ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.1 ರಿಂದ ದ್ವಿತೀಯ ಪಿಯು ತರಗತಿ ಆರಂಭ; ಮಾರ್ಗಸೂಚಿ ಏನು?

ದ್ವಿತೀಯ ಪಿಯು ತರಗತಿ ಆರಂಭಕ್ಕೆ 10 ಸೂತ್ರಗಳನ್ನು ಜಿಲ್ಲಾಡಳಿತ ಮಾಡಿದೆ. ಆದರೆ ಸದ್ಯ ಜಿಲ್ಲೆಯಲ್ಲಿ ವಿದ್ಯಾರ್ಥಿ ಗಳಿಗೆ ಕೊರೋನಾ ಸೋಂಕು ಕಾಡುತ್ತಿದ್ದು, ಇದರ ನಡುವೆ ಜಿಲ್ಲಾಡಳಿತ ಹೇಗೆ ಕಾಲೇಜು ತೆರೆದು ಸವಾಲು ಸ್ವೀಕರಿಸುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಸೋಂಕು ಸದ್ಯಕ್ಕೆ ಇಳಿಮುಖವಾಗುವ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿದಿನ 200ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಕೊರೋನಾ ದ ನಡುವೆ ಬದುಕಬೇಕೆಂಬ ನಿರ್ಧಾರಕ್ಕೆ ಬಂದಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ ಈಗ ದ್ವಿತಿಯ ಪಿಯು ತರಗತಿ ಗಳನ್ನು ತೆರೆಯಲು ನಿರ್ಧಾರ ಮಾಡಿದೆ. ಸಪ್ಟೆಂಬರ್1 ರಿಂದ ಜಿಲ್ಲೆಯ ದ್ವಿತೀಯ ಪಿಯು ತರಗತಿಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿ ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿಗೆ ಭೌತಿಕ ತರಗತಿಗಳನ್ನು ಪ್ರಾರಂಭಿಸುವುದು ಸೂಕ್ತ ಎಂದು ಮನಗಂಡು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಮಾರ್ಗ ಸೂಚಿಗಳು ಈ ಕೆಳಗಿನಂತಿವೆ;

1. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಿನಾಂಕ: 01-09-2021 ರಿಂದ ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಅನುಮತಿಸಿದೆ.

2. ಲಗ್ತ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಯನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಸಂಪೂರ್ಣಜವಾಬ್ದಾರಿಯನ್ನು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ವಹಿಸಲಾಗಿದೆ.

3. ಕೇರಳ ರಾಜ್ಯದಿಂದ ಬರುವಂತಹ ವಿದ್ಯಾರ್ಥಿಗಳನ್ನು 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಿಸಲು ಹಾಗೂ ಕೋವಿಡ್ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೆ ವೈದ್ಯಕೀಯ ಆರೈಕೆ ಕಲ್ಪಿಸಲು ಅನುಕೂಲವಾಗುವಂತೆ ವಸತಿ ಸಹಿತ ಕಾಲೇಜುಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಪ್ರಶಸ್ತವಾದ ಸಕಲ ವ್ಯವಸ್ಥೆಯುಳ್ಳ ಕೋವಿಡ್ ಕೇರ್ ಸೆಂಟರ್ ಗಳನ್ನು ಕಡ್ಡಾಯವಾಗಿ ತೆರೆಯಲು ಕ್ರಮವಹಿಸುವುದು ಕ್ವಾರಂಟೈನ್ ನಲ್ಲಿರಿಸಿದ ವಿದ್ಯಾರ್ಥಿಗಳು 7 ದಿನಗಳ ನಂತರ RT-PCR ಟೆಸ್ಟ್ ಮಾಡಿಸಿ, ನೆಗಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗುವುದು, ಜ್ವಾಲೆಂಟೈನ್ ನಲ್ಲಿರಿಸಿದ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್ ನಿಂದಲೇ ಆನ್ ಲೈನ್ ತರಗತಿಯಲ್ಲಿ ಭಾಗವಹಿಸುವಂತೆ ಕ್ರಮ ವಹಿಸುವುದು,

4. ಕೇರಳ ರಾಜ್ಯದಿಂದ ದಿನಂಪ್ರತಿ ಬರುವಂತಹ ವಿದ್ಯಾರ್ಥಿಗಳು ಪ್ರತೀ 7 ದಿನಗಳಿಗೊಮ್ಮೆ RT-CR ಟೆಸ್ಟ್ ಮಾಡಿಸಿ, ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಹಾಜರಾಗುವುದು.

5. ಕೇರಳ ರಾಜ್ಯದಿಂದ ದಿನಂಪ್ರತಿ ಬರುವಂತಹ ಬೋಧಕ ಬೋಧಕೇತರ ಸಿಬ್ಬಂದಿಗಳು ಕೋವಿಡ್ ಲಸಿಕೆ (2 ಡೋಸ್) ಪಡೆದಿದ್ದರೂ ಕೂಡಾ ಪ್ರತಿ 7 ದಿನಗಳಿಗೊಮ್ಮೆ RTICR ಟೆಸ್ಟ್ ಮಾಡಿಸಿ ನೆಗೆಟಿವ್‌ ಪ್ರಮಾಣ ಪತ್ರದೊಂದಿಗೆ ಹಾಜರಾಗುವುದು.

6. ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು RTPCR ಟೆಸ್ಟ್ ಮಾಡಿಸಿ, ನೆಗಟಿವ್ ಪ್ರಮಾಣ ಪತ್ರದೊಂದಿಗೆ ಹಾಜರಾಗುವುದು.

7. ವಸತಿ ನಿಲಯದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸುವುದು.

8. ಸರಕಾರದ ಪ್ರಮಾಣಿತ ಕಾರ್ಯಾಚರಣಾ ವಿಧಾನವು (SOP) ಪರಿಪಾಲನೆ ಆಗುತ್ತಿರುವ ಬಗ್ಗೆ ಮೇಲ್ವಿಚಾರಣೆ ನಡೆಸಲು ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಂಗಳೂರು (ಸಂಪೂರ್ಣ ಮೇಲ್ವಿಚಾರಣೆ),ತಾಲೂಕು ಆರೋಗ್ಯಾಧಿಕಾರಿಗಳು,ಕಾಲೇಜು ಪ್ರಾಂಶುಪಾಲರುಗಳು ಒಳಗೊಂಡ ಪರಿಶೀಲನಾ ತಂಡವನ್ನು ರಚಿಸಲಾಗಿದೆ

9. ಪ್ರಥಮ ಪಿಯುಸಿಗೆ ಸಂಬಂಧಿಸಿ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಮುಕ್ತಾಯವಾದ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರು ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಯಿಂದ ಪೂರ್ವಾನುಮತಿ ಪಡೆದು ಸೆಪ್ಟೆಂಬರ್ 15 ರಿಂದ ತರಗತಿಪ್ರಾರಂಭಿಸುವುದು. (ಸರಕಾರದ SOP ನಿಬಂಧನೆಗೆ ಒಳಪಟ್ಟು)

10. ಪದವಿ ಹಾಗೂ ಸ್ನಾತ್ತಕೋತರ ತರಗತಿ ಪ್ರಾರಂಭಕ್ಕೂ ಮುನ್ನ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು ಕೋವಿಡ್ ನಿಯಂತ್ರಣಕ್ಕಾಗಿ ಅಳವಡಿಸಿಕೊಳ್ಳಲಾದ ಪೂರ್ವ ತಯಾರಿ ಹಾಗೂ ಮುಂದಿನ ಯೋಜನೆಯೊಂದಿಗೆ ಜಂಟಿ ನಿರ್ದೇಶಕರು ಇಲಾಖೆಯವರಿಗೆ ಅರ್ಜಿ ಸಲ್ಲಿಸಿ ಸರ್ವಾನುಮತಿ ಪಡೆದು ಸಪ್ಟೆಂಬರ್ 15 ರಿಂದ ಕಾಲೇಜು ಪ್ರಾರಂಭಿಸಲು ಕ್ರಮ ವಹಿಸುವುದು.

ಹೀಗೆ ದ್ವಿತೀಯ ಪಿಯು ತರಗತಿ ಆರಂಭಕ್ಕೆ 10 ಸೂತ್ರಗಳನ್ನು ಜಿಲ್ಲಾಡಳಿತ ಮಾಡಿದೆ. ಆದರೆ ಸದ್ಯ ಜಿಲ್ಲೆಯಲ್ಲಿ ವಿದ್ಯಾರ್ಥಿ ಗಳಿಗೆ ಕೊರೋನಾ ಸೋಂಕು ಕಾಡುತ್ತಿದ್ದು, ಇದರ ನಡುವೆ ಜಿಲ್ಲಾಡಳಿತ ಹೇಗೆ ಕಾಲೇಜು ತೆರೆದು ಸವಾಲು ಸ್ವೀಕರಿಸುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.
Published by:MAshok Kumar
First published: