news18-kannada Updated:January 14, 2021, 6:44 PM IST
ಕತ್ತಿ ಹಿಡಿದು ಕುಣಿದ ಯುವಕರ ಗುಂಪು.
ಕಲಬುರ್ಗಿ; ಕೋವಿಡ್ ಸೋಂಕು ಬಂದ ನಂತರ ಬಹುತೇಕರು ಸಾರ್ವಜನಿಕ ಸ್ಥಳಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳೋದನ್ನು ಬಿಟ್ಟಿದ್ದಾರೆ. ಆದರೆ ಕಲಬುರ್ಗಿಯಲ್ಲೊಂದು ಯುವಕರ ಗುಂಪು ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿದೆ. ಅಷ್ಟೇ ಅಲ್ಲದೇ ರಾಜಾರೋಷವಾಗಿ ತಲ್ವಾರ್ ಗಳನ್ನು ಝಳಪಿಸಿ, ಜನತೆಯಲ್ಲಿ ಆತಂಕ ಸೃಷ್ಟಿಸಿದ್ದಾರೆ. ಹುಟ್ಟು ಹಬ್ಬ ಆಚರಣೆ ವೇಳೆ ಯುವಕರ ಗುಂಪು ತಲ್ವಾರ್ ಹಿಡಿದು ಝಳಪಿಸಿದ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ.
ಕಲಬುರ್ಗಿಯ ಮೆಹಬೂಬ ನಗರದಲ್ಲಿ ಗೆಳೆಯನ ಹುಟ್ಟು ಹಬ್ಬದ ಸಂದರ್ಭದಲ್ಲಿ ತಲ್ವಾರ್ ಹಿಡಿದು, ಡಿ.ಜೆ. ಗೆ ಹೆಜ್ಜೆ ಹಾಕಿದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಂಡ ಯುವಕ ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇಮ್ರಾನ್, ತಬ್ರೇಜ್, ರಶೀದ್, ಅಫ್ರೋಜ್, ತಲ್ಹಾ, ಸೋಹೆಲ್ ಹಾಗೂ ಜಹೀರ್ ಎಂದು ಗುರುತಿಸಲಾಗಿದೆ. ಇಮ್ರಾನ್ ಎನ್ನುವವನ ಬರ್ತಡೇ ಇದ್ದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಕೋವಿಡ್ ನಡುವೆಯೂ ಸಾರ್ವಜನಿಕ ಸ್ಥಳದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು. ಅನುಮತಿ ಇಲ್ಲದೆಯೇ ಸಾರ್ವಜನಿಕ ಸ್ಥಳದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿಯೇ ವೇದಿಕೆ ಮೇಲೆ ತಲ್ವಾರ್ ಹಿಡಿದು ಯುವಕರು ಕುಣಿದು ಕುಪ್ಪಳಿಸಿದ್ದರು. ಅಲ್ಲದೇ ಆ ವೀಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಈ ಘಟನೆ ಕಲಬುರ್ಗಿ ಜನತೆಯಲ್ಲಿ ಆತಂಕ ಹುಟ್ಟಿಸಿತ್ತು. ಸಾಮಾಜಿಕ ಜಾಲ ತಾಣದಲ್ಲಿ ವೀಡಿಯೋ ಅಪ್ ಲೋಡ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ತಲ್ವಾರ್ ಹಿಡಿದು ಕುಣಿದ ಏಳು ಯುವಕರನ್ನು ಬಂಧಿಸಿದ್ದಾರೆ.
ಇದನ್ನು ಓದಿ: ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗೂ ಹಸಿರು ಮಾರ್ಗದ ಮೆಟ್ರೋ ರೈಲಿಗೆ ಸಿಎಂ ಬಿಎಸ್ವೈ ಚಾಲನೆ
ಕಲಬುರ್ಗಿ ಎ ಡಿವಿಜನ್ ಎಸಿಪಿ ಅಂಶುಕುಮಾರ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸೆಕ್ಷನ್ 107 ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತರ ಪೈಕಿ ಬಹುತೇಕರು ವಿದ್ಯಾರ್ಥಿಗಳಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸಿಪಿ ಅಂಶುಕುಮಾರ್, ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಅಪಾಯಕಾರಿ ಮಾರಕಾಸ್ತ್ರಗಳನ್ನು ಹಿಡಿದು ಕುಣಿದಿದ್ದಾರೆ. ಸಾರ್ವಜನಿಕವಾಗಿ ಅಪಾಯಕಾರಿ ಆಯುಧ ಹಿಡಿದು ಈ ರೀತಿ ವರ್ತಿಸೋದು ಕಾನೂನು ಬಾಹಿರ. ಯಾವುದೇ ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು, ತಲ್ವಾರ್ ಹಿಡಿದು ಕುಣಿಯೋ ಮೂಲಕ ಜನತೆಯಲ್ಲಿ ಆತಂಕ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಏಳೂ ಯುವಕರನ್ನು ಬಂಧಿಸಿದ್ದೇವೆ ಎಂದು ಅಂಶುಕುಮಾರ್ ತಿಳಿಸಿದ್ದಾರೆ.
ಈ ಹಿಂದೆಯೂ ಸಹ ಕಲಬುರ್ಗಿ ಜಿಲ್ಲೆಯಲ್ಲಿ ತಲ್ವಾರ್ ನಿಂದಲೇ ಕೇಕ್ ಕತ್ತರಿಸಿದ್ದ, ತಲ್ವಾರ್ ಹಿಡಿದು ಕುಣಿದಿದ್ದ ಘಟನೆಗಳು ನಡೆದಿದ್ದವು. ಆ ವೇಳೆ ಕೆಲ ರೌಡಿ ಶೀಟರ್ ಮತ್ತಿತರರನ್ನು ಬಂಧಿಸಲಾಗಿತ್ತು. ಆದರೆ ಇದೀಗ ವಿದ್ಯಾರ್ಥಿಗಳ ಗುಂಪೊಂದು ಈ ರೀತಿ ಹುಟ್ಟು ಹಬ್ಬ ಆಚರಿಸಿಕೊಂಡಿದೆ.
Published by:
HR Ramesh
First published:
January 14, 2021, 6:44 PM IST