ಎನ್ಇಕೆಆರ್ಟಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿ ಹಲವು ದಿನಗಳಾದರೂ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಧಿಕಾರ ಪದಗ್ರಹಣ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ
ಕಲಬುರ್ಗಿ(ಆಗಸ್ಟ್. 17) : ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಲವು ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನದ ಗಿಫ್ಟ್ ನೀಡಿದ್ದಾರೆ. ಕೆಲವರಿಗೆ ಸಂಪುಟ ದರ್ಜೆ ಸ್ಥಾನಮಾನವನ್ನೂ ನೀಡಿದ್ದಾರೆ. ಆದರೆ ಇದು ಕೆಲವೊಬ್ಬರಿಗೆ ರುಚಿಸಿಲ್ಲ. ಇಂಥವರ ಪೈಕಿ ಕಲಬುರ್ಗಿಯ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಒಬ್ಬರು. ನಿಗಮದ ಅಧ್ಯಕ್ಷರಾಗಿ ಘೋಷಣೆಯಾಗಿ ಹಲವು ದಿನಗಳೇ ಗತಿಸಿದರೂ ತೇಲ್ಕೂರ ಅದರ ಕಡೆ ಮುಖ ತಿರುಗಿಸಿಯೂ ನೋ಼ಡಿಲ್ಲ.
ಎನ್ಇಕೆಆರ್ಟಿಸಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿ ಹಲವು ದಿನಗಳಾದರೂ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಧಿಕಾರ ಪದಗ್ರಹಣ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರೋ ರಾಜಕುಮಾರ ಪಾಟೀಲ ತೇಲ್ಕೂರ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ತಮಗೆ ಯಾವುದೇ ರೀತಿಯ ಅಸಮಾಧಾನವಿಲ್ಲ ಎಂದಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಗೆ ಚರ್ಚೆ ಮಾಡಿ ನಿಗಮದ ಅಧ್ಯಕ್ಷ ಸ್ಥಾನ ಸ್ವೀಕರಿಸುವೆ. ಅದಕ್ಕಾಗಿ ಒಂದಷ್ಟು ವಿಳಂಬವಾಗಿದೆಯೇ ಹೊರತು, ಅಸಮಾಧಾನದಿಂದ ಅಲ್ಲ ಎಂದಿದ್ದಾರೆ. ಆದಷ್ಟು ಬೇಗ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಹೇಳಿದ್ದಾರೆ.
ರಾಜಕುಮಾರ ಪಾಟೀಲ್ ರನ್ನು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಹಲವು ದಿನಗಳೇ ಗತಿಸಿವೆ. ಆದರೆ ತೇಲ್ಕೂರ ಮಾತ್ರ ಕೆಕೆಆರ್ಡಿಬಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲರಿಗೆ ಕೆಕೆಆರ್ಡಿಬಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಈಗಾಗಲೇ ದತ್ತಾತ್ರೇಯ ಪಾಟೀಲ ತೇಲ್ಕೂರ ಕೆಕೆಆರ್ಡಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರಿಗಳ ಸಭೆಯನ್ನೂ ಮಾಡಿ ತಮ್ಮ ಕಾರ್ಯಚಟುವಟಿಕೆ ಪ್ರಾರಂಭಿಸಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ತೇಲ್ಕೂರ, ಅಧಿಕಾರ ಸ್ವೀಕರಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಅಲ್ಲದೆ ಮೊದಲೇ ನಷ್ಟದಲ್ಲಿರೋ ಎನ್ಇಕೆಆರ್ಟಿಸಿ ನಿಗಮದ ಅಧ್ಯಕ್ಷರಾಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಲೆಕ್ಕಾಚಾರವನ್ನೂ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದುವರೆಗೂ ಎನ್.ಇ.ಕೆ.ಆರ್.ಟಿ.ಸಿ. ಅಧ್ಯಕ್ಷರಾಗಿದ್ದವರು ಮುಂದೆ ರಾಜಕೀಯವಾಗಿ ಅಷ್ಟೇನು ಏಳಿಗೆಯನ್ನೂ ಕಂಡಿಲ್ಲ. ಹೀಗಾಗಿ ಅದರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚೆಂದು ಆಪ್ತರು ಹೇಳಿದ್ದಾರೆ ಎಂಬ ಮಾತಿದೆ. ಹೀಗಾಗಿ ತೇಲ್ಕೂರ ನಡೆ ಏನೆಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ