ಉಡುಪಿಯಲ್ಲಿ ಸೆಪ್ಟೆಂಬರ್ ಮೊದಲ ವಾರ ಶಾಲೆ ಆರಂಭ; ಮಾಸ್ಕ್ ಇಲ್ಲದಿದ್ದರೆ ಕೋವಿಡ್ ಟೆಸ್ಟ್
ಕೋವಿಡ್ ಪರೀಕ್ಷೆಯ ಪಾಸಿಟಿವಿಟಿ ರೇಟ್ ಶೇ. 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನ ಆರಂಭಿಸಲಾಗಿದೆ. ಉಡುಪಿಯಲ್ಲಿ ಇದು ಶೇ. 2.5 ಇದ್ದು, ಇನ್ನೊಂದೆರಡು ವಾರದಲ್ಲಿ ಇದನ್ನ ಶೇ 2ರೊಳಗೆ ತರಲು ಯೋಜಿಸಲಾಗಿದೆ. ಆಗ ಮಾತ್ರ ಶಾಲೆ ಆರಂಭ ಮಾಡಲಾಗುತ್ತದೆ.
ಉಡುಪಿ: ರಾಜ್ಯಾದ್ಯಂತ ಶಾಲಾರಂಭದ ಸಂಭ್ರಮ ಮನೆಮಾಡಿದ್ದರೆ ಉಡುಪಿ ಜಿಲ್ಲೆಯ ಮಕ್ಕಳಿಗೆ ಆ ಭಾಗ್ಯವೇ ಇಲ್ಲ. ಪಾಸಿಟಿವಿಟಿ ರೇಟ್ ಶೇ. 2 ಕ್ಕಿಂತ ಕಡಿಮೆ ಬಂದರಷ್ಟೇ ಸ್ಕೂಲ್ ಶುರು ಎಂದಿರುವ ಜಿಲ್ಲಾಧಿಕಾರಿಗಳು ಇದಕ್ಕಾಗಿ ಕಠಿಣ ರೂಲ್ಸ್ ಜಾರಿ ಮಾಡಿದ್ದಾರೆ. ರಾಜ್ಯಾದ್ಯಂತ ವಿವಿಧೆಡೆ ಅದೆಷ್ಟೋ ಶಾಲೆಗಳನ್ನ ಹೂವು, ತೋರಣ, ರಂಗೋಲಿಗಳಿಂದ ಅಲಂಕಾರ ಮಾಡಿ ವಿದ್ಯಾರ್ಥಿಗಳನ್ನು ವೆಲ್ ಕಮ್ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ಶಾಲೆಗಳಿಗೆ ತೆರಳಿ ಮಕ್ಕಳೊಂದಿಗೆ ಸಮಯ ಕಳೆದು ಧೈರ್ಯ ನೀಡಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಶಾಲಾರಂಭಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ವೇನೋ ಅನ್ನೋ ಹಾಗಿದೆ ಸದ್ಯದ ಸ್ಥಿತಿ. ಜಿಲ್ಲೆಯಲ್ಲಿ ಪ್ರತೀ ನಿತ್ಯ ಮೂರಂಕಿ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 2.5 ಕ್ಕಿಂತ ಹೆಚ್ಚಿದೆ. ಇದನ್ನ ಆಗಷ್ಟ್ 30 ರ ಒಳಗೆ ಎರಡಂಕಿಗೆ ತರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಟಫ್ ರೂಲ್ಸ್ ಜಾರಿ ಮಾಡಿದೆ. ಕೋವಿಡ್ ಟೆಸ್ಟ್ ಹಾಗೂ ವ್ಯಾಕ್ಸಿನೇಶನ್ ಹೆಚ್ಚು ಮಾಡುವುದರ ಜೊತೆಗೆ ಮಾಸ್ಕ್ ಸರಿಯಾಗಿ ಹಾಕದೆ ಓಡಾಡುವವರನ್ನ ಹಿಡಿದು ತಂದು, ಕಡ್ಡಾಯ ಕೋವಿಡ್ ಟೆಸ್ಟ್ಗೆ ಒಳಪಡಿಸುವ ನಿರ್ಧಾರಕ್ಕೆ ಬಂದಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಗ್ರೀನ್ ಸಿಗ್ನಲ್ ನೀಡಿದೆ.
ಹೌದು, ಇನ್ನು ಮುಂದೆ ಮನೆಯಿಂದ ಹೊರಬರೋ ಮೊದಲು ಮುಖದ ಮೇಲೆ ಮಾಸ್ಕ್ ಇದೆಯೋ ಎಂಬುದನ್ನ ಕನ್ಫರ್ಮ್ ಮಾಡಿಕೊಳ್ಳಿ. ಇಲ್ಲಾಂದ್ರೆ ದಂಡದ ಜೊತೆಗೆ ಕೋವಿಡ್ ಪರೀಕ್ಷೆಗೊಳಪಡಿಸ್ತಾರೆ ಅಧಿಕಾರಿಗಳು. ಪಾದಚಾರಿಗಳು, ವಾಹನಸವಾರರು ಮಾಸ್ಕ್ ಇಲ್ಲದೆ ಓಡಾಡುವುದು ಕಂಡುಬಂದ್ರೆ ಅಧಿಕಾರಿಗಳು ಇದ್ದಲ್ಲಿಂದಲೇ ಕೋವಿಡ್ ಟೆಸ್ಟ್ ಸೆಂಟರ್ಗೆ ಕರೆದುಕೊಂಡು ಹೋಗ್ತಾರೆ. ಇದಕ್ಕೆ ಜನರು ಕೂಡ ಸಹಕರಿಸಬೇಕು ಅಂತ ಜಿಲ್ಲಾಧಿಕಾರಿ ಜಗದೀಶ್ ವಿನಮ್ರವಾಗಿ ಎಚ್ಚರಿಕೆ ನೀಡಿದ್ದಾರೆ.
ಕಾರಣ ಇಷ್ಟೇ, ರಾಜ್ಯದೆಲ್ಲೆಡೆ ಶಾಲೆ ಶುರುವಾದರೂ ಉಡುಪಿಯ ವಿದ್ಯಾರ್ಥಿಗಳು ಮನೆಯಲ್ಲಿ ಉಳಿಯಬೇಕಾಗಿದೆ. ಎಲ್ಲೋ ಒಂದು ಕಡೆ ಹಿರಿಯರು ಮಾಡಿದ ತಪ್ಪಿಗೆ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ. ಪಾಠ ಅರ್ಥವಾಗದಿದ್ದರೂ ಆನ್ಲೈನ್ ಕ್ಲಾಸ್ ಮೊರೆ ಹೋಗಬೇಕಾಗಿದೆ.
ಸದ್ಯ ಪಾಸಿಟಿವಿಟಿ ರೇಟ್ ಅನ್ನು ಕಡಿಮೆ ಮಾಡಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಶಾಲೆ ಶುರು ಮಾಡೋದು ಜಿಲ್ಲಾಡಳಿತಕ್ಕಿರುವ ಟಾರ್ಗೆಟ್. ಹೀಗಾಗಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ಹಲವೆಡೆ ನಡೆಯುತ್ತಿರುವ ಕೋವಿಡ್ ರೂಲ್ಸ್ ಬ್ರೇಕ್ಗೆ ಕಡಿವಾಣ ಹಾಕಲು ಕೋವಿಡ್ ಗೈಡ್ ಲೈನ್ ಗಟ್ಟಿಗೊಳಿಸಲು ಕಠಿಣ ನಿಯಮ ಜಾರಿ ಮಾಡಲಾಗಿದೆ.
ಉಡುಪಿಯಲ್ಲಿ ಶಾಲೆ ಆರಂಭವಾಗದೆ ಇರೋದು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಗೆ ಸದ್ಯದ ಬೆಳವಣಿಗೆ ಕಪ್ಪುಚುಕ್ಕಿ ಆಗಿದೆ. ಜನಸಂಖ್ಯೆ ಮತ್ತು ಗಾತ್ರದಲ್ಲಿ ದೊಡ್ಡದಾಗಿರುವ ಜಿಲ್ಲೆಗಳಲ್ಲೂ ಕೂಡ ಕರೋನಾ ನಿಯಂತ್ರಣಕ್ಕೆ ಬಂದಿದೆ. ಉಡುಪಿ ಅಂತಹ ಪುಟ್ಟ ಜಿಲ್ಲೆಗೆ ಇದು ಸಾಧ್ಯವಾಗದೆ ಇರುವುದು ಬಹುದೊಡ್ಡ ಸವಾಲಾಗಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ಪರೀಕ್ಷಿತ್ ಶೇಟ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ