• Home
  • »
  • News
  • »
  • district
  • »
  • ಇಲ್ಲಿ ಕೃಷಿ ಭೂಮಿ ಖರೀದಿ ಸುಲಭವಲ್ಲ; ಜಮೀನು ಮಾರಾಟಕ್ಕೆ ಬೇಕು ಜಿಲ್ಲಾಧಿಕಾರಿ ಅನುಮತಿ

ಇಲ್ಲಿ ಕೃಷಿ ಭೂಮಿ ಖರೀದಿ ಸುಲಭವಲ್ಲ; ಜಮೀನು ಮಾರಾಟಕ್ಕೆ ಬೇಕು ಜಿಲ್ಲಾಧಿಕಾರಿ ಅನುಮತಿ

ಟ್ರಾಕ್ಟರ್​ನಲ್ಲಿ ಹೊಲ ಉಳುತ್ತಿರುವುದು (ಸಾಂದರ್ಭಿಕ ಚಿತ್ರ)

ಟ್ರಾಕ್ಟರ್​ನಲ್ಲಿ ಹೊಲ ಉಳುತ್ತಿರುವುದು (ಸಾಂದರ್ಭಿಕ ಚಿತ್ರ)

ಚಾಮರಾಜನಗರದ ಸತ್ತೇಗಾಲ ಗ್ರಾಮದ ಯಾವುದೇ ಸರ್ವೇ ನಂಬರ್ ಜಾಗವನ್ನ ಮಾರಾಟ ಮಾಡಬೇಕು ಅಂದ್ರೆ ಅಷ್ಟು ಸುಲಭವಲ್ಲ. ಜಿಲ್ಲಾಧಿಕಾರಿಗಳಿಗೆ ನಾನಾ ದಾಖಲಾತಿಗಳನ್ನು ನೀಡಿ ಅನುಮತಿ ಪಡೆಯಬೇಕು. ಆದರೆ ಈ ದಾಖಲೆಗಳನ್ನು ಪಡೆಯುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯಬೇಕು. ಈ ಪ್ರಕ್ರಿಯೆಗೆ ವರ್ಷಗಟ್ಟಲೆ ಹಿಡಿಯುವುದರಿಂದ ಪರದಾಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಮುಂದೆ ಓದಿ ...
  • Share this:

ಚಾಮರಾಜನಗರ (ಆಗಸ್ಟ್ 5): ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸುವುಕ್ಕೆ ಅವಕಾಶ ನೀಡಲು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಆದರೆ ಚಾಮರಾಜನಗರ ಜಿಲ್ಲೆಯ ಈ ಒಂದು ಗ್ರಾಮದಲ್ಲಿ ಕೃಷಿ  ಭೂಮಿ ಖರೀದಿಸುವುದು ಅಷ್ಟು ಸುಲಭವಲ್ಲ. ರೈತರ ಹೆಸರಲ್ಲಿ ಜಮೀನಿದೆ. ಜಮೀನಿಗೆ ಸಂಬಂಧಪಟ್ಟ ಆರ್.ಟಿ.ಸಿ. ಇದೆ. ಪಟ್ಟಾ ಇದೆ. ಆದ್ರೂ ತಮ್ಮದೇ ಜಮೀನನ್ನು ಅವರು ಸುಲಭವಾಗಿ  ಮಾರಾಟ ಮಾಡಲು ಸಾಧ್ಯವಿಲ್ಲ. ಇಲ್ಲಿನ ಕೃಷಿ ಜಮೀನು ಮಾರಾಟಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು.


ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಪಾತ್ರದಲ್ಲಿರುವ ಸತ್ತೇಗಾಲ ಗ್ರಾಮದಲ್ಲಿ ಈ ನಿಯಮ ಇದೆ. ಇಲ್ಲಿ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು ಈ ಗ್ರಾಮದ ರೈತರು ಜಮೀನುಗಳು ತಮ್ಮ ಹೆಸರಿನಲ್ಲಿಯೇ ಇದ್ದರೂ ಬೇರೆಯವರಿಗೆ  ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕಿದೆ.


ಕಾರಣ ಇಷ್ಟೆ. ಸ್ವಾತಂತ್ರ್ಯಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿ ಸರ್ವೆ ನಂಬರ್ 1 ರಿಂದ 1733 ರವರೆಗಿನ ಭೂಮಿಯಲ್ಲಿ 23 ಸಾವಿರ ಎಕರೆಗೂ ಹೆಚ್ಚು ಜಮೀನನ್ನು ಜಹಗೀರುದಾರರಿಗೆ ಇನಾಂ ನೀಡಿತ್ತು. ಗ್ರಾಮದ ರೈತರು ಜಹಗೀರುದಾರರ ಬಳಿಯಿದ್ದ ಈ ಜಮೀನುಗಳನ್ನು ಉಳುಮೆ ಮಾಡುತ್ತಿದ್ದರು. ಆದರೆ ಸ್ವಾತಂತ್ರ್ಯಾ ನಂತರ 1956ರಲ್ಲಿ ಅಂದಿನ ಮೈಸೂರು ಸರ್ಕಾರ ಇನಾಂ ರದ್ದು ಮಾಡಿತು. ಬಳಿಕ ಈ ಜಮೀನುಗಳನ್ನು ಈ ರೈತರೇ ಉಳತೊಡಗಿದ್ದರು.


ಇದನ್ನೂ ಓದಿ: ಆಶ್ಲೇಷಾ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು ಕೊಡಗಿನ ಹಲವೆಡೆ ರಸ್ತೆ ಸಂಪರ್ಕ ಬಂದ್


1978-79ಲ್ಲಿ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿದಾಗ ಗ್ರಾಮದ 1200ಕ್ಕು ಹೆಚ್ಚು ರೈತರಿಗೆ ಸುಮಾರು ನಾಲ್ಕು ಸಾವಿರ ಎಕರೆ ಜಮೀನು ದೊರಕಿತ್ತು. ಉಳುಮೆ ಮಾಡುತ್ತಿದ್ದ ರೈತರಿಗೆ ಪಟ್ಟಾ ಸಹ ನೀಡಲಾಗಿತ್ತು. ಭೂಸುಧಾರಣಾ ಕಾಯ್ದೆ ಪ್ರಕಾರ ರೈತರಿಗೆ ನೀಡಲಾದ ಜಮೀನುಗಳನ್ನು 15 ವರ್ಷಗಳವರೆಗೆ ಯಾರಿಗು ಪರಭಾರೆ ಅಥವಾ ಮಾರಾಟ ಮಾಡುವಂತಿರಲಿಲ್ಲ. ಮಾರಾಟ ಮಾಡಬೇಕಾದರೆ ಭೂ ಮಾಲೀಕರು ಸರಿಯಾದ ದಾಖಲಾತಿಗಳನ್ನ ಜಿಲ್ಲಾಧಿಕಾರಿಗಳಿಗೆ ಒದಗಿಸಿ ಅನುಮತಿ ಪಡೆಯಬೇಕಾಗಿತ್ತು. ಆದರೆ, ಆ ಆದೇಶ ಆಗಿ 35 ವರ್ಷಗಳೇ ಕಳೆದಿವೆ. ಈಗಲೂ ಕೂಡ ಅಂದಿನ ಆದೇಶವೇ ಜಾರಿಯಲ್ಲಿದೆ.


ಹಾಗಾಗಿ ಇಲ್ಲಿನ ಜನರು ತಮ್ಮ ಭೂಮಿಯನ್ನ ಮಾರಾಟ ಮಾಡಲಾಗುತ್ತಿಲ್ಲ. ಸತ್ತೇಗಾಲ ಗ್ರಾಮದ ಯಾವುದೇ ಸರ್ವೇ ನಂಬರ್ ಜಾಗವನ್ನ ಮಾರಾಟ ಮಾಡಬೇಕು ಅಂದ್ರೆ ಅಷ್ಟು ಸುಲಭವಲ್ಲ. ಜಿಲ್ಲಾಧಿಕಾರಿಗಳಿಗೆ ನಾನಾ ದಾಖಲಾತಿಗಳನ್ನು ನೀಡಿ ಅನುಮತಿ ಪಡೆಯಬೇಕು. ಆದರೆ ಈ ದಾಖಲೆಗಳನ್ನು ಪಡೆಯುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯಬೇಕು. ಈ ಪ್ರಕ್ರಿಯೆಗೆ ವರ್ಷಗಟ್ಟಲೆ ಹಿಡಿಯುವುದರಿಂದ ಪರದಾಡುವಂತಾಗಿದೆ ಎನ್ನುತ್ತಾರೆ ಸತ್ತೇಗಾಲದ ರೈತ ಮಾದೇಗೌಡ.


ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಯೂರಿಯಾ ಕೊರತೆ; ಗೊಬ್ಬರಕ್ಕಾಗಿ ಬಂಡಾಯದ ನಾಡು ನರಗುಂದದಲ್ಲಿ ಗುದ್ದಾಟ


ರೈತರು ತಮ್ಮ ಮಕ್ಕಳ ಮದುವೆ ಮುಂಜಿ ವಿದ್ಯಾಭ್ಯಾಸ ಮೊದಲಾದ ಖರ್ಚು ವೆಚ್ಚಗಳಿಗೆ ಜಮೀನು ಮಾರಾಟ ಅಥವಾ ಪರಭಾರೆ ಮಾಡುವುದು ಸಾಮಾನ್ಯ. ಆದರೆ ಸತ್ತೆಗಾಲ ರೈತರು ಅಷ್ಟು ಸಲುಭವಾಗಿ ಮಾರಾಟ ಅಥವಾ ಪರಭಾರೆ ಸಾಧ್ಯವಾಗದೆ ಪರಿತಪಿಸುವಂತಾಗಿದೆ.
ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ರಾಜ್ಯದ ಇತರೆಡೆಗಳಂತೆ ಯಾರದ್ದೇ ಅನುಮತಿಯಿಲ್ಲದೆ ಸುಲಭವಾಗಿ ತಮ್ಮ ಜಮೀನುಗಳನ್ನು ಮಾರಾಟ ಅಥವಾ ಪರಭಾರೆ ಮಾಡಲು ಅವಕಾಶ  ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.


ವರದಿ: ಎಸ್.ಎಂ.ನಂದೀಶ್

Published by:Vijayasarthy SN
First published: