ಲಿ ಬಿಲ್ವಪತ್ರೆಯಿಂದ ಪೂಜಾರಾಧನೆ ಮಾಡುವುದು ವಾಡಿಕೆ. ಈಶ್ವರನಿಗೆ ಪ್ರತಿ ದಿನವೂ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ತುಂಬಾ ಶ್ರೇಷ್ಠ. ಬಿಲ್ವಪತ್ರೆಯ ಮೂರು ದಳಗಳಿಂದ ಕೂಡಿದ್ದು ಸತ್ವ, ರಜೋ, ತಮಾ ಗುಣಗಳನ್ನು ಸೂಚಿಸುತ್ತದೆ. ಈ ಮೂರು ದಳಗಳನ್ನು ಈಶ್ವರನ ಮೂರು ಕಣ್ಣುಗಳು ಎಂಬ ನಂಬಿಕೆ ಇದೆ. ಔಷಧ ದೃಷ್ಟಿಯಿಂದಲೂ ಈ ಫಲವು ಅನೇಕ ರೋಗಗಳಿಗೆ ಪರಿಣಾಮಕಾರಿ. ನಾಮಕ್ಕೆ ಬೇಕಾದ ಭಸ್ಮವನ್ನು ಬಿಲ್ವ ಪತ್ರೆಯ ಕಾಯಿಯ ಒಳಗೆ ಇಟ್ಟುಕೊಳ್ಳುವ ಪದ್ಧತಿಯೂ ಇದೆ.

ಈಗಾಗಲೇ ದೇವಾಲಯದ ವತಿಯಿಂದ ಭಕ್ತರ ಮನೆಗಳಿಗೆ 5000 ದಷ್ಟು ಗಿಡಗಳನ್ನು ವಿತರಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ವಿತರಣೆಗೆ 2000 ಗಿಡ ಸಿದ್ಧವಾಗಿದೆ. ಪ್ರತಿ ಮನೆಗೆ ಗಿಡ ನೀಡಲು ದೇವಾಲಯ ಮುಂದಡಿ ಇಟ್ಟಿದೆ. ಧಾರ್ಮಿಕ, ಪರಿಸರ, ಆರೋಗ್ಯದ ನೆಲೆಯಲ್ಲಿ ಬಿಲ್ವ ಪತ್ರೆ ಗಿಡ ಮಹತ್ವದಾಗಿದೆ. ಪುತ್ತೂರು ದೇವಾಲಯದ ಉತ್ಸವ ಸಂದರ್ಭದಲ್ಲಿ ಇದು ಹೆಚ್ಚು ಸಹಕಾರಿ ಆಗಲಿದೆ ಎನ್ನುತ್ತಾರೆ ಪುತ್ತೂರು ತಾಲೂಕಿನ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ.
Published by:Kavya V
First published: