ಶಿರಾದಲ್ಲಿ ಜೆಡಿಎಸ್ಗೆ ಮರ್ಮಾಘಾತ ನೀಡಿ ಕೈ ಹಿಡಿದ ಕಲ್ಕೆರೆ ರವಿ
Sira Bypolls - ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಲ್ಕೆರೆ ರವಿ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇದು ಕ್ಷೇತ್ರದಲ್ಲಿ ಜೆಡಿಎಸ್ ಬಲವನ್ನ ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ತುಮಕೂರು(ಅ. 05): ಶಿರಾದಲ್ಲಿ ಉಪಚುನಾವಣೆಯ ದಿನ ಹತ್ತಿರಹತ್ತಿರ ಬರುತ್ತಿದ್ದಂತೆ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆ ತೆರೆಮರೆಗೆ ಸರಿಯುತ್ತೆ ಎಂದು ಮತದಾರರು ಹಾಗೂ ಕೆಲ ಜೆಡಿಎಸ್ ಕಾರ್ಯಕರ್ತರು ಮಾತಾಡ್ತಿದ್ದಾರೆ. ಇಂಥದ್ದೊಂದು ಭಾವನೆ ಮೂಡಲು ಕಾರಣ ಇದೆ. ಜೆಡಿಎಸ್ ಮುಖಂಡರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕೆಲ ಪ್ರಭಾವಿ ಮುಖಂಡರು ಕಾಂಗ್ರೆಸ್ ಪಕ್ಷದತ್ತ ವಲಸೆ ಹೋಗುತ್ತಿರುವುದು ಜೆಡಿಎಸ್ ಪಕ್ಷದ ಮುಖಂಡರಲ್ಲಿ ತಳಮಳ ಸೃಷ್ಟಿಸಿದೆ.. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕಲ್ಕೆರೆ ರವಿಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದು ಜೆಡಿಎಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ.
ಅನೇಕ ವರ್ಷಗಳಿಂದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಕಲ್ಕೆರೆ ರವಿಕುಮಾರ್ ದಿಢೀರನೆ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ. ರವಿಕುಮಾರ್ ಪತ್ನಿ ಲತಾ ಅವರು ತಾವರೆಕೆರೆ ಜಿಲ್ಲಾ ಪಂಚಾಯತ್ನ ಜೆಡಿಎಸ್ ಸದಸ್ಯೆ ಆಗಿದ್ದಾರೆ. ಅಲ್ಲದೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಕೂಡ ಅಧಿಕಾರ ನಡೆಸುತ್ತಿದ್ದಾರೆ.
ಇತ್ತೀಚೆಗೆ ಶಿರಾ ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿಯೂ ಕೂಡ ಭಾಗವಹಿಸಿದ್ದ ಕಲ್ಕೆರೆ ರವಿಕುಮಾರ್, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಸಂಪೂರ್ಣ ಬೆಂಬಲ ನೀಡಿ ಕೆಲಸ ಮಾಡುತ್ತೇನೆ ಎಂದು ವೇದಿಕೆಯಲ್ಲಿ ಘೋಷಿಸಿದ್ದರು. ಅಲ್ಲದೆ ತಾವು ಕೂಡ ಟಿಕೆಟ್ ಆಕಾಂಕ್ಷಿ ಎಂಬುದಾಗಿ ಜೆಡಿಎಸ್ ಮುಖಂಡರ ಗಮನಕ್ಕೆ ತಂದಿದ್ದರು. ಆದರೆ, ಇದ್ದಕ್ಕಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಲ್ಕೆರೆ ರವಿಕುಮಾರ್ ಕಾಂಗ್ರೆಸ್ ಪಕ್ಷ ಸೇರಿರುವುದು ಕ್ಷೇತ್ರದಲ್ಲಿ ಜೆಡಿಎಸ್ಗೆ ಸಾಕಷ್ಟು ಹಿನ್ನೆಡೆ ಅನುಭವಿಸುವಂತಾಗಿದೆ.
ದಿವಂಗತ ಸತ್ಯನಾರಾಯಣ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲು ಈಗಾಗಲೇ ಜೆಡಿಎಸ್ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಹಾಗಾಗಿ, ಜೆಡಿಎಸ್ ಮುಖಂಡರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿರುವುದಕ್ಕೆ ಕಾರಣ ಎನ್ನಲಾಗ್ತಿದೆ. ಹೀಗೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕೆಲ ಪ್ರಭಾವಿ ಮುಖಂಡರು ಕಾಂಗ್ರೆಸ್ ಪಕ್ಷದತ್ತ ವಲಸೆ ಹೋಗುತ್ತಿರುವುದು ಜೆಡಿಎಸ್ ಪಕ್ಷದ ಮುಖಂಡರಲ್ಲಿ ತಳಮಳ ಸೃಷ್ಟಿಸಿದೆ.
ಸತ್ಯನಾರಾಯಣ ಅವರ ಕುಟುಂಬದವರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದರೆ ಹೊರಗಡೆಯಿಂದ ಅಭ್ಯರ್ಥಿ ಕರೆತಂದು ಕಣಕ್ಕಿಳಿಸುವ ಲೆಕ್ಕಾಚಾರ ಜೆಡಿಎಸ್ ಪಕ್ಷದಲ್ಲಿದೆ. ಇಂದು ಸೋಮವಾರ ಮತ್ತೊಮ್ಮೆ ಕಾರ್ಯಕರ್ತರೊಡನೆ ಚರ್ಚೆ ಮಾಡೋಕೆ ಬರುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಸದ್ಯಕ್ಕೆ ಶಿರಾ ಜೆಡಿಎಸ್ನಲ್ಲಿ ಎದ್ದಿರುವ ಅಸಮಾಧನಾವನ್ನ ಹೇಗೆ ಶಮನ ಮಾಡ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಶಿರಾದಲ್ಲಿ ಕಾಂಗ್ರೆಸ್ನಿಂದ ಟಿ.ಬಿ. ಜಯಚಂದ್ರ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಮಾಜಿ ಕಾಂಗ್ರೆಸ್ ಸಂಸದ ಮೂಡಲಗಿರಿಯಪ್ಪ ಅವರ ಮಗ ಹಾಗೂ ವೃತ್ತಿಯಲ್ಲಿ ವೈದ್ಯನಾಗಿರುವ ರಾಜೇಶ್ ಗೌಡ ಅವರು ಬಿಜೆಪಿ ಸೇರ್ಪಡೆಯಾಗಿದ್ದು ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ. ಇದೆಲ್ಲದರ ಮಧ್ಯೆ ಜೆಡಿಎಸ್ ಪಕ್ಷ ಈ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾ ಎಂದು ಕಾದುನೋಡಬೇಕು. ನವೆಂಬರ್ 3ರಂದು ಶಿರಾ ಮತ್ತು ಆರ್.ಆರ್. ನಗರ ಕ್ಷೇತ್ರಗಳಿಗೆ ಉಪಚುನಾವಣೆ ಆಗಲಿದೆ. ನವೆಂಬರ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ವರದಿ: ವಿಠಲ್ ಕುಮಾರ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ