ಬೆಂಗಳೂರು: ಹೊಸವರ್ಷದ ಹೊಸ್ತಿಲಲ್ಲೆ ಸಂಕ್ರಾಂತಿ ಹಬ್ಬಕ್ಕೆ ಮೆಟ್ರೋ ಇಲಾಖೆಯಿಂದ ರಾಜಧಾನಿಯ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಎರಡನೇ ಹಂತದಲ್ಲಿ ನಮ್ಮ ಮೆಟ್ರೋ ಕೈಗೆತ್ತಿಕೊಂಡಿರುವ ಕನಕಪುರ ರಸ್ತೆಯ ಯಲಚೇನಹಳ್ಳಿಯಿಂದ ಅಂಜನಾಪುರ ರಸ್ತೆಯವರೆಗೂ ವಿಸ್ತರಿತ ಮಾರ್ಗದಲ್ಲಿ ಮೊದಲ ರೈಲು ಇಂದು (ಜನವರಿ 14) ಉದ್ಘಾಟನೆಗೊಳ್ಳುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಹರ್ದೀಪ್ ಪುರಿ ಈ ಹೊಸ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಹಲವು ದಿನದಿಂದ ನಿಧಾನ ಗತಿಯಲ್ಲಿ ಸಾಗಿದ ಕಾಮಗಾರಿ ಈಗ ಮುಕ್ತಾಯಗೊಂಡಿದ್ದು, ಹೊಸವರ್ಷದ ಸಂಕ್ರಾಂತಿಗೆ ರಾಜಧಾನಿ ಜನರಿಗೆ ಮೆಟ್ರೋ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡಕೆ ಮಾಹಿತಿ ಕೊಟ್ಟ ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವಾಣ್, ಜನವರಿ 14ರಂದು ಯಲಚೇನಹಳ್ಳಿಯಿಂದ ಅಂಜನಪುರ ರಸ್ತೆಯವರೆಗಿನ ನೂತನ ಮೆಟ್ರೋ ಮಾರ್ಗ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯಲ್ಲಿ ಸಿಎಂ ಯಡಿಯೂರಪ್ಪನವರು ಹಾಗೂ ಕೇಂದ್ರ ಸಚಿವ ಹರ್ದೀಪ್ ಪುರಿ ಸೇರಿದಂತೆ ಕೆಲ ಸಚಿವರು ಹಾಗೂ ನಮ್ಮ ಮೆಟ್ರೋ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಜೊತೆಗೆ ಉದ್ಘಾಟನೆಗೊಂಡ ಮರುದಿನವೇ ಅಂದರೆ ಜನವರಿ 15ರಂದು ಜನರ ಓಡಾಟಕ್ಕೆ ಈ ಮಾರ್ಗ ತೆರೆದಿರಲಿದೆ ಎಂದರು.
ಯಲಚೇನಹಳ್ಳಿಯಿಂದ ಅಂಜನಪುದವರೆಗೆ ನಿರ್ಮಾಣವಾಗಿರುವ ಮೆಟ್ರೋ ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. 6.29 km ಉದ್ದದ ಮೆಟ್ರೋ ಇದಾಗಿದೆ. ಇನ್ನು ಮಾರ್ಗದಲ್ಲಿ ಕೋಣಕೊಂಟೆ ಕ್ರಾಸ್, ಕೃಷ್ಣ ಲೀಲಾ ಪಾರ್ಕ್, ವಾಜರಹಳ್ಳಿ, ತಲಗಟ್ಟಪುರ, ಅಂಜನಪುರ ಟೌನ್ ಶಿಪ್ ಎಂಬ ಐದು ಎಲಿವೇಟೆಡ್ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಉದ್ಘಾಟನೆಗೊಂಡ ಒಂದು ದಿನದ ಬಳಿಕ ಅಂದರೆ ಜನವರಿ 15 ರಿಂದ ಜನ ಬಳಕೆಗೆ ಲಭ್ಯವಾಗಲಿದೆ. ಈಗಾಗಲೇ ಉದ್ಘಾಟನೆಗೆ ಮೆಟ್ರೋ ಇಲಾಖೆ ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದು, ಟ್ರಾಫಿಕ್ ಕಿರಿಕಿರಿಯಿಂದ ಬಳಲುತ್ತಿದ್ದ ಜನರಿಗೆ ಇದೀಗ ಸಂತೋಷದ ಸುದ್ದಿ ಸಿಕ್ಕಿದೆ.
ಇದನ್ನು ಓದಿ: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 7 ಮಂದಿಯ ಬಗ್ಗೆ ಇಲ್ಲಿದೆ ಕಿರುಪರಿಚಯ!
ಕಳೆದ ಕೆಲವು ತಿಂಗಳಿನಿಂದ ಈ ಮಾರ್ಗದ ಸಿವಿಲ್ ಕಾಮಗಾರಿ, ಹಳಿ ಜೋಡಣೆ ಕಾರ್ಯ ನಡೆಯುತ್ತಿದ್ದು ಇತ್ತೀಚೆಗಷ್ಟೇ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯ ಕಂಡಿದ್ದು. ಇದರ ಜೊತೆಗೆ ಆಕರ್ಷಣೀಯವಾಗಿ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಸದ್ಯಕ್ಕೆ ರೂಪಿಸಲಾಗಿರುವ ಸಾಮಾನ್ಯ ದರವನ್ನೇ ಪ್ರಯಾಣಿಕರು ಈ ಮಾರ್ಗದಲ್ಲೂ ಭರಿಸಬೇಕಿದೆ.
ವರದಿ: ಆಶಿಕ್ ಮುಲ್ಕಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ