ಬಿಜೆಪಿಗೆ ಬೆಂಬಲ ನೀಡಿದ 7 ಜೆಡಿಎಸ್ ಸದಸ್ಯರು ಅನರ್ಹ; ಜಿಲ್ಲಾಧಿಕಾರಿಗಳ ಕೋರ್ಟ್ ಆದೇಶ

Hassan Politics- ಸ್ವಪಕ್ಷದ ವಿರುದ್ಧ ತಿರುಗಿಬಿದ್ದಿದ್ದ ಅರಸೀಕೆರೆ ನಗರಸಭೆಯ ಜೆಡಿಎಸ್ ಸದಸ್ಯರಿಗೆ ಸಂಕಷ್ಟ ಎದುರಾಗಿದೆ. ತಮ್ಮನ್ನು ಅನರ್ಹಗೊಳಿಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಇವರು ನಿರ್ಧಾರ ಮಾಡಿದ್ಧಾರೆ.

ಅರಸೀಕೆರೆ ನಗರಸಭೆಯ ಜೆಡಿಎಸ್ ಸದಸ್ಯರು

ಅರಸೀಕೆರೆ ನಗರಸಭೆಯ ಜೆಡಿಎಸ್ ಸದಸ್ಯರು

  • Share this:
ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಅರಸೀಕೆರೆ ಬಂಡಾಯ ಸದಸ್ಯರ ತೀರ್ಪು ಹೊರಬಿದ್ದಿದೆ. ಜೆಡಿಎಸ್ ಪಕ್ಷದಿಂದ ಜಯಗಳಿಸಿ ನಂತರ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿದ್ದ ಹಾಸನ ಜಿಲ್ಲೆ, ಅರಸೀಕೆರೆ ನಗರಸಭೆಯ ಏಳು ಜೆಡಿಎಸ್ ಸದಸ್ಯರನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

ಅರಸೀಕೆರೆ ನಗರಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿ ಆಯ್ಕೆಗೊಂಡಿದ್ದ ಒಂದನೇ ವಾರ್ಡ್​ನ ಎಂ.ಎಸ್. ಹರ್ಷವರ್ಧನ್ ರಾಜ್, ಒಂಭತ್ತನೇ ವಾರ್ಡ್​ನ ಚಂದ್ರಶೇಖರಯ್ಯ, 18 ವಾರ್ಡ್​ನ ಎನ್. ಕವಿತಾದೇವಿ, 19 ವಾರ್ಡ್​ನ ಎ.ವಿ. ದರ್ಶನ್, 25 ನೇ ವಾರ್ಡ್​ನ ಬಿ.ಎನ್. ವಿದ್ಯಾಧರ್, 28 ನೇ ವಾರ್ಡ್​ನ ಆಯಿಷಾ, 15 ನೇ ವಾರ್ಡ್​ನ ಪುಟ್ಟಸ್ವಾಮಿ, ಎರಡನೇ ವಾರ್ಡ್​ನ ಕಲೈ ಅರಸಿ ಜೂನ್ 22 ರಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ದ ಬಂಡಾಯವೆದ್ದು, ಬಹುಮತ ಇಲ್ಲದಿದ್ದರೂ ಮೀಸಲಾತಿ ಮೂಲಕ ನಗರಸಭೆ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಬೆಂಬಲಿಸುವ ನಿರ್ಧಾರ ಕೈಗೊಂಡು ಪ್ರತ್ಯೇಕ ಆಸನ ನೀಡುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದ್ದರು.

ಶಾಸಕರಿಂದ ಉಸಿರುಗಟ್ಟುವ ವಾತಾವರಣ ಎಂದು ಅಳಲು:

ಅರಸೀಕೆರೆ ಜೆಡಿಎಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡರಿಂದ ತಮಗೆ ಉಸಿರುಗಟ್ಟಿಸುವ ವಾತಾವರಣವಿದೆ. ಇದರಿಂದ ಗೆದ್ದಿರುವ ಮೂರನೇ ಒಂದು ಭಾಗದ ಸದಸ್ಯರು ಪಕ್ಷ ತೊರೆದು ಹೊರ ಬರುತ್ತಿದ್ದೇವೆ. ನಮಗೆ ನಗರಸಭೆಯಲ್ಲಿ ಕೂರಲು ಪ್ರತ್ಯೇಕ ಆಸನ ವ್ಯವಸ್ಥೆ ನೀಡಬೇಕು. ಹಾಗೆಯೇ ನಾವು ವಿಷಯಾಧಾರಿತವಾಗಿ ಬಿಜೆಪಿಯಿಂದ ಅಧ್ಯಕ್ಷರಾಗಿರುವ ಗಿರೀಶ್ ಅವರನ್ನು ಬೆಂಬಲಿಸುತ್ತೇವೆ ಎಂದು ಹೇಳಿ ಡಿಸಿ ಅವರಿಗೆ ಒಂದು ಮನವಿ ಸಲ್ಲಿಸಿದ್ದರು.

ಬಿಜೆಪಿಯ ಆಪರೇಷನ್ ಕಮಲ ಆರೋಪ:

ಇದಾದ ಮಾರನೇ ದಿನವೇ ಎರಡನೇ ವಾರ್ಡ್ ಸದಸ್ಯೆ ಕಲೈ ಅರಸಿ ವಾಪಸ್ ಜೆಡಿಎಸ್ ನಾಯಕರ ಬಳಿ ತೆರಳಿ, ಬಿಜೆಪಿಯವರು ನಮಗೆ ಹತ್ತು ಲಕ್ಷ ಆಮಿಷವೊಡ್ಡಿದ್ದಾರೆ. ಅಂದು ಸಿಎಂ ಆಗಿದ್ದಾಗ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಲವಂತವಾಗಿ ಅವರ ಆಪ್ತರ ಮೂಲಕ 10 ಲಕ್ಷ ಹಣವನ್ನು ಮನೆಯಲ್ಲಿಟ್ಟು ಹೋಗಿದ್ದರು ಎಂದು ಆಪರೇಷನ್ ಕಮಲದ ಬಾಂಬ್ ಸಿಡಿಸಿದ್ದರು.

ಇದನ್ನೂ ಓದಿ: Hubli Thief: ಪೊಲೀಸರನ್ನೇ ಯಾಮಾರಿಸಿದ್ದ ಖದೀಮ ಬರೋಬ್ಬರಿ 21 ವರ್ಷಗಳ ಬಳಿಕ ಸಿಕ್ಕಿಬಿದ್ದ!

ಪಕ್ಷಾಂತರ ನಿಷೇಧ ಕಾಯ್ದೆ ಅಸ್ತ್ರ:

ಆನಂತರದಲ್ಲಿ ಏಳು ಸದಸ್ಯರ ಮನವಿ ಸ್ವೀಕರಿಸಿದ್ದ ಜಿಲ್ಲಾಧಿಕಾರಿಗಳು ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷರು, ಜಿಲ್ಲಾಅಧ್ಯಕ್ಷರು, ತಾಲೂಕು ಅಧ್ಯಕ್ಷರಿಗೆ ನೋಟೀಸ್ ನೀಡಿದ್ದರು. ಈ ನೋಟೀಸ್ ಅನ್ನೇ ಅಸ್ತ್ರಮಾಡಿಕೊಂಡ ಜೆಡಿಎಸ್ ನಾಯಕರು, ಬಂಡಾಯ ಸದಸ್ಯರ ವಿರುದ್ಧ ಅನರ್ಹತೆಯ ಬಾಣ ಪ್ರಯೋಗಿಸಿ, ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಎಂದು ಡಿಸಿ ಕೋರ್ಟ್‌ನಲ್ಲಿ ದೂರು ನೀಡಿಲಾಗಿತ್ತು. ಹುಣಸೂರು, ಮಂಡ್ಯ ಚಾಮರಾಜನಗರದಲ್ಲಿಯೂ ಕೆಲವು ಸದಸ್ಯರು ಬಂಡಾಯವೆದ್ದಾಗ ಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖಿಸಿ ವಾದ ಮಂಡಿಸಿತ್ತು.

ಜಿಲ್ಲಾಧಿಕಾರಿಗಳ ಆದೇಶ:

ಎರಡು ಕಡೆಯವರ ವಾದ ವಿವಾದ ಆಲಿಸಿದ ಜಿಲ್ಲಾಧಿಕಾರಿ ತೀರ್ಪು ನೀಡಿದ್ದು, ಎಲ್ಲಾ ಏಳು ಜನರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ. ನಗರಸಭೆ ಚುನಾವಣೆಯಲ್ಲಿ ಗೆದ್ದಿದ್ದ 21 ಜನ ಸದಸ್ಯರಲ್ಲಿ 7 ಜನ ಸದಸ್ಯರು ಪಕ್ಷಾಂತರ ನಿಷೇಧ ಕಾಯಿದೆ ಅಡ್ಡಿಯಾಗಲ್ಲ ಎನ್ನುವ ಲೆಕ್ಕಾಚಾರದಿಂದ ಪಕ್ಷ ತೊರೆಯೋಕೆ ಮುಂದಾಗಿದ್ದವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಧ್ಯಕ್ಷರ ಬದಲು ಡಿಸಿಗೆ ರಾಜೀನಾಮೆ ಸಲ್ಲಿಸಿ ಯಡವಟ್ಟು:

ಒಟ್ಟು 31 ಸದಸ್ಯ ಬಲದ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್​ನಿಂದ 21 ಸದಸ್ಯರು ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು. ಆದರೆ ಮೀಸಲಾತಿ ಅಸ್ತ್ರ ಬಳಸಿ ಜೆಡಿಎಸ್​ಗೆ ಅಧಿಕಾರ ತಪ್ಪಿಸಿದ ಬಿಜೆಪಿ ತಮ್ಮ ಪಕ್ಷದಿಂದ ಗೆದ್ದ 9 ಜನರಲ್ಲಿ ಪರಿಶಿಷ್ಟ ಪಂಗಡದ ಸದಸ್ಯನನ್ನು ಅಧ್ಯಕ್ಷನನ್ನಾಗಿ ಮಾಡಲಾಗಿತ್ತು. ಅಧ್ಯಕ್ಷರಾದ ನಂತರ ಬಹುಮತಕ್ಕಾಗಿ ಆಪರೇಷನ್ ಕಮಲ ಮಾಡಲು ಮುಂದಾಗಿದ್ದ ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ಏಳು ಜೆಡಿಎಸ್ ಸದಸ್ಯರನ್ನು ಆಪರೇಷನ್ ಮಾಡುವ ಮೂಲಕ ಬಿಜೆಪಿಗೆ ಬೆಂಬಲ ನೀಡುವಂತೆ ಮಾಡಿದ್ದರು. ಆದರೆ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡುವ ಬದಲು ಜಿಲ್ಲಾಧಿಕಾರಿಗೆ ರಾಜೀನಾಮೆ ನೀಡಿದ್ದ ಏಳು ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: ಮಳೆಹಾನಿ ಮಾಹಿತಿ ನೀಡಿದ 24 ಗಂಟೆಗಳಲ್ಲಿ ರೈತರಿಗೆ ಪರಿಹಾರ: ಕೋಲಾರದಲ್ಲಿ CM Bommai ಘೋಷಣೆ

ಮತ್ತೊಂದೆಡೆ ಮೂರನೇ ಒಂದು ಭಾಗ ಹೊರ ಬಂದಿದ್ದೇವೆ ಎಂದು ಕೊಂಡಿದ್ದವರಿಗೆ ಒಬ್ಬರನ್ನು ಪಕ್ಷ ಬಿಡದಂತೆ ಮಾಡುವಲ್ಲಿ ಜೆಡಿಎಸ್ ನಾಯಕರು ಯಶಸ್ವಿಯಾಗಿದ್ದರು. ಇನ್ನೊಂದೆಡೆ ಜೆಡಿಎಸ್ ಸದಸ್ಯರಿಗೆ ಬಿಜೆಪಿ ನಾಯಕರು 10 ಲಕ್ಷ ಆಮಿಷವನ್ನು ಬಿಜೆಪಿ ನಾಯಕರು ಒಡ್ಡಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಸುದ್ದಿಗೋಷ್ಠಿ ನಡೆಸಿ‌ ಹಣ ಪ್ರದರ್ಶನ ಮಾಡಿದ್ದರು.

ನಗರಸಭೆ ಚುನಾವಣೆಯಲ್ಲಿ ಗೆದ್ದು ಎರಡು ವರ್ಷ ಸದಸ್ಯರಾಗಿ ಪ್ರಮಾಣ ವಚನವನ್ನೇ ಸ್ವೀಕರಿಸದೆ ಉಳಿದಿದ್ದ ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟವಾದ ಬಳಿಕ ರಾಜಕೀಯ ಮೇಲಾಟದಿಂದ ಅಧಿಕಾರ ನಡೆಸಲಾಗದೆ ಕಂಗೆಟ್ಟು ಹೋಗಿದ್ದರು. ಈಗ ಜೆಡಿಎಸ್‌ನಿಂದ ಬಂಡಾಯವೆದ್ದು ಬಿಜೆಪಿಯತ್ತ ಬೆಂಬಲ ನೀಡಲು ಹೊರಟ್ಟಿದ್ದವರಿಗೆ ನ್ಯಾಯಾಲಯದ ತೀರ್ಪು ಶಾಕ್ ನೀಡಿದೆ. ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷದ ತೆಕ್ಕೆಗೆ ಸೇರಿ ಜನರಿಗೆ ದ್ರೋಹ ಮಾಡಿದವರಿಗೆ ತಕ್ಕ ಶಾಸ್ತಿ ಆಗಿದೆ ಎಂದು ಜೆಡಿಎಸ್ ಹೇಳಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆಗೆ Congress Candidate List ಬಿಡುಗಡೆ: 17 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಹೈಕೋರ್ಟ್​ನಲ್ಲಿ ಮೇಲ್ಮನವಿಗೆ ನಿರ್ಧಾರ:

ಇದೇ ವೇಳೆ, ತೀರ್ಪನ್ನು ಸ್ವಾಗತಿಸಿರುವ ಅನರ್ಹ ಸದಸ್ಯರು, ಜನರು ನಮ್ಮನ್ನು ಶಾಸಕರ ಮುಖ ನೋಡಿ ಆಯ್ಕೆ ಮಾಡಿದ್ದರೋ ಅಥವಾ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಿಕಿತ್ತೋ ಎಂಬುದು ಮುಂದೆ ತಿಳಿಯಲಿದೆ. ಮುಂದೆ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಹೈಕೋರ್ಟ್ ಮೇಲ್ಮನವಿ ಸಲ್ಲಿಸುವುದಾಗಿ ಅಥವಾ ಚುನಾವಣೆಗೆ ಹೋಗುವುದೋ ಎಂದು ಶೀಘ್ರದಲ್ಲಿ ನಿರ್ಣಯಿಸುತ್ತೇವೆ ಎಂದು ಅನರ್ಹ ಸದಸ್ಯೆ ಆಯಿಷಾ ಅವರ ಪತಿ ಸಿಖಂದರ್ ಹೇಳಿದ್ದಾರೆ.

ವರದಿ: ಶಶಿಧರ್ ಬಿ.ಸಿ.
Published by:Vijayasarthy SN
First published: