news18-kannada Updated:October 7, 2020, 7:26 AM IST
ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಮತ್ತು ಡಿಸಿಪಿ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಕಮೀಷನರೇಟ್ನಲ್ಲಿ ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ ಜೋರಾಗಿದೆ. ಪೊಲೀಸ್ ಕಮೀಷನರ್ ಮತ್ತು ಡಿಸಿಪಿ ನಡುವೆ ಭಿನ್ನಾಭಿಪ್ರಾಯ ಬಹಿರಂಗವಾಗಿದೆ. ಪೊಲೀಸ್ ಆಯುಕ್ತ ಆರ್. ದಿಲೀಪ್ ಮತ್ತು ಡಿಸಿಪಿ ಕೃಷ್ಣಕಾಂತ್ ನಡುವೆ ಹಗ್ಗಜಗ್ಗಾಟ ಶುರುವಾಗಿದೆ. ಕಮೀಷನರ್ ಭೇಟಿಗೆ ಅವಕಾಶ ಕೊಡುತ್ತಿಲ್ಲವೆಂದು ಡಿಸಿಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಕಮೀಷನರಿಗೆ ಪತ್ರ ಬರೆದಿರುವ ಡಿಸಿಪಿ, ಪತ್ರದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಿದ್ದಾರೆ. ಸೂಕ್ಷ್ಮ ಪ್ರಕರಣದ ತನಿಖೆ ವಿಷಯವಾಗಿ ತಿಳಿಸಬೇಕಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಬೇಕಿದೆ. ಕಚೇರಿಗೆ ಬಂದರೆ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಫೋನ್ ಕರೆ ಮಾಡಿದ್ರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಪೊಲೀಸ್ ಆಯುಕ್ತರು ಭೇಟಿಗೆ ಅವಕಾಶ ಕೊಡಬೇಕು ಎಂದು ಡಿಸಿಪಿ ಕೃಷ್ಣಕಾಂತ್ ತಮ್ಮ ಪತ್ರದಲ್ಲಿ ನಮೂದು ಮಾಡಿದ್ದಾರೆ. ಫೋನ್ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಕಚೇರಿಗೆ ತೆರಳಿದ್ರೆ ಭೇಟಿಗೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ಕರ್ತವ್ಯ ನಿರ್ವಹಣೆಗೆ ಅಡಚಣೆಯಾಗುತ್ತಿದೆ ಎಂದು ಡಿಸಿಪಿ ವಿವರವಾಗಿ ಪತ್ರ ಬರೆದಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಇಬ್ಬರೂ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿರೋದು 20 ಪರ್ಸೆಂಟ್ ಸರ್ಕಾರ: ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಟೀಕೆ
ಇಲಾಖೆಯ ಆಂತರಿಕ ವಿಷಯ ಇದಾಗಿದ್ದು ಅಧಿಕಾರಿಗಳ ಜೊತೆಗೆ ಚರ್ಚಿಸಿ ಬಗೆಹರಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಈ ಘಟನೆಯಿಂದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹಿರಾಗಿದೆ. ಪೊಲೀಸ್ ಅಧಿಕಾರಿಗಳ ಶೀತಲ ಸಮರ ಸರ್ಕಾರಕ್ಕೆ ಮುಜುಗುರ ತಂದಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅಧಿಕಾರಿಗಳ ವೈನಮನಸ್ಸಿನ ವಿಚಾರ ನನ್ನ ಗಮನಕ್ಕೂ ಬಂದಿದೆ ಎಂದಿದ್ದಾರೆ. ಇಂತಹ ಘಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತೆ. ಆಡಳಿತ ವ್ಯವಸ್ಥೆ ಹದಗೆಡುತ್ತೆ. ನಾನು ಇಬ್ಬರೂ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಕಮೀಷನರ್ ಮತ್ತು ಡಿಸಿಪಿ ಜೊತೆ ಪ್ರತ್ಯೇಕವಾಗಿ ಚರ್ಚಿಸುತ್ತೇನೆ. ಗೃಹ ಸಚಿವ ಬೊಮ್ಮಾಯಿ ಅವರ ಜೊತೆಗೂ ಮಾತನಾಡುತ್ತೇನೆ. ಮೇಲಧಿಕಾರಿಗಳೊಂದಿಗೂ ಈ ವಿಷಯದ ಕುರಿತು ಚರ್ಚೆ ಮಾಡುತ್ತೇನೆ. ಈ ಸಮಸ್ಯೆಗೆ ಆದಷ್ಟು ಬೇಗ ಇತಿಶ್ರೀ ಹಾಡುತ್ತೇನೆ. ಕಮೀಷನರ್ ಆರ್. ದಿಲೀಪ್ ಮತ್ತು ಡಿಸಿಪಿ ಕೃಷ್ಣಕಾಂತ್ ನಡುವಿನ ಮುಸುಕಿನ ಗುದ್ದಾಟಕ್ಕೆ ಇತಿಶ್ರೀ ಹಾಡುತ್ತೇವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿ: ಪರಶುರಾಮ್ ತಹಶೀಲ್ದಾರ
Published by:
Vijayasarthy SN
First published:
October 7, 2020, 7:26 AM IST