ಶಿವಮೊಗ್ಗ (ಜೂ. 14): ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳಲ್ಲಿ ಶಿವಮೊಗ್ಗ ಕೂಡ ಒಂದು. ಅರಣ್ಯ ಸಂಪತ್ತನ್ನು ಉಳಿಸುವ ಹಾಗೂ ಮತ್ತಷ್ಟು ಬೆಳೆಸುವ ಉದ್ದೇಶದಿಂದ ಅರಣ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆ ಜಿಲ್ಲೆಯಲ್ಲಿ ಕೆರೆಗಳ ಸುತ್ತಲೂ 3 ಲಕ್ಷ ಸಸಿ ನೆಡುವ ಯೋಜನೆಯನ್ನು ಹಮ್ಮಿಕೊಂಡಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ರಕ್ಷಣೆಯ ಜೊತೆಗೆ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಮರಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಸಸಿಗಳನ್ನು ನೆಡಲಾಗುತ್ತಿದೆ. ಕೆರೆಯಂಗಳದಲ್ಲಿ ಗಿಡ ನೆಡುವ ಯೋಜನೆ ಜಾರಿಗೊಳಿಸಲಾಗಿದೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯ 271 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆರೆಗಳ ಸುತ್ತ ಕನಿಷ್ಟ 3 ಲಕ್ಷ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ, ಈಗಾಗಲೇ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಂತರ್ಜಲ ಚೇತನ ಯೋಜನೆಯಡಿ ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇದೀಗ ಸಾಮಾಜಿಕ ಅರಣ್ಯ ವಿಭಾಗದ ಮೂಲಕ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆರೆಗಳ ಸುತ್ತ 1 ಸಾವಿರ ಸಸಿಗಳನ್ನು ನೆಡುವ ಕಾರ್ಯವನ್ನು ಆರಂಭಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಶಿವಮೊಗ್ಗ ತಾಲೂಕಿನ ವೀರಣ್ಣನ ಬೆನವಳ್ಳಿ ಗ್ರಾಮದ ಕೆರೆಯ ಆವರಣದಲ್ಲಿ ಸಸಿ ನಡೆಸಲಾಗುತ್ತಿದೆ.
![]()
ಕೆರೆಗಳ ಸುತ್ತ ಗಿಡಗಳನ್ನು ನೆಟ್ಟಿರುವುದು
ಇದನ್ನೂ ಓದಿ: ಕೊರೋನಾಘಾತಕ್ಕೆ ಕನಲಿದ ಬೆಂಗಳೂರು; ಒಂದೇ ದಿನ 7 ಸಾವು – ಉದ್ಯಾನನಗರಿಯಲ್ಲಿ ಸಾವಿನ ಸುನಾಮಿ
ಶಿವಮೊಗ್ಗದ ಸಾಮಾಜಿಕ ಅರಣ್ಯ ವಿಭಾಗವು ಗಿಡ ನೆಡುವ ವಿಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದು, ಒಂದು ವರ್ಷದ ದೊಡ್ಡ ಗಿಡಗಳನ್ನೇ ನೆಡುತ್ತಿದ್ದಾರೆ. ಸಸಿಗಳನ್ನು ಕೂಡ ನರ್ಸರಿಯಲ್ಲಿ ರಾಸಾಯನಿಕ ಉಪಯೋಗಿಸದೆ, ಜೀವಾಮೃತ ಬಳಸಿ ಬೆಳಸಲಾಗಿದೆ. ಜಿಲ್ಲೆಯ 271 ಗ್ರಾಮ ಪಂಚಾಯತ್ ನಲ್ಲಿ ತಲಾ 1 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಸಸಿ ನೆಡುವುದರ ಜೊತೆಗೆ ಆ ಯೋಜನೆಯಿಂದ ಕೆರೆಗಳ ರಕ್ಷಣೆ ಸಹ ಆಗಲಿದೆ. ಕೆರೆಗಳ ಗಡಿಗಳನ್ನು ಗುರುತಿಸಿ, ಅಲ್ಲಿ ಸಸಿಗಳನ್ನು ನೆಡುವುದರಿಂದ ಕೆರೆ ಒತ್ತುವರಿಯನ್ನು ಸಹ ತಡೆಯಬಹುದಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ 57 ಅನಧಿಕೃತ ಬಡಾವಣೆಗಳ ತೆರವಿಗೆ ನೋಟೀಸ್; ಕಾರ್ನರ್ ನಿವೇಶನಗಳ ಹರಾಜು
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯೀಕರಣ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ನೆಡಲಾಗಿರುವ ಸಸಿಗಳನ್ನು ಸರಿಯಾಗಿ ನಿರ್ವಹಿಸುವುದು ಸಹ ಗ್ರಾಮ ಪಂಚಾಯತ್ ಜವಾಬ್ದಾರಿಗೆ ನೀಡಲಾಗುತ್ತಿದೆ. ಈ ಮೂಲಕ ಹಸಿರು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ರೂಪಿಸಿರುವ ಹೊಸ ಯೋಜನೆಯಿಂದಾಗಿ ಕೆರೆಗಳ ಗಡಿಗಳನ್ನು ಗುರುತಿಸಿ ಒತ್ತುವರಿಯನ್ನು ತಡೆಯಲು ಸಹ ಸಾಧ್ಯವಿದೆ. ಹೀಗಾಗಿ ಶಿವಮೊಗ್ಗದ ಸಾಮಾಜಿಕ ಅರಣ್ಯ ವಿಭಾಗ ರೂಪಿಸಿದ ಕೆರೆಯಂಗಳದಲ್ಲಿ ಗಿಡ ನೆಡುವ ಯೋಜನೆ ನಿಜಕ್ಕೂ ರಾಜ್ಯಕ್ಕೆ ಮಾದರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ