• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Monkey Revenge- ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಮಂಗ; ಆಟೋಚಾಲಕನಿಗೆ ಮರೆಯಲಾಗದ ಪಾಠ

Monkey Revenge- ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಮಂಗ; ಆಟೋಚಾಲಕನಿಗೆ ಮರೆಯಲಾಗದ ಪಾಠ

ಕೋತಿ ದಾಳಿ

ಕೋತಿ ದಾಳಿ

ಮೊನ್ನೆಯಷ್ಟೇ ಅಂಗಡಿಯಲ್ಲಿ ಮಕ್ಕಳಂತೆ ಟೀ ಕುಡಿಯುತ್ತಾ ಜನರನ್ನ ಆಕರ್ಷಿಸಿದ್ದ ಮಂಗವೊಂದು ನಿನ್ನೆ ಆಟೋಚಾಲಕನನ್ನ ಎಡೆಬಿಡದೇ ಕಾಡಿದೆ. ಅರಣ್ಯ ಅಧಿಕಾರಿಗಳು, ತಜ್ಞರು ನಿನ್ನೆಯಿಂದ ಈ ಕೋತಿ ಹಿಡಿಯಲು ಮಾಡಿದ್ದ ಕಾರ್ಯಾಚರಣೆ ಇವತ್ತು ಯಶಸ್ವಿಯಾಗಿದೆ.

  • Share this:

ಚಿಕ್ಕಮಗಳೂರು: ಕಳೆದ ವಾರವಷ್ಟೇ ಹೋಟೆಲ್‍ಗೆ ಬಂದು ಟೀ ಕುಡಿದು ಜನರ ಪ್ರೀತಿ-ವಿಶ್ವಾಸ ಗಳಿಸಿದ್ದ ಮಂಗ ನಿನ್ನೆ ದಿಢೀರ್ ಅಂತ ಇಡೀ ಊರಿನವರ ನಿದ್ದೆಗೆಡಿಸಿತ್ತು. ಆ ಮಂಗನಿಗಾಗಿ ನಡೆಯಿತು ಬರೋಬ್ಬರಿ 20 ಗಂಟೆ ಕಾರ್ಯಾಚರಣೆ. 50 ಜನರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಣ್ಣಾಮುಚ್ಚಾಲೆ ಆಟವಾಡಿಸ್ತಿದ್ದ ಕೋತಿ ಕೊನೆಗೂ ಸೆರೆಯಾಯ್ತು (Monkey captured in an operation). ಓರ್ವನ ಮೇಲೆ ಕೋತಿಗಿದ್ದ ದ್ವೇಷಕ್ಕೆ ಇಡೀ ರಾತ್ರಿ ಗ್ರಾಮಕ್ಕೆ ಗ್ರಾಮವೇ ನಿದ್ದೆಗೆಡುವಂತಾಗಿತ್ತು. ಮಂಗ ಸೆರೆಯಾಗುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟಿದ್ದಾರೆ.


ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ (Kottige Hara village, Mudigere Taluk of Chikkamagaluru) ಕಳೆದ ವಾರ ಹೊಟೇಲ್‍ನಲ್ಲಿ ಮಕ್ಕಳಂತೆ ಟೀ ಕುಡಿದು ನೋಡುಗರಿಗೆ ಖುಷಿ ಪಡಿಸಿದ್ದ ಮಂಗ ಇಂದು ಅದೇ ಊರಿನ ಜನಕ್ಕೆ 20 ಗಂಟೆಗಳ ಕಾಲ ಸಿಕ್ಕಾಪಟ್ಟೆ ರೋದನೆ ನೀಡಿದೆ. ಕಾರಣ ಇಷ್ಟೆ, ನಿನ್ನೆ ಸಂಜೆ ಕೋತಿ ಏಕಲವ್ಯ ವಸತಿ ಶಾಲೆಗೆ ಭೇಟಿ ನೀಡಿತ್ತು. ಈ ವೇಳೆ, ಆಟೋ ಚಾಲಕನೋರ್ವ ಕೋತಿಗೆ ಕಿರಿಕ್ ಮಾಡಿದ್ದಾನೆ ಅಷ್ಟೆ. ಅಲ್ಲಿಗೆ ಕಥೆ ಮುಗೀತು. ಅವನನ್ನ ಹುಡುಕಿ, ಬೆರಸಾಡಿ, ಕಚ್ಚಿ ಅವನ ಆಟೋವಿನ ಟಾಪ್ ಕಿತ್ತಾಕುವವರೆಗೂ ಕೋತಿಗೆ ಸಮಾಧಾನ ಆಗಲಿಲ್ಲ. ಕೋತಿಯ ಸಿಟ್ಟಿಗೆ ಬೆದರಿದ ಆಟೋ ಚಾಲಕ ಬೇರೆ ಆಟೋ, ಕಾರಿನಲ್ಲಿ ಕದ್ದು ಕೂತಿದ್ದ. ಆಟೋ ಚಾಲಕನನ್ನ ಎರಡು ಕಿ.ಮೀ. ಹುಡುಕಿಕೊಂಡು ಬಂದಿತ್ತು ಕೋತಿ. ಸಂಜೆಯಾಗುತ್ತಿದ್ದಂತೆ ದಾರಿಹೋಕರ ಮೇಲೂ ದಾಳಿಗೆ ಮುಂದಾಗಿತ್ತು. ಹಾಗಾಗಿ ಅರಣ್ಯ ಇಲಾಖೆ ಮಂಗನ ಸೆರೆ ಹಿಡಿಯಲು ಮುಂದಾದರೂ ಕೋತಿ ಸಂಜೆ ಆರು ಗಂಟೆಯಿಂದ ರಾತ್ರಿ 1 ಗಂಟೆವರೆಗೂ ಅರಣ್ಯ ಅಧಿಕಾರಿಗಳಿಗೂ ಆಟವಾಡಿಸಿದೆ. ರಾತ್ರಿ ಸುಸ್ತಾಗಿ ಕಾರ್ಯಾಚರಣೆ ಕೈಬಿಟ್ಟ ಅಧಿಕಾರಿಗಳು ಬೆಳಗ್ಗೆ ಮುಂದುವರೆಸಿ ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಸೆರೆ ಹಿಡಿದಿದ್ದಾರೆ.


ಇಂದು ಬೆಳಗ್ಗೆ ಕಾರ್ಯಚರಣೆ ಆರಂಭಿಸಿದ ಅರಣ್ಯ ಇಲಾಖೆಗೆ ಸ್ಥಳಿಯರು ನೆರವು ನೀಡಿದರು. ಒಂದು ಮಂಗನನ್ನ ಹಿಡಿಯಲು ಅರವಳಿಕೆ ಮದ್ದಿನ ಜೊತೆ 25ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು, ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ 15 ಸದಸ್ಯರ ಜೊತೆ 20 ಜನ ಸ್ಥಳಿಯರು 20 ಗಂಟೆ ಕಾರ್ಯಾಚರಣೆ ನಡೆಸಿದರು. ಬೆಳಗ್ಗೆ 8 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಅಧಿಕಾರಿಗಳು ಮಧ್ಯಾಹ್ನ ಎರಡು ಗಂಟೆ ವೇಳೆಗೆ ಸೆರೆ ಹಿಡಿದರು. ಇದರಿಂದ ಕೊಟ್ಟಿಗೆಹಾರದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆ ಹಿಡಿದ ಕೋತಿಯನ್ನ ಅರಣ್ಯ ಅಧಿಕಾರಿಗಳು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆದರೆ, ಚಾರ್ಮಾಡಿ ಅರಣ್ಯದಿಂದಲೇ ಕೊಟ್ಟಿಗೆಹಾರಕ್ಕೆ ಬಂದಿದ್ದ ಕೋತಿ ಮತ್ತೆ ಇಲ್ಲಿಗೆ ಬರೋದಿಲ್ಲ ಅನ್ನೋದಕ್ಕೆ ಗ್ಯಾರಂಟಿ ಏನು? ಮತ್ತೆ ಬಂದು ದಾಳಿ ಮಾಡಿದರೆ ಜವಾಬ್ದಾರಿ ಯಾರೆಂದು ಸ್ಥಳೀಯರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: D Veerendra Heggade: ಚಲನಚಿತ್ರಗಳಲ್ಲಿ ಪೊಲೀಸರನ್ನು ಕಾಮಿಡಿ ವಸ್ತುವಾಗಿ ತೋರಿಸಬೇಡಿ: ವೀರೇಂದ್ರ ಹೆಗ್ಗಡೆ ಮನವಿ


ಇದೆಲ್ಲವನ್ನೂ ನೋಡುತ್ತಿದ್ದರೆ ಹಳ್ಳಿ ಭಾಷೆಯಲ್ಲಿ ಹೇಳುವಂತೆ ಮಂಗನ ಕೈಲಿ ಮಾಣಿಕ್ಯ ಕೊಟ್ರೆ ಏನೇನೋ ಮಾಡಿತು ಎಂಬ ಮಾತು ಸತ್ಯ ಎಂಬಂತಾಯ್ತು. ಯಾಕಂದ್ರೆ, ಟೀ ಕುಡಿಯುತ್ತೆ, ಸುಮ್ನಿರುತ್ತೇ ಅಂತ ಸಲುಗೆ ಕೊಟ್ಟಿದ್ದಕ್ಕೆ ತಾನೇ ಇಷ್ಟೊಂದು ಅವಾಂತರ ಮಾಡಿದ್ದು ಈ ಕಪಿ. ಹಾಗಾಗಿ, ವ್ಯಕ್ತಿ-ವಸ್ತು-ಪ್ರಾಣಿ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೋ ಅಷ್ಟಷ್ಟೇ ನೀಡಬೇಕು. ಇಲ್ಲವಾದರೆ, ಹೀಗೆ ಆಗುತ್ತೆ ಎಂದು ಜನರು ಹೇಳುತ್ತಾರೆ. ಅದೇನೆ ಇದ್ದರೂ, ಸುಮಾರು 20 ಗಂಟೆಗಳ ಕಾಲ ಊರಿನ ಜನಕ್ಕೆ ತಲೆನೋವು ತರಿಸಿದ್ದ ಕೋತಿ ಸೆರೆಯಾಗಿದ್ರಿಂದ ಊರಿನ ಜನ ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.


ವರದಿ: ವೀರೇಶ್ ಹೆಚ್ ಜಿ

top videos
    First published: