news18-kannada Updated:February 23, 2021, 7:58 AM IST
ಚಿಕ್ಕಬಳ್ಳಾಪುರದಲ್ಲಿ ಸ್ಫೋಟಗೊಂಡ ಸ್ಥಳ
ಚಿಕ್ಕಬಳ್ಳಾಪುರ(ಫೆ. 23): ಶಿವಮೊಗ್ಗದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಜಿಲೆಟಿನ್ ಸ್ಫೋಟ ಘಟನೆಯ ನೆನಪು ಮಾಸುವ ಮುನ್ನವೇ ಅಂಥದ್ದೇ ದುರಂತ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ಸ್ವಗ್ರಾಮದಿಂದ ಕೂಗಳತೆ ದೂರದಲ್ಲಿರುವ ಹಿರೇನಾಗವೇರಿ ಎಂಬ ಗ್ರಾಮದಲ್ಲಿನ ಕಲ್ಲು ಕ್ವಾರಿಯೊಂದರ ಬಳಿ ಭಾರೀ ಸ್ಫೋಟವಾಗಿ ಆರು ಮಂದಿ ಬಲಿಯಾಗಿದ್ದಾರೆ. ಐವರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸತ್ತಿರುವುದು ತಿಳಿದುಬಂದಿದೆ. ಇನ್ನೂ ಮೂವರು ಗಾಯಾಳುಗಳಿದ್ದು, ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ 12:30ಕ್ಕೆ ಸಂಭವಿಸಿದ್ದ ಈ ದುರಂತಕ್ಕೆ ಜಿಲೆಟಿನ್ ಕಡ್ಡಿಗಳ ಸ್ಫೋಟವೇ ಕಾರಣ ಎಂಬ ಮಾಹಿತಿ ತಿಳಿದುಬಂದಿದೆ.
ಭ್ರಮರಾ ವಾಸಿನಿ ಸ್ಟೋನ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಿಸುತ್ತಿದ್ದ ಜೆಲ್ಲಿ ಕ್ರಷರ್ ಇದಾಗಿದೆ. ಇಲ್ಲಿ ಕಲ್ಲು ಕ್ವಾರಿಯನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತೆನ್ನಲಾಗಿದೆ. ಎಂಜಿನಿಯರ್ ಉಮಾಕಾಂತ್, ಸ್ಥಳೀಯ ನಿವಾಸಿ ರಾಮು, ವಾಚ್ಮ್ಯಾನ್ ಮಹೇಶ್, ಗಂಗಾಧರ್, ಕಂಪ್ಯೂಟರ್ ಆಪರೇಟರ್ ಮುರಳಿ ಈ ಐವರು ಸ್ಥಳದಲ್ಲೇ ಸತ್ತವರು. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Mangalore: ಕೊರೋನಾ ಹಿನ್ನೆಲೆ ಮಂಗಳೂರು- ಕೇರಳ ಗಡಿ ಬಂದ್; ಜನರ ಆಕ್ರೋಶ
ಜಿಲೆಟಿನ್ ಕಡ್ಡಿಗಳ ಸ್ಫೋಟದ ರಭಸಕ್ಕೆ ಐವರು ವ್ಯಕ್ತಿಗಳ ಮೃತದೇಹಗಳು ಛಿದ್ರಛಿದ್ರಗೊಂಡು ನೂರಕ್ಕೂ ಹೆಚ್ಚು ಮೀಟರ್ ದೂರಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅವರ ಗುರುತು ಇನ್ನೂ ಸಿಗಬೇಕಿದೆ. ಜಿಲೆಟಿನ್ ಕಡ್ಡಿಗಳನ್ನ ಇಟ್ಟುಕೊಂಡು ಜನರು ಪಾರ್ಟಿ ಮಾಡುವ ವೇಳೆ ಏಕಾಏಕಿ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ನಿರ್ಜನ ಪ್ರದೇಶವಾದ್ದರಿಂದ ಸಾವಿನ ಪ್ರಮಾಣ ಕಡಿಮೆ ಇದೆ.
ಘಟನೆ ನಡೆದ ಜಲ್ಲಿ ಕ್ರಶರ್ ಭ್ರಮರಾವಾಸಿನಿ ಸಂಸ್ಥೆಗೆ ಸೇರಿದ್ದು, ಅದು ರಾಘವೇಂದ್ರ ರೆಡ್ಡಿ, ನಾಗರಾಜರೆಡ್ಡಿ ಮತ್ತು ಶಿವಾ ರೆಡ್ಡಿ ಅವರು ಮಾಲೀಕರಾಗಿದ್ದಾರೆ. ಇಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನ ಶೇಖರಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಫೆ. 7ರಂದು ಇಲ್ಲಿ ದಾಳಿ ಕೂಡ ಮಾಡಿದ್ದರು. ನಿನ್ನೆ ಸೋಮವಾರ ಸಂಜೆ ಕೂಡ ಪೊಲೀಸರು ರೇಡ್ ಮಾಡಿದ್ದರೂ ಜಿಲೆಟಿನ್ ಕಡ್ಡಿ ಸಿಕ್ಕಿರಲಿಲ್ಲ. ಆ ಸ್ಫೋಟಕವನ್ನ ಅರಣ್ಯ ಪ್ರದೇಶದಲ್ಲಿ ಇರಿಸಲಾಗಿತ್ತೆನ್ನಲಾಗಿದೆ. ಪೊಲೀಸರು ವಾಪಸ್ ಹೋದ ಬಳಿಕ ಅರಣ್ಯ ಪ್ರದೇಶದಿಂದ ಆ ಜಿಲೆಟಿನ್ ಕಡ್ಡಿಗಳನ್ನ ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯೆ ಪಾರ್ಟಿ ಮಾಡುವ ಸಂದರ್ಭದಲ್ಲಿ ಜಿಲೆಟಿನ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.
Published by:
Vijayasarthy SN
First published:
February 23, 2021, 7:35 AM IST