ಪ್ರಧಾನ ಮಂತ್ರಿ ಫಸಲ್ ಭೀಮಾ ದೊಡ್ಡ ಅವ್ಯವಹಾರದ ಯೋಜನೆ; ಶರಣಪ್ರಕಾಶ ಪಾಟೀಲ

ರೈತರಿಗೆ ಮೋಸ ಮಾಡಲೆಂದೇ ತಂದಿರುವ ಯೋಜನೆ ಇದಾಗಿದೆ. ಬೆಳೆ ವಿಮೆ ಮೇಲೆ ರೈತರ ವಿಶ್ವಾಸವೇ ಕಡಿಮೆಯಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಹಲವು ಸಚಿವರ ಕೈವಾಡವಿದ್ದು, ರೈತರಿಗೆ ಬೆಳೆ ವಿಮೆ ಪರಿಹಾರ ಸಿಗಲು ಬಿಡುತ್ತಿಲ್ಲ

ಮಾಜಿ ಸಚಿವ ಶರಣಪ್ರಕಾಶ ಪಾಟೀಲ

ಮಾಜಿ ಸಚಿವ ಶರಣಪ್ರಕಾಶ ಪಾಟೀಲ

  • Share this:
ಕಲಬುರ್ಗಿ(ಆಗಸ್ಟ್​. 19): ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ದೊಡ್ಡ ಫ್ರಾಡ್ ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರವಿದ್ದಾಗ ವಿಮಾ ಯೋಜನೆ ಸರ್ಕಾರದ ವ್ಯಾಪ್ತಿಯಲ್ಲಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಫಸಲ್​​ ಭೀಮಾ ಯೋಜನೆ ಖಾಸಗೀಕರಣ ಮಾಡಲಾಗಿದೆ. ಇದರಿಂದ ಯಾವುದೇ ರೈತರಿಗೆ ಭೀಮಾ ಯೋಜನೆ ಫಲ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿ ಜಿಲ್ಲೆಯೊಂದರಲ್ಲಿಯೇ 2016 ರಿಂದ ಇಲ್ಲಿಯವರೆಗೆ 221 ಕೋಟಿ ರೂಪಾಯಿ ವಿಮಾ ಕಂತು ಕಟ್ಟಲಾಗಿದೆ. ಆದರೆ, ಪರಿಹಾರ ಸಿಕ್ಕಿರುವುದು ಕೇವಲ 26 ಕೋಟಿ ರೂಪಾಯಿ ಮಾತ್ರ. ರೈತರಿಗೆ ಮೋಸ ಮಾಡಲೆಂದೇ ತಂದಿರುವ ಯೋಜನೆ ಇದಾಗಿದೆ. ಬೆಳೆ ವಿಮೆ ಮೇಲೆ ರೈತರ ವಿಶ್ವಾಸವೇ ಕಡಿಮೆಯಾಗಿದೆ. ಇದರ ಹಿಂದೆ ಕೇಂದ್ರ ಸರ್ಕಾರದ ಹಲವು ಸಚಿವರ ಕೈವಾಡವಿದ್ದು, ರೈತರಿಗೆ ಬೆಳೆ ವಿಮೆ ಪರಿಹಾರ ಸಿಗಲು ಬಿಡುತ್ತಿಲ್ಲ. ಪ್ರಭಾವಿ ನಾಯಕರು ವಿಮಾ ಕಂಪನಿಗಳಿಗೆ ನೆರವಾಗುತ್ತಿದ್ದಾರೆ ಎಂದು ಪಾಟೀಲ ಆರೋಪಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯಲ್ಲಿ ಹೆಸರು ಮತ್ತು ಉದ್ದು ದೊಡ್ಡ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಸುಮಾರು 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಮತ್ತು ಸುಮಾರು 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಲಾಗಿದ್ದು, ನಿರಂತರ ಮಳೆಯಿಂದಾಗಿ ಹಾನಿಗೆ ತುತ್ತಾಗಿದೆ. ಮತ್ತೊಂದೆಡೆ ಅತಿಯಾದ ಮಳೆಯಿಂದ ತೊಗರಿಯೂ ಹಾನಿಯಾಗಿದೆ. ಕೂಡಲೇ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೆ ಆರಂಭಿಸಬೇಕು. ಪ್ರತಿ ಎಕರೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಹೆಸರು ಮತ್ತು ಉದ್ದು ಖರೀದಿ ಕೇಂದ್ರ ಆರಂಭಿಸಬೇಕೆಂದು ಪಾಟೀಲ ಆಗ್ರಹಿಸಿದ್ದಾರೆ.

ಕೇಂದ್ರ ಹಾಗು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗೆ ಖಂಡಿಸಿ, ರಾಜೀವಗಾಂಧಿ ಜಯಂತಿಯಂದು ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಬೆಂಬಲ ಬೆಲೆಯೊಂದಿಗೆ ಹೆಸರು ಖರೀದಿಗೆ ಆಗ್ರಹ

ಹೆಸರು ಉತ್ಪನ್ನ ಮಾರುಕಟ್ಟೆಗೆ ಬಂದು, ದರ ಕುಸಿತ ಕಾಣುತ್ತಿದ್ದರೂ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದ್ದಾರೆ.

ಇದನ್ನೂ ಓದಿ : ಪೂರ್ಣಗೊಂಡು ವರ್ಷ ಕಳೆದರೂ ಉಪಯೋಗಕ್ಕೆ ಸಿಗುತ್ತಿಲ್ಲ ಶುದ್ಧ ನೀರಿನ ಘಟಕ

ಕಲಬುರ್ಗಿಯಲ್ಲಿ ಮಾತನಾಡಿದ ಪಾಟೀಲ, ಅತಿವೃಷ್ಟಿಯಿಂದ ಕಲಬುರ್ಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದರ ನಡುವೆಯೇ ಅಲ್ಪಾವಧಿ ಬೆಳೆಗಳ ಕಟಾವು ನಡೆದಿದೆ. ಈಗಾಗಲೇ ಹೆಸರು ಬೆಳೆಯ ಕಟಾವು ಆರಂಭಗೊಂಡಿದೆ. ಹೆಸರು ಮಾರುಕಟ್ಟೆಗೆ ಬರಲಾರಂಭಿದಿದ್ದು, ದರ ಕುಸಿತ ಕಾಣಲಾರಂಭಿಸಿದೆ. ಆದರೂ ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡುತ್ತಿಲ್ಲ. ಬೆಂಬಲ ಬೆಲೆಯೊಂದಿಗೆ ಹೆಸರು ಖರೀದಿ ಮಾಡ್ತಿಲ್ಲ ಎಂದು ಪಾಟೀಲ ಆರೋಪಿಸಿದ್ದಾರೆ.

ಕೂಡಲೇ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಹೆಸರು ಖರೀದಿಗೆ ಮಾಡಬೇಕು. ಕೊರೋನಾದಂತಹ ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.
Published by:G Hareeshkumar
First published: