HOME » NEWS » District » SEVEN VILLAGE WERE NOT CELEBRATE DEEPAVALI FESTIVAL IN CHAMARAJANAGARA DISTRICT RH NCHM

ಚಾಮರಾಜನಗರದ ಈ ಏಳು ಗ್ರಾಮಗಳಲ್ಲಿ ಇಂದು ದೀಪಾವಳಿ ಹಬ್ಬ ಇಲ್ಲ! ಯಾಕೆ ಗೊತ್ತಾ?

ಬಹಳ ದಿನಗಳ ಹಿಂದೆ ಬೇರೆ ವಾರದಂದು ಹಬ್ಬ ಆಚರಿಸಿದ್ದರಿಂದ ಎತ್ತುಗಳಿಗೆ ರೋಗ ಬಂದು ಮೃತಪಟ್ಟಿದ್ದವಂತೆ. ಹಾಗಾಗಿ ತಲೆತಲಾಂತರಗಳಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ವೀರನಪುರದ ಗ್ರಾಮದ ಮಹದೇವಮ್ಮ.

news18-kannada
Updated:November 16, 2020, 4:18 PM IST
ಚಾಮರಾಜನಗರದ ಈ ಏಳು ಗ್ರಾಮಗಳಲ್ಲಿ ಇಂದು ದೀಪಾವಳಿ ಹಬ್ಬ ಇಲ್ಲ! ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ನವೆಂಬರ್ 16); ದೇಶಾದ್ಯಂತ ಇಂದು ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆದರೆ ಚಾಮರಾಜನಗರ ಜಿಲ್ಲೆಯ  ಏಳು ಗ್ರಾಮಗಳಲ್ಲಿ ಇಂದು ದೀಪಾವಳಿ ಆಚರಣೆ ಮಾಡುತ್ತಿಲ್ಲ. ಬಲಿಪಾಡ್ಯಮಿ ಬುಧವಾರ ಬಂದರೆ ಮಾತ್ರ ಇಲ್ಲಿ ದೀಪಾವಳಿಯನ್ನು ಇತರ ಕಡೆಗಳಂತೆ ಆಚರಿಸಲಾಗುತ್ತೆ. ಆದರೆ ಈ ವರ್ಷ ಬಲಿಪಾಡ್ಯಮಿ ಸೋಮವಾರ ಬಂದಿರುವುದರಿಂದ ಇಂದು ದೀಪಾವಳಿ ಆಚರಿಸುತ್ತಿಲ್ಲ.

ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ, ವೀರನಪುರ, ಮಾಡ್ರಳ್ಳಿ ಬನ್ನಿತಾಳಪುರ, ಬೆಂಡಗಳ್ಳಿ, ನೇನೆಕಟ್ಟೆ, ಹಾಗೂ ನಲ್ಲೂರು ಗ್ರಾಮಗಳಲ್ಲಿ ತಲೆತಲಾಂತರದಿಂದ ಈ ವಿಚಿತ್ರ ಆಚರಣೆ ಜಾರಿಯಲ್ಲಿದೆ. ಬುಧವಾರ ಬಿಟ್ಟು ಬೇರೆ ದಿನ ದೀಪಾವಳಿ ಆಚರಿಸಿದರೆ ಕೆಡಕು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹಾಗಾಗಿ ಈ ವರ್ಷ ಇಂದು ಸೋಮವಾರದ ಬದಲು ಬುಧವಾರ ದೀಪಾವಳಿ ಹಬ್ಬ ಆಚರಿಸುತ್ತಾರೆ.

ಸಂಪ್ರದಾಯ ಮೀರಿ ಬೇರೆ ದಿನ ದೀಪಾವಳಿ ಆಚರಣೆ ಮಾಡಿದರೆ ಜನರಿಗೆ ಹಾಗೂ ದನಕರುಗಳಿಗೆ ತೊಂದರೆಯಾಗುತ್ತದೆ ಎಂದು ಬಲವಾಗಿ ನಂಬಿರುವ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಬುಧವಾರವಲ್ಲದೆ ಬೇರೆ ದಿನಗಳಲ್ಲಿ ಬೆಳಕಿನ ಹಬ್ಬ ಆಚರಿಸುವುದಿಲ್ಲ ಎನ್ನುತ್ತಾರೆ.

ಇದನ್ನು ಓದಿ: ಲಿಂಗಾಯಿತರಿಗೆ ಅಭಿವೃದ್ಧಿ ನಿಗಮದ ಬದಲು ಶೇ.16 ಮೀಸಲಾತಿ ನೀಡಿ; ಸಿಎಂ ಬಿಎಸ್​ವೈಗೆ ಮಾಜಿ ಸಚಿವ ಎಂ.ಬಿ. ಪಾಟೀಲ ಪತ್ರ

ಈ ಏಳು ಊರುಗಳಿಗೆ ಇಂಗಲವಾಡಿಯ ಮಹದೇಶ್ವರ ಆರಾಧ್ಯದೈವ. ದೀಪಾವಳಿ ಹಬ್ಬ ಆಚರಿಸಲಾಗುವ ಬುಧವಾರ ಎತ್ತುಗಳ ಮೈ ತೊಳೆದು  ಅಲಂಕಾರ ಮಾಡಿ  ಅವುಗಳನ್ನು ದೇವಸ್ಥಾನಕ್ಕೆ  ಹೊಡೆದುಕೊಂಡು  ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ಅಲ್ಲಿಂದ ತೀರ್ಥ ತಂದು ದನಕರುಗಳಿಗೆ ಪ್ರೋಕ್ಷಣೆ ಮಾಡುತ್ತೇವೆ. ಎಳ್ಳು, ಕಾಯಿ ಬೆಲ್ಲ ರುಬ್ಬಿ ದನಕರುಗಳಿಗೆ ತಿನಿಸಿ ಕಿಚ್ಚು ಹಾಯಿಸುತ್ತೇವೆ. ಮನೆಯಲ್ಲಿ ಸಿಹಿ ಮಾಡಿ ಹಬ್ಬ ಆಚರಿಸುತ್ತೇವೆ. ಬುಧವಾರ ಬಿಟ್ಟು ಬೇರೆ ದಿನಗಳಲ್ಲಿ ದೀಪಾವಳಿ ಬಂದರೆ ಆ ದಿನಗಳಲ್ಲಿ ನಾವು ಪಟಾಕಿಯನ್ನು ಸಹ ಹೊಡೆಯುವುದಿಲ್ಲ ಎಂದು  ನ್ಯೂಸ್ 18 ಗೆ ವೀರನಪುರದ ಗ್ರಾಮದ ಲೋಕೇಶ್ ತಿಳಿಸಿದರು.

ಒಂದು ವೇಳೆ ಬಲಿಪಾಡ್ಯಮಿ ಗುರುವಾರ ಬಂದರೂ ಸಹ ದೀಪಾವಳಿ ಆಚರಣೆ ಮಾಡದೆ ಒಂದು ವಾರ ಕಾದು ಮುಂದಿನ ಅದರ ಬುಧವಾರ ಆಚರಿಸುತ್ತೇವೆ. ಬಹಳ ದಿನಗಳ ಹಿಂದೆ ಬೇರೆ ವಾರದಂದು ಹಬ್ಬ ಆಚರಿಸಿದ್ದರಿಂದ ಎತ್ತುಗಳಿಗೆ ರೋಗ ಬಂದು ಮೃತಪಟ್ಟಿದ್ದವಂತೆ. ಹಾಗಾಗಿ ತಲೆತಲಾಂತರಗಳಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ವೀರನಪುರದ ಗ್ರಾಮದ ಮಹದೇವಮ್ಮ.ವರದಿ; ಎಸ್.ಎಂ.ನಂದೀಶ್
Published by: HR Ramesh
First published: November 16, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading