ಬೆಳಗಾವಿ(ಜ. 21): ಮಹಾನಗರ ಪಾಲಿಕೆ ಮುಂಭಾಗದಲ್ಲಿರುವ ಕನ್ನಡ ಧ್ವಜಸ್ತಂಭ ತೆರವುಗೊಳಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಶಿವಸೇನಾ ಕಾರ್ಯಕರ್ತರು ಇಂದು ನಗರದೊಳಗೆ ಲಗ್ಗೆ ಹಾಕಲು ಯತ್ನಿಸುತ್ತಿದ್ದಾರೆ. ಬೆಳಗಾವಿ ತಾಲೂಕಿನ ಮಹಾರಾಷ್ಟ್ರ ಗಡಿಭಾಗದಲ್ಲಿರುವ ಶಿನ್ನೊಳ್ಳಿ ಗ್ರಾಮದ ಮೂಲಕ ನಗರಕ್ಕೆ ಬರಲು ಪ್ರಯತ್ನಿಸಿದ ಶಿವಸೇನಾ ಕಾರ್ಯಕರ್ತರನ್ನು ರಾಜ್ಯ ಪೊಲೀಸರು ತಡೆದಿದ್ದಾರೆ. ಭಗವಾಧ್ವಜ ಹಿಡಿದ ಶಿವಸೈನಿಕರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನಡೆದಿದೆ. ಅತ್ತ ಮಹಾರಾಷ್ಟ್ರ ಪೊಲೀಸರು ಶಿವಸೇನೆಯ ಕಾರ್ಯಕರ್ತರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದೆ ಕೈಕಟ್ಟಿ ನಿಂತಿದ್ದು ಪರೋಕ್ಷವಾಗಿ ಅವರ ಹೋರಾಟಕ್ಕೆ ಬೆಂಬಲ ನೀಡಿದಂತಿತ್ತು. ಅನುಮತಿ ಇಲ್ಲದಿದ್ದರೂ ಬರುತ್ತಿರುವ ಪ್ರತಿಭಟನಾಕಾರರನ್ನು ಬೆಳಗಾವಿ ಪೊಲೀಸರು ಗಡಿಭಾಗದಲ್ಲೇ ತಡೆದು ನಿಲ್ಲಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಧ್ವಜಸ್ತಂಭ ಹಾಕಿರುವುದಕ್ಕೆ ಜಿಲ್ಲೆಯ ಎಂಇಎಸ್ ಸಂಘಟನೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಮೊದಲಾದ ಮರಾಠಿ ಭಾಷಿಕರ ಪ್ರಾಬಲ್ಯ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆಂದು ಹೇಳುವ ಮೂಲಕ ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಈ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು. ಅದರ ಬೆನ್ನಲ್ಲೇ ಶಿವಸೇನಾ ಕಾರ್ಯಕರ್ತರು ಬೆಳಗಾವಿಗೆ ನುಗ್ಗಿ ಎಂಇಎಸ್ ಜೊತೆ ಸೇರಿ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಕರ್ನಾಟಕ ಪೊಲೀಸರು ಬಿಗಿ ಬಂದೋಬಸ್ತ್ ಆಡಿದ್ಧಾರೆ. ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕೊಂಗನೋಳಿ ಟೋಲ್, ಬೆಳಗಾವಿ ತಾಲೂಕಿನ ಶಿನ್ನೊಳ್ಳಿ ಇತ್ಯಾದಿ ಜಾಗಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಮಹಾರಾಷ್ಟ್ರ ಕಡೆಯಿಂದ ಬರುವ ಪ್ರತಿಯೊಂದು ವಾಹನವನ್ನೂ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಉದ್ಧವ್ ಠಾಕ್ರೆಗೆ ಕೆಲಸವಿಲ್ಲ, ಅದಕ್ಕೆ ಬೆಳಗಾವಿ ನಮ್ಮದು ಎನ್ನುತ್ತಾರೆ: ಸಚಿವ ಶ್ರೀಮಂತ ಪಾಟೀಲ್ ಕಿಡಿ
ಶಿನೊಳ್ಳಿ ಗಡಿಭಾಗದಲ್ಲಿ ಶಿವಸೈನಿಕರ ಪುಂಡಾಟದ ಘಟನೆಯನ್ನು ಕನ್ನಡಪರ ಹೋರಾಟಗಾರರು ಬಲವಾಗಿ ಖಂಡಿಸಿದ್ಧಾರೆ. ಶಿವಸೇನೆ ಮತ್ತು ಎಂಇಎಸ್ ಹೋರಾಟಗಾರರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಕನ್ನಡ ಪರ ಸಂಘಟನೆಗಳೇ ಮುಂದೆ ಬಂದು ಪಾಠ ಕಲಿಸಬೇಕಾಗುತ್ತದೆ ಎಂದು ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ಧಾರೆ.
ನ್ಯೂಸ್18 ಜೊತೆ ಮಾತನಾಡಿದ ಕರವೇ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಕನ್ನಡಿಗರೂ ಕೂಡ ಮಹಾರಾಷ್ಟ್ರದ ಸೋಲಾಪುರ ಮೊದಲಾದ ಕಡೆ ಹೋಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಹೇಳಿದ್ಧಾರೆ. ಮುಖ್ಯಮಂತ್ರಿ ಚಂದ್ರು, ಟಿಎಸ್ ನಾಗಾಭರಣ ಅವರೂ ಕೂಡ ಶಿವಸೇನಾ ಪುಂಡಾಟವನ್ನು ಖಂಡಿಸಿದ್ದು, ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಬೆಳಗಾವಿ ವಿಚಾರದಲ್ಲಿ ಉದ್ಧವ್ ಠಾಕ್ರೆ ನೀಡಿದ ಹೇಳಿಕೆಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಬೆಂಗಳೂರು ಹೊರವಲಯದ ಅತ್ತಿಬೆಲೆ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿರುವುದು ತಿಳಿದುಬಂದಿದೆ. ರಸ್ತೆ ತಡೆಗೆ ಮುಂದಾದ ವಾಟಾಳ್ ನಾಗರಾಜ್, ಸಾ ರಾ ಗೋವಿಂದು ಮೊದಲಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ