ಕೊಪ್ಪಳ: ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಒಟ್ಟು 65 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರಿಗೆ ಪ್ರಶಸ್ತಿ ಪ್ರಕಟಿಸಲಾಗಿದ್ದು ಕೊಪ್ಪಳ ಜಿಲ್ಲೆಯ ತೊಗಲುಗೊಂಬೆಯಾಟದ ಕೇಶವಪ್ಪ ಶಿಳ್ಳಿಕ್ಯಾತರಿಗೆ ಪ್ರಶಸ್ತಿ ದೊರೆತಿದೆ. ತೊಗಲುಗೊಂಬೆಯಾಟ ಆಡಿಸುವಲ್ಲಿ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಈ ಕುಟುಂಬದ ಎರಡನೇ ಪೀಳಿಗೆಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 2014ರಲ್ಲಿ ಭೀಮವ್ವ ಶಿಳ್ಳಿಕ್ಯಾತರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿತ್ತು.
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಶಿಳ್ಳಿಕ್ಯಾತರ್ ಸಮುದಾಯದ ಕಲಾವಿದರು ತೊಗಲು ಗೊಂಬೆ ಆಟದ ಮೂಲಕವೇ ವಿದೇಶಗಳಲ್ಲೂ ಹೆಸರು ಮಾಡಿದವರು. ಇಂತಹ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಿರಿಯ ಜೀವಕ್ಕೆ ರಾಜ್ಯೋತ್ಸವದ ಪ್ರಶಸ್ತಿ ಸಂದಿದ್ದು, ಭೀಮವ್ವಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕುಗ್ರಾಮವೊಂದರಲ್ಲಿ ಎಲೆಮರೆ ಕಾಯಿಯಂತೆ ತೊಗಲು ಗೊಂಬೆಯಾಟ ಕಲೆಗೆ ಜೀವನವಿಡೀ ದುಡಿದ ಹಿರಿಯ ಕಲಾವಿದೆಯೋರ್ವರನ್ನು ಸರ್ಕಾರ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ತೊಂಗಲುಗೊಂಬೆ ಕಲೆಗೆ ಪ್ರೋತ್ಸಾಹ ನೀಡಿದಂತಾಗಿದೆ.
ಇದನ್ನೂ ಓದಿ: ಮೈಸೂರಿನ ನಿವೃತ್ತ ಪ್ರೊಫೆಸರ್ ಕೊಲೆ ಪ್ರಕರಣ; ಖ್ಯಾತ ಗಾಯಕಿಯ ತಂದೆ ವಿಶ್ವನಾಥ್ ಭಟ್ ಬಂಧನ
ಭೀಮವ್ವಗೆ ತೊಗಲುಗೊಂಬೆ ಕಲೆ ಸಿದ್ಧಿಸಿಕೊಳ್ಳಲು, ಪತಿ ದೊಡ್ಡಬಾಳಪ್ಪ ಅವರ ಪಾತ್ರ ಅತಿ ಹೆಚ್ಚು, ದೊಡ್ಡಬಾಳಪ್ಪ, ಭೀಮವ್ವ ಮತ್ತು ಗೊಂಬೆಗಳನ್ನು ಬಿಟ್ಟು ಇಹಲೋಕ ತ್ಯಜಿಸಿ ಸುಮಾರು 18 ವರ್ಷಗಳಾಗಿವೆ. ರಾಮಾಯಣದ ರಾಮ, ಸೀತೆ, ಲಕ್ಷ್ಮಣ, ರಾವಣ, ಮಹಾಭಾರತದ ಧರ್ಮರಾಯ, ಧುರ್ಯೋಧನ ಸೇರಿದಂತೆ ಹಲವಾರು ಪುರಾಣ ಪಾತ್ರಗಳು ಭೀಮವ್ವಳ ಗೊಂಬೆಗಳಲ್ಲಿ ಪುರ್ನಜನ್ಮ ಪಡೆದು, ಪಾತ್ರಗಳಿಗೆ ಜೀವ ತುಂಬಿ ಕುಣಿದಿವೆ. ಇಂತಹ ಇಳಿ ವಯಸ್ಸಿನಲ್ಲೂ ಗೊಂಬೆ ಪ್ರದರ್ಶನದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಪಾತ್ರಗಳ ಸಂಭಾಷಣೆಗಳು ನಿರರ್ಗಳವಾಗಿ ಬರುತ್ತವೆ. ಕುಟುಂಬದ ಸದಸ್ಯರು ಮೃದಂಗ, ಹಾರ್ಮೋನಿಯಂಗೆ ಸಾಥ್ ನೀಡುತ್ತಾರೆ. ಪುತ್ರ ಕೇಶಪ್ಪ, ವೆಂಕಪ್ಪ ತೊಂಗಲು ಗೊಂಬೆಯಾಟ ಪ್ರದರ್ಶನವನ್ನೇ ಮುಂದುವರೆಸಿದ್ದಾರೆ.
ವಿದೇಶಗಳಲ್ಲಿ ಕುಣಿದ ಗೊಂಬೆಗಳು:
ಓದು, ಬರಹ ಬಾರದೇ ಇದ್ದರೂ, ತೊಗಲುಗೊಂಬೆಯಾಟದ ಕಲಾವಿದೆ ಭೀಮವ್ವ ಅವರ ಸಾಧನೆಯ ಹಾದಿ ದೊಡ್ಡದು. ಅವರ ಕಲೆ ನಮ್ಮ ರಾಜ್ಯ ಅಥವಾ ನಮ್ಮ ದೇಶಕ್ಕಷ್ಟೇ ಸೀಮಿತವಾಗದೇ, ವಿದೇಶಗಳಲ್ಲೂ ತಮ್ಮ ಕಲೆ ಪ್ರದರ್ಶಿಸಿ ಬಂದಿದ್ದಾರೆ. ಜಪಾನ್, ಜರ್ಮನಿ, ಅಮೆರಿಕಾ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಇರಾನ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳಿಗೆ ಕುಟುಂಬ ಸಮೇತ ತೆರಳಿ, ಗೊಂಬೆಗಳನ್ನು ಕುಣಿಸಿ ಸೈ ಎನಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ನೀಡಿದ ಪ್ರದರ್ಶನಕ್ಕಾಗಿ ಕಲಾವಿದೆಗೆ ಅನೇಕ ಪ್ರಶಂಸಾ ಪತ್ರಗಳು ಸಂದಿವೆ.
ಇದನ್ನೂ ಓದಿ: ಯುದ್ಧಕ್ಕೆ ಮೊದಲೇ ಡಿಕೆ ಶಿವಕುಮಾರ್ ಪಲಾಯನ ಮಾಡಿದ್ದಾರೆ; ಸಚಿವ ಆರ್. ಅಶೋಕ್ ಲೇವಡಿ
ಪ್ರಶಸ್ತಿಗಳ ಸಾಲು: ಭೀಮವ್ವ ಅವರ ಮಹೋನ್ನತ ಕಲೆಗಾಗಿ ಅವರಿಗೆ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಶರಣ ಸಂಸ್ಕೃತಿ ಉತ್ಸವ ಪ್ರಶಸ್ತಿ, ಅಖಿಲ ಭಾರತ 62ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಪ್ರಶಸ್ತಿ, ಇರಾನ್ ದೇಶದ ಅಂತರರಾಷ್ಟ್ರೀಯ ಗೊಂಬೆ ಉತ್ಸವದ ಪ್ರಶಸ್ತಿ, ಹಂಪಿ, ಆನೆಗೊಂದಿ ಉತ್ಸವಗಳ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಈಗ ಆ ಕುಟುಂಬದ ಎರಡನೇ ತಲೆಮಾರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಜಿಲ್ಲೆಯ ಜನತೆಯಲ್ಲಿ ಹರ್ಷ ಮೂಡಿಸಿದೆ.
ವರದಿ: ಬಸವರಾಜ ಕರುಗಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ