ಡಿಸಿಸಿ ಬ್ಯಾಂಕ್ ಹಗರಣವನ್ನು ಸಿಬಿಐಗೆ ವಹಿಸಿ; ಶಿವಮೊಗ್ಗ ಬಿಜೆಪಿ ನಾಯಕರ ಒತ್ತಾಯ

ಸಿಓಡಿ ತನಿಖೆಯಲ್ಲಿ ಕ್ಲೀನ್​ಚಿಟ್ ಪಡೆದಿರುವ ಡಿಸಿಸಿ ಬ್ಯಾಂಕ್ ಹಗರಣಕ್ಕೆ ಮತ್ತೆ ಮರುಜೀವ ಬರುತ್ತಾ? ಎಂದು ಶಿವಮೊಗ್ಗ ಜಿಲ್ಲೆಯ ಜನರು ಸಹ ಕಾತುರದಿಂದ ಕಾಯುತ್ತಿದ್ದಾರೆ.

ಡಿಸಿಸಿ ಬ್ಯಾಂಕ್ ಹಗರಣವನ್ನು ಸಿಬಿಐಗೆ ವಹಿಸುವಂತೆ ಶಿವಮೊಗ್ಗ ಬಿಜೆಪಿ ನಾಯಕರ ಮನವಿ

ಡಿಸಿಸಿ ಬ್ಯಾಂಕ್ ಹಗರಣವನ್ನು ಸಿಬಿಐಗೆ ವಹಿಸುವಂತೆ ಶಿವಮೊಗ್ಗ ಬಿಜೆಪಿ ನಾಯಕರ ಮನವಿ

  • Share this:
ಶಿವಮೊಗ್ಗ (ಜೂ. 1): ಡಿಸಿಸಿ ಬ್ಯಾಂಕ್ ನಲ್ಲಿ 2014 ರಲ್ಲಿ ನಡೆದಿರುವ 62 ಕೋಟಿ ರೂ. ಬಂಗಾರದ ಅಡಮಾನ ಸಾಲದ ಹಗರಣವನ್ನು  ಸಿಬಿಐ ತನಿಖೆಗೆ ವಹಿಸುವಂತೆ ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಸಹಕಾರಿ ಇಲಾಖೆ ಅಧಿಕಾರಿಗಳು ಈಗಾಗಲೇ ಬ್ಯಾಂಕ್ ನ ವ್ಯವಹಾರದ ಬಗ್ಗೆ ದಾಖಲಾತಿ ಕಲೆ ಹಾಕುತ್ತಿದ್ದಾರೆ. ಬ್ಯಾಂಕ್ ಉಳಿಯಬೇಕು, ತಪ್ಪಿತಸ್ಥರ ತಲೆದಂಡ ಆಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ಸಹಕಾರಿ ಸಚಿವರು ನೀಡಿದ್ದಾರೆ.

2014ರಲ್ಲಿ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ನಲ್ಲಿ 62 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಬಂಗಾರದ ಮೇಲೆ ಕೊಡುವ ಸಾಲದಲ್ಲಿ ಹಗರಣ ನಡೆದಿತ್ತು ಎಂಬ ಆರೋಪ ಇತ್ತು. ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ  ನಗರ ಶಾಖೆಯಲ್ಲಿ ಬಂಗಾರ ಇಲ್ಲದೇ ಬಂಗಾರದ ಅಡಮಾನ ಇಟ್ಟುಕೊಳ್ಳಲಾಗಿದೆ ಎಂದು ಸಾಲ ನೀಡಲಾಗಿತ್ತು. ಅದರ ಜೊತೆಗೆ ನಕಲಿ ಬಂಗಾರಕ್ಕೂ ಸಾಲ ನೀಡಲಾಗಿತ್ತು. ಈ ಬಗ್ಗೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಮತ್ತು ಆಗಿನ ಎಂಡಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಈ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದು, ಇದರಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರು ಸೇರಿಕೊಂಡಿದ್ದಾರೆ ಎಂದು ಬಿಜೆಪಿ ಪಕ್ಷ ಆರೋಪಿಸಿ ಪ್ರತಿಭಟನೆಗಳನ್ನು ನಡೆಸಿತ್ತು. ಹೀಗಾಗಿ, ಸರ್ಕಾರ ಕೇಸನ್ನು ಸಿಓಡಿ ತನಿಖೆಗೆ ವಹಿಸಿತ್ತು.

ಇದನ್ನೂ ಓದಿ: ಕೇರಳದ ಹೈಟೆಕ್ ಲಾಬಿಯಿಂದ ಕನ್ನಡಿಗರು ವಿದೇಶದಲ್ಲೇ ಲಾಕ್!

ಸಿಓಡಿ ತನಿಖೆಯಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರ ಪಾತ್ರವಿಲ್ಲ ಎಂದು ಕ್ಲೀನ್ ಚೀಟ್ ನೀಡಲಾಗಿತ್ತು.ಆದರೆ, ಈಗ ಈ ಹಗರಣವನ್ನು  ಸಿಬಿಐಗೆ ವಹಿಸಬೇಕು ಎಂಬ ಕೂಗು ಕೇಳಿ ಬಂದಿದೆ. ಸಿಬಿಐ ತನಿಕೆಗೆ ವಹಿಸಬೇಕು ಎಂಬ ಆಗ್ರಹ ದಿನೇದಿನೆ ಹೆಚ್ಚಾಗುತ್ತಿದೆ. ಬಿಜೆಪಿ ಪಕ್ಷದ ಜಿಲ್ಲಾ ಘಟಕ ಈ ಬಗ್ಗೆ ಒತ್ತಾಯವನ್ನು ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಮತ್ತು ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಬಂಗಾರ ತೆಗೆದುಕೊಳ್ಳದೆ  ಸಾಲ ನೀಡಲಾಗಿದೆ. ಜೊತೆಗೆ ನಕಲಿ ಬಂಗಾರ ಇಟ್ಟು 62 ಕೋಟಿ ರೂ. ಹಣ ವಂಚನೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.

ರಾಜ್ಯ  ಸರ್ಕಾರ ಪ್ರಕರಣನ್ನು ಸಿಓಡಿಗೆ ನೀಡಿತ್ತು. ಆದರೆ ಸಿಓಡಿ  ಬ್ಯಾಂಕ್ ನ ಅಧ್ಯಕ್ಷರು ಮತ್ತು ನಿರ್ದೇಶಕರ ಪಾತ್ರ ಇಲ್ಲ ಎಂದು ಕ್ಲೀನ್ ಚೀಟ್ ನೀಡಿದೆ. ಜೊತೆಗೆ ಶಿವಮೊಗ್ಗ ನಗರ ಶಾಖೆಯ ಮ್ಯಾನೇಜರ್ ಶೋಭಾ ವಿರುದ್ಧ ಮೇಲಿನ ಅಪೀಲ್ ಹಾಕಿಲ್ಲ. ಇದನ್ನೆಲ್ಲ ನೋಡಿದರೆ ಹಗರಣ ಮುಚ್ಚಿಹಾಕುವ ರೀತಿ ಕಾಣುತ್ತಿದೆ ಎಂದು ದೂರಿದ್ದಾರೆ. ರೈತರಿಗೆ ಸಾಲ ಕೊಡುವ ಕೆಲಸ ಮಾಡಿ ಎಂದರೆ,  ಹೊರ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಿಗೆ 85 ಕೋಟಿ ರೂ. ಸಾಲ ನೀಡಿದ್ದಾರೆ.  ಇದು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ. ಸಾಲ ನೀಡುವುದರಲ್ಲಿ ಸಹ ಭಾರೀ ಅವ್ಯವಹಾರ ನಡೆದಿದ್ದು, ಇದನ್ನು  ಭೇದಿಸಬೇಕಿದೆ. ಹೀಗಾಗಿ,  ಸಿಬಿಐಗೆ ಕೇಸ್ ವಹಿಸುವಂತೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಭಾರತದ 18 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ

ಮನವಿ ಸ್ವೀಕರಿಸಿದ ಸಹಕಾರಿ ಸಚಿವರು, ಈಗಾಗಲೇ ಶಿವಮೊಗ್ಗ  ಡಿಸಿಸಿ ಬ್ಯಾಂಕ್ ಗೆ ಸಹಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ದಾಖಲೆಗಳನ್ನು ಕಲೆಹಾಕಿದ್ದಾರೆ. ಕೆಲವೊಂದು ದಾಖಲೆಗಳನ್ನು ಕೊಟ್ಟಿಲ್ಲ ಎಂಬ ಮಾಹಿತಿ  ಸಿಕ್ಕಿದೆ. ಡಿಸಿಸಿ ಬ್ಯಾಂಕ್ ನ ಎಂಡಿ ತನಿಖೆಗೆ ಬಂದ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಸರಿಯಾಗಿ ಸ್ಪಂಧಿಸಿಲ್ಲ ಎಂಬ ಮಾಹಿತಿ ಬಂದಿದೆ. ಸಕ್ಕರೆ ಕಾರ್ಖಾನೆಗಳ ಜೊತೆ ಅಡಿಕೆ ಸೇರಿದಂತೆ ಇತರೆ ವ್ಯವಹಾರಕ್ಕೂ ಸಾಲ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ.

ದಾಖಲಾತಿ ತೆಗೆದುಕೊಂಡು ಸಂಪೂರ್ಣ ಮಾಹಿತಿ ಬಂದ ಮೇಲೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸಂಸ್ಥೆ ಉಳಿಯಬೇಕು, ತಪ್ಪಿತಸ್ಥರ ತಲೆದಂಡ ಹಾಗಬೇಕು, ಇದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಮಾಹಿತಿ ಕೊಟ್ಟಿದ್ದಾರೆ. ಸಿಓಡಿ ತನಿಖೆಯಲ್ಲಿ ಕ್ಲೀನ್​ಚಿಟ್ ಪಡೆದಿರುವ ಪ್ರಕರಣಕ್ಕೆ ಮತ್ತೆ ಮರುಜೀವ ಬರುತ್ತಾ? ಎಂದು ಜಿಲ್ಲೆಯ ಜನರು ಸಹ ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ಗೆ ವಹಿಸುತ್ತಾ? ಎಂಬ ಕಾತುರ ಶಿವಮೊಗ್ಗದ ಜಿಲ್ಲೆಯ ಜನರಲ್ಲಿದೆ.

 
First published: