ಗ್ರಾ.ಪಂ. ಚುನಾವಣೆ: ರೇಷ್ಮೆನಗರಿಯಲ್ಲಿ ಹರಿದ ಹಣದ ಹೊಳೆ, ಝಗಮಗಿಸಿದ ಕುಕ್ಕರ್, ಮೂಗುತಿ

ವಿಧಾನಸಭಾ ಚುನಾವಣೆಯಂತೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಜಿದ್ದಾ ಜಿದ್ದಿ ಇರುತ್ತದೆ. ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಗ್ರಾ.ಪಂ. ಅಭ್ಯರ್ಥಿಗಳು ಈ ಬಾರಿ ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಹಣ, ಉಡುಗೊರೆಗಳ ಹೊಳೆಯೇ ಹರಿದಿದೆ.

ಮತದಾನದ ಸಾಂದರ್ಭಿಕ ಚಿತ್ರ

ಮತದಾನದ ಸಾಂದರ್ಭಿಕ ಚಿತ್ರ

  • Share this:
ರಾಮನಗರ: ರಾಜಕೀಯ ಅಂದರೆ ಮೊದಲೆಲ್ಲ ತತ್ವ, ಸಿದ್ಧಾಂತ, ಮೌಲ್ಯಗಳ ಮೇಲೆ ನಡೆಯುತ್ತಿತ್ತು. ಆದರೆ ಈಗಿನ ದಿನಗಳಲ್ಲಿ ಈ ಮೂರು ಜಾಗದಲ್ಲಿ ಹಣವೆಂಬುದೇ ಪ್ರಾಬಲ್ಯವಾಗಿದೆ. ಹಣವಿದ್ದರೆ ಸಾಕು ಭಿಕ್ಷುಕನೂ ಸಹ ರಾಜನಾಗಿ ಮರೆಯುತ್ತಾನೆಂದು ಜನರು ಸಹ ನಂಬಿದ್ದಾರೆ. ಹಾಗಾಗಿ ಈ ಬಾರಿಯ ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆ ರಾಮನಗರ ಜಿಲ್ಲೆಯಲ್ಲಿ ಹಣದ ಹೊಳೆಯೇ ಹರಿದಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತರ ಜೊತೆಗೆ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಸಹ ಲಕ್ಷಲಕ್ಷ ಹಣ ಖರ್ಚು ಮಾಡಿದ್ದಾರೆಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಕೆಲವೆಡೆ ಓಟಿಗೆ 100 ರೂಪಾಯಿಯಿಂದ ೫ ಸಾವಿರ ರೂ ವರೆಗೂ ಅಭ್ಯರ್ಥಿಗಳು ಮತದಾರರಿಗೆ ಹಣ ನೀಡಿರುವುದಾಗಿ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.

ಟೀ ಅಂಗಡಿಗಳಲ್ಲಿ, ಕಟಿಂಗ್ ಶಾಪ್​ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿರುವ ಪ್ರಕಾರ ಈ ಬಾರಿ ರಾಮನಗರ ಜಿಲ್ಲೆಯಲ್ಲಿ ಒಟ್ಟಾರೆ ಬರೋಬ್ಬರಿ ನೂರು ಕೋಟಿಗೂ ಹೆಚ್ಚು ಹಣ ಗ್ರಾಮಪಂಚಾಯಿತಿ ಚುನಾವಣೆಗೆ ಖರ್ಚಾಗಿದೆ ಎಂದು ಮಾಹಿತಿ ಲಭ್ಯವಾಗುತ್ತಿದೆ. ಕೆಲವರು 10ರಿಂದ 20 ಲಕ್ಷ ರೂ ಖರ್ಚು ಮಾಡಿದ್ದರೆ, ಇನ್ನು ಕೆಲವೆಡೆ 40 ರಿಂದ 50 ಲಕ್ಷದವರೆಗೆ ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ವಚ್ಛ ಭಾರತ್ ಮಿಷನ್: ಆಮೆಗತಿಯಲ್ಲಿ ಕೆಲಸ – ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ತರಾಟೆ

ಮನೆಗಳಲ್ಲಿ ಜಗಮಗಿಸಿದ ಕುಕ್ಕರ್, ಮಹಿಳೆಯರಿಗೆ ಮೂಗುಬೊಟ್ಟು!?

ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಹಣದ ಜೊತೆಗೆ ಮತದಾರರಿಗೆ ಗಿಫ್ಟ್‌ಗಳು ಸಹ ಸಿಕ್ಕಿವೆ. ಅದರಲ್ಲೂ ಮಹಿಳೆಯರ ಮತಗಳನ್ನ ಸೆಳೆಯುವ ದೃಷ್ಟಿಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳು ಕುಕ್ಕರ್‌ಗಳ ಜೊತೆಗೆ ಹಲವೆಡೆ ಮೂಗುಬೊಟ್ಟುಗಳನ್ನು ಸಹ ಉಡುಗೊರೆಯಾಗಿ ನೀಡಿರುವುದು ಮತ್ತೊಂದು ವಿಶೇಷ. ಇದರ ಜೊತೆಗೆ ರೇಷ್ಮೆ ಸೀರೆಗಳನ್ನು ಸಹ ನೀಡಿ ನಮಗೆ ಮತಕೊಡಿ ಎಂದು ಅಭ್ಯರ್ಥಿಗಳು ಚುನಾವಣಾ ಪ್ರಚಾರ ಮಾಡಿರುವುದಾಗಿ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಇನ್ನೂ ಕೆಲವೆಡೆ ಮಹಿಳೆಯರಿಗೆ ಬೇಕಾಗಿರುವ ಅಡುಗೆ ಪಾತ್ರೆಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ.

ಲೋಕಲ್ ಕುಡಿಯುತ್ತಿದ್ದವರು ಗ್ಲೋಬಲ್ ಎಣ್ಣೆಗೆ ಫಿಕ್ಸ್!?

ಯಾವುದೇ ಚುನಾವಣೆಗಳು ನಡೆಯಲಿ ಅಲ್ಲಿ ಎಣ್ಣೆಪಾರ್ಟಿಗಳು ಇಲ್ಲಾಂದ್ರೆ ಆ ಚುನಾವಣೆಗಳಲ್ಲಿ ರಿಯಲ್ ಖದರ್ ಇರೋದಿಲ್ಲ. ಆದರೆ ಈ ಬಾರಿಯ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕುಡುಕರಿಗೆ ಫುಲ್ ಹಬ್ಬವಾಗಿದೆ. ಯಾಕೆಂದರೆ 50 ರಿಂದ 80 ರೂಪಾಯಿ ಡ್ರಿಂಕ್ಸ್ ಕುಡಿಯುತ್ತಿದ್ದವರು ಚುನಾವಣೆ ಸಂದರ್ಭದಲ್ಲಿ 1 ರಿಂದ 2 ಸಾವಿರ ರೂಪಾಯಿ ಬೆಲೆಯ ಬ್ರಾಂಡೆಡ್ ಎಣ್ಣೆಗೆ ಆರ್ಡರ್ ಮಾಡಿರುವ ಪ್ರಸಂಗಗಳು ನಡೆದಿವೆ. ಚುನಾವಣಾ ಸಂದರ್ಭದಲ್ಲಿ ಏನನ್ನೂ ಹೇಳದ ಪರಿಸ್ಥಿತಿಯಲ್ಲಿದ್ದ ಅಭ್ಯರ್ಥಿಗಳು ಸಾಲಸೋಲ ಮಾಡಿ ಕುಡುಕರನ್ನ ಖುಷಿಪಡಿಸಿರುವ ಘಟನೆಗಳೇ ಸಾಕ್ಷಿ.

ಇದನ್ನೂ ಓದಿ: Pearl Valley: ಬೆಂಗಳೂರು ಸುತ್ತಲಿನ ಪ್ರವಾಸಿಗರನ್ನು ಸೆಳೆಯುತ್ತಿದೆ ಆನೇಕಲ್​ನ ಪರ್ಲ್ ವ್ಯಾಲಿ

ಒಟ್ಟಾರೆ ಈ ಹಿಂದೆಯೆಲ್ಲ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಶಾಸಕ, ಲೋಕಸಭಾ ಸದಸ್ಯ ಸ್ಥಾನದ ಚುನಾವಣೆಗಳಿಗೆ ಲಕ್ಷಲಕ್ಷ, ಕೋಟಿಕೋಟಿ ಹಣವನ್ನ ಖರ್ಚು ಮಾಡುತ್ತಿದ್ದ ಸಂದರ್ಭಗಳನ್ನ ನಾವುನೀವೆಲ್ಲರು ನೋಡಿದ್ದೇವೆ. ಆದರೆ ಈಗ ಗ್ರಾಮಪಂಚಾಯಿತಿ ಚುನಾವಣೆಗಳಿಗೂ ಸಹ ಲಕ್ಷಲಕ್ಷ, ಕೋಟಿಕೋಟಿ ಹಣ ಖರ್ಚು ಮಾಡುತ್ತಿರುವುದನ್ನ ನಿಜಕ್ಕೂ ನಂಬಲೇಬೇಕಿದೆ. ಈ ರೀತಿಯ ಚುನಾವಣೆಗಳಿಂದ ಗ್ರಾಮಗಳು ಉದ್ಧಾರವಾಗುತ್ತವೆಯೇ ಎಂಬುದು ಮಾತ್ರ ಯಕ್ಷಪ್ರಶ್ನೆ.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: