news18-kannada Updated:November 2, 2020, 7:17 PM IST
ಕನ್ನಡಿ ನೋಡಿ ಹಿಮ್ಮುಖವಾಗಿ ಗುರಿ ತಪ್ಪದಂತೆ ಶೂಟ್ ಮಾಡುತ್ತಿರುವ ಡೀನಾ.
ಕೊಡಗು: ವಿಶಿಷ್ಟ ಹಬ್ಬ ಆಚರಣೆ, ಉಡುಗೆ ತೊಡುಗೆ ಮತ್ತು ಸಂಪ್ರದಾಯಗಳಿಂದ ಕೊಡಗು ದೇಶದ ಗಮನ ಸೆಳೆದಿದೆ. ಇಲ್ಲಿ ಮಕ್ಕಳು ಹುಟ್ಟಿದರೆ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಯಾರಾದರೂ ಸತ್ತರೂ ಅಂತ್ಯಸಂಸ್ಕಾರದ ವೇಳೆ ಗುಂಡು ಹಾರಿಸಿ ಶೋಕ ವ್ಯಕ್ತಪಡಿಸಲಾಗುತ್ತದೆ. ಇನ್ನು ಹಬ್ಬ ಹರಿದಿನಗಳೆಂದರೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಸಾಮಾನ್ಯವಾಗಿ ನಡೆಯುತ್ತವೆ. ಒಟ್ಟಿನಲ್ಲಿ ಕೋವಿ ಎನ್ನೋದು ಕೊಡಗಿನವರ ಜೀವನದ ಅವಿಭಾಜ್ಯ ಅಂಗ. ಇಲ್ಲಿ ಗಂಡು- ಹೆಣ್ಣು ಇಬ್ಬರು ಸಮಾನವಾಗಿಯೇ ಕೋವಿ ಬಳಕೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಗೃಹಿಣಿ ಕನ್ನಡಿಯಲ್ಲಿ ಬಿಂಬ ನೋಡಿ ಹಿಮ್ಮುಖವಾಗಿ ಕೋವಿಯಿಂದ ಶೂಟ್ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.
ಹೌದು, ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಸಮೀಪದ ತಾವಳಗೇರಿಯ ನಿವಾಸಿ ಕಳ್ಳಿಚಂಡ ಡೀನಾ ಉತ್ತಪ್ಪ ಇಂತಹ ಸಾಧನೆ ಮಾಡಿರುವವರು. ಸಾಮಾನ್ಯವಾಗಿ ಎದುರಿಗೆ ಇರುವ ವಸ್ತುವನ್ನು ನೋಡಿಯೇ ಗುರಿ ತಪ್ಪದಂತೆ ಶೂಟ್ ಮಾಡುವುದು ಸುಲಭವೇನಲ್ಲ. ಆದರೆ ಡೀನಾ ಉತ್ತಪ್ಪ ಹಿಮ್ಮುಖವಾಗಿ ಗನ್ ಅನ್ನು ಹೆಗಲೇರಿಸಿಕೊಂಡು ಕನ್ನಡಿಯಲ್ಲಿ ಟಾರ್ಗೆಟ್ ಇಟ್ಟಿರುವ ವಸ್ತುವಿನ ಬಿಂಬ ನೋಡುತ್ತಾ ಗುರಿ ತಪ್ಪದಂತೆ ಏರ್ ಗನ್ ನಿಂದ ಶೂಟ್ ಮಾಡುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ.
ಗೃಹಿಣಿಯಾಗಿರುವ ಡೀನಾ ತಾವು ಪ್ರೌಢಶಾಲೆಯಲ್ಲಿದ್ದಾಗಲೇ ಏರ್ ಗನ್ ಶೂಟ್ ಮಾಡುತ್ತಿದ್ದರಂತೆ. ತಮ್ಮ ವಿವಾಹದ ಬಳಿಕ ಅದನ್ನು ಬಿಟ್ಟಿದ್ದರಂತೆ. ಆದರೆ ಕಳೆದ ಎರಡು ವರ್ಷಗಳ ಹಿಂದೆ ದಸರಾ ಸಂದರ್ಭದಲ್ಲಿ ಜಂಬೋ ಸರ್ಕಸ್ ನೋಡಲು ಹೋಗಿದ್ದರಂತೆ. ಸರ್ಕಸ್ ನಲ್ಲಿ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು, ಹಿಮ್ಮುಖವಾಗಿ ಶೂಟ್ ಮಾಡುತ್ತಿದ್ದದನ್ನು ನೋಡಿದ್ದ ಡೀನಾ ಅವರು ಅವರಿಂದ ಪ್ರಭಾವಿತರಾಗಿ ತಾನೂ ಏಕೆ ಇದನ್ನು ಪ್ರಯತ್ನಿಸಬಾರೆಂದು ಆಲೋಚಿಸಿ ಹಿಮ್ಮುಖವಾಗಿ ಶೂಟ್ ಮಾಡುವುದನ್ನು ನಿರಂತರವಾಗಿ ಅಭ್ಯಾಸ ಮಾಡಿದ್ದಾರೆ.
ಇದನ್ನು ಓದಿ: ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಮಕ್ಕಳೊಂದಿಗೆ ಕೂಲಿಗೆ ತೆರಳುತ್ತಿರುವ ಪೋಷಕರು; ಯಾದಗಿರಿಯಲ್ಲಿ ಹೆಚ್ಚಾದ ಬಾಲ ಕಾರ್ಮಿಕರ ದುಡಿಮೆ!
ಕಳೆದ ಆರು ತಿಂಗಳ ಹಿಂದೆ ಅದರಲ್ಲಿ ಸಕ್ಸಸ್ ಆಗಿದ್ದರಂತೆ. ಆ ನಂತರವೂ ನಿರಂತರ ಪ್ರಯತ್ನದ ಫಲವಾಗಿ ಡೀನಾ ಅವರು ಈಗ ಕನ್ನಡಿಯಲ್ಲಿ ಟಾರ್ಗೆಟ್ ನ ಬಿಂಬ ನೋಡುತ್ತಾ ಹಿಮ್ಮುಖವಾಗಿ ಸಲೀಸಾಗಿ ಶೂಟ್ ಮಾಡುತ್ತಾರೆ. ಹೀಗೆ ಹಿಮ್ಮುಖವಾಗಿ ಶೂಟ್ ಮಾಡಿದ್ದ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದನ್ನು ಗಮನಿಸಿದ್ದ ಕೊಡಗಿನ ಇನ್ನಿಬ್ಬರು ಯುವಕರು ಪ್ರಭಾವಿತರಾಗಿ ಅವರು ಕೂಡ ಹಿಮ್ಮುಖವಾಗಿ ಶೂಟ್ ಮಾಡುವುದನ್ನು ಅಭ್ಯಾಸಿಸಿದ್ದಾರೆ. ಈಗ ಹಿಮ್ಮುಖವಾಗಿ ಶೂಟ್ ಮಾಡುವುದು ಕೊಡಗಿನಲ್ಲಿ ಟ್ರೆಂಡ್ ಆಗಿ ಬೆಳೆಯುತ್ತಿದೆ. ಪತ್ನಿ ಡೀನಾ ಅವರ ಈ ಪ್ರಯತ್ನಕ್ಕೆ ಪತಿ ಉತ್ತಪ್ಪ ಕೂಡ ಸಾಥ್ ನೀಡುತ್ತಿದ್ದಾರೆ.
Published by:
HR Ramesh
First published:
November 2, 2020, 7:17 PM IST