ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ದೇಶದಲ್ಲಿ ಕಳೆದ 2 - 3 ವರ್ಷಗಳಿಂದ ಡ್ರಗ್ಸ್(Drugs) ವಿರುದ್ಧ ಎನ್ಸಿಬಿ(NCB) ಸೇರಿ ಹಲವು ಪೊಲೀಸರು ಮಾದಕ ದ್ರವ್ಯದ ವಿರುದ್ಧ ಎಡೆ ಮುರಿ ಕಟ್ಟಿಹಾಕಲು ಪ್ರಯತ್ನಿಸುತ್ತಲೇ ಇದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿ, ಉದ್ಯಮಿಗಳು, ದೇಶ, ವಿದೇಶದ ಡ್ರಗ್ ಪೆಡ್ಲರ್ಗಳನ್ನು, ಆನ್ಲೈನ್ ಮೂಲಕ ಡ್ರಗ್ಸ್ ಖರೀದಿಸುತ್ತಿರುವವರನ್ನು ಹೀಗೆ ಹಲವರನ್ನು ಬಂಧಿಸಲಾಗುತ್ತಿದ್ದು, ಹಲವರ ಮನೆ, ಕಚೇರಿಗಳನ್ನು ರೇಡ್ ಮಾಡಲಾಗುತ್ತಿದೆ. ಆದರೆ, ರಾಜ್ಯದ ವಾಣಿಜ್ಯ ರಾಜಧಾನಿಯಾದ ಹುಬ್ಬಳ್ಳಿ(Hubli) ನಗರದಲ್ಲಿ ಪೊಲೀಸರೇ ಗಾಂಜಾ ಮಾರಾಟ ಮಾಡಿರುವ ಆರೋಪ ಎದುರಾಗಿದೆ. ಈ ಸಂಬಂಧ ಏಳು ಪೊಲೀಸ್ ಸಿಬ್ಬಂದಿಯನ್ನು(Police Suspend) ಅಮಾನತುಗೊಳಿಸಲಾಗಿದೆ.
ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಕೆ ರಾಮರಾಜನ್ ಅವರಿಂದ ವರದಿ ಸ್ವೀಕರಿಸಿದ ನಂತರ ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತ ಲಾಭು ರಾಮ್ ಅಮಾನತು ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡಿರುವ ಏಳು ಪೋಲಿಸರಲ್ಲಿ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್ಐ ಕರಿಯಪ್ಪ ಗೌಡರ್, ಹೆಡ್ ಕಾನ್ಸ್ಟೇಬಲ್ಗಳಾದ ವಿಕ್ರಮ್ ಪಾಟೀಲ್, ನಾಗರಾಜ್ ಮತ್ತು ಶಿವಕುಮಾರ್ ಸೇರಿ ಐವರು ಎಪಿಎಂಸಿ ಪೊಲೀಸ್ ಠಾಣೆಗೆ ಸೇರಿದ್ದಾರೆ.
ಇನ್ನುಳಿದ ಇಬ್ಬರು ಪೊಲೀಸರು - ಮಹಿಳಾ ಕಾನ್ಸ್ಟೇಬಲ್ ದಿಲ್ಷಾದ್ ಮತ್ತು ಹೆಡ್ ಕಾನ್ಸ್ಟೇಬಲ್ ಹೊನ್ನಪ್ಪನವರ್ - ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ಪೊಲೀಸ್ ಸಿಬ್ಬಂದಿ ಸೆಪ್ಟೆಂಬರ್ 30ರಂದು ಗಾಂಜಾ ಪೂರೈಕೆಗೆ ಸಂಬಂಧಿಸಿದ ಮಾಹಿತಿ ಪಡೆದರು. ನಂತರ ಪೊಲೀಸರು ಇಬ್ಬರನ್ನು ಬಂಧಿಸಿ 1 ಕೆಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆದರೆ ಪೊಲೀಸರು ಲಂಚ ಪಡೆದು ಕಳ್ಳಸಾಗಣೆದಾರರನ್ನು ಬಿಟ್ಟು ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆರೋಪಿ ಪೊಲೀಸ್ ಸಿಬ್ಬಂದಿ ಶಂಕಿತ ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾವನ್ನು ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಮಾಧ್ಯಮಗಳು ಈ ವಿಷಯವನ್ನು ಹೈಲೈಟ್ ಮಾಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಆರೋಪದ ಆಧಾರದ ಮೇಲೆ, ಪೊಲೀಸ್ ಆಯುಕ್ತ ಲಾಭು ರಾಮ್ ಈ ಸಂಬಂಧ ವರದಿ ಸಲ್ಲಿಸುವಂತೆ ಉಪ ಪೊಲೀಸ್ ಆಯುಕ್ತ ಕೆ ರಾಮರಾಜನನ್ನು ಕೇಳಿದ್ದರು.ವಿಚಾರಣೆಯ ನಂತರ, ಡಿಸಿಪಿ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಎರಡು ಪೊಲೀಸ್ ಠಾಣೆಗಳ ಏಳು ಪೊಲೀಸರ ಬಗ್ಗೆ ವರದಿ ತಯಾರಿಸಿ ಅದನ್ನು ಆಯುಕ್ತರಿಗೆ ಸಲ್ಲಿಸಿದರು.
ಶಂಕಿತ ಅಪರಾಧದ ವರದಿ ಸಲ್ಲಿಸಿದ ನಂತರ, ಆಯುಕ್ತರು ಏಳು ಪೊಲೀಸರನ್ನು ಅಮಾನತುಗೊಳಿಸಿದರು ಎಂದು ಡಿಸಿಪಿ ಕೆ ರಾಮರಾಜನ್ ಹೇಳಿದರು. ಇಲಾಖಾ ವಿಚಾರಣೆ ನಡೆಯುತ್ತಿದೆ, ನಂತರ ಆರೋಪಿಗಳ ವಿರುದ್ಧ ಕಾನೂನಿನ ಪ್ರಕಾರ ಸಂಪೂರ್ಣ ಕ್ರಮ ಕೈಗೊಳ್ಳಲಾಗುವುದು ಎಂದೂ ಡಿಸಿಪಿ ಹೇಳಿದರು.
ಆದರೆ, ವಶಪಡಿಸಿಕೊಂಡ ಗಾಂಜಾ ಮತ್ತು ಅದರ ಮೌಲ್ಯದ ವಿವರಗಳನ್ನು ಹಂಚಿಕೊಳ್ಳಲು ಡಿಸಿಪಿ ನಿರಾಕರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ