ಸರ್ಕಾರ ಕೊಟ್ಟ 5 ಸಾವಿರ ರೂಪಾಯಿಯಲ್ಲಿ ಶಾಲೆಯನ್ನು ಹಸಿರುಮಯವಾಗಿಸಿ ಪ್ರಶಸ್ತಿ ಬಾಚಿಕೊಂಡ ಬಂಗಾರಪೇಟೆ ಸ್ಕೂಲ್

ಸಾರ್ವಜನಿಕರು ಬಳಸಿ ಬಿಸಾಡಿದಂತಹ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಹಲವು ಬಗೆಯ ಹೂವಿನ ಗಿಡಗಳನ್ನು ನೆಟ್ಟು, ಶಾಲೆಯ ಮುಂಭಾಗದ ದ್ವಾರದಲ್ಲಿ ನೇತು ಹಾಕಲಾಗಿದೆ. ಇದು ಶಾಲೆಯಲ್ಲಿ ಪ್ರಮುಖವಾದ  ಆಕರ್ಷಣೆಯ ಕೇಂದ್ರವಾಗಿವೆ. ಶಾಲೆಯಲ್ಲಿ ಹೊರಬೀಳುವ ಕಸ, ಇನ್ನಿತರೆ ತ್ಯಾಜ್ಯಗಳನ್ನು ಸಾವಯವ ಗೊಬ್ಬರವನ್ನಾಗಿಸಿ ಸಸಿಗಳಿಗೆ ನೀಡಲಾಗುತ್ತಿದೆ.

ಬಂಗಾರಪೇಟೆಯ ಮಾದರಿ ಶಾಲೆ

ಬಂಗಾರಪೇಟೆಯ ಮಾದರಿ ಶಾಲೆ

  • Share this:
ಕೋಲಾರ (ಬಂಗಾರಪೇಟೆ): 2020 -2021 ನೇ ಸಾಲಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಕೋಲಾರ ಜಿಲ್ಲೆಯಾದ್ಯಾಂತ ಸುಮಾರು 500 ಶಾಲೆಗಳಲ್ಲಿ ಇಕೋ ಕ್ಲಬ್ ಚಟುವಟಿಕೆಗಳನ್ನು ನಡೆಸಲಾಗಿತ್ತು. ಈ ಪೈಕಿ ಜಿಲ್ಲೆಯ ಮೂರು ಶಾಲೆಗಳನ್ನು ಅತ್ಯುತ್ತಮ ಇಕೋ ಕ್ಲಬ್ ಶಾಲೆ ಎಂದು ಗುರುತಿಸಲಾಗಿದ್ದು, ಅವುಗಳಲ್ಲಿ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಗುಲ್ಲಹಳ್ಳಿ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ಸಹ ಒಂದಾಗಿದೆ.

ಪರಿಸರ ಮಿತ್ರ ಶಾಲೆಯನ್ನಾಗಿಸಲು ಸರ್ಕಾರದಿಂದ ನೀಡಿದ 5000 ರೂಪಾಯಿಗಳನ್ನು ಬಳಸಿಕೊಂಡು,  ಗುಲ್ಲಹಳ್ಳಿ ಶಾಲೆಯಲ್ಲಿ ಗಿಡ ಮರಗಳನ್ನು ಬೆಳೆಸಲಾಗಿದೆ.  ಶಾಲೆಗೆ ಯಾವುದೇ ಅಧಿಕಾರಿ ಭೇಟಿ ನೀಡಿದರೂ ಅವರಿಂದ ಒಂದು ಗಿಡವನ್ನು ನೆಟ್ಟು ಪೋಷಿಸುವ ಕಾರ್ಯಕ್ರಮ ರೂಪಿಸಿರುವುದು ಇಲ್ಲಿನ ಮತ್ತೊಂದು  ವಿಶೇಷವಾಗಿದೆ.  ಪ್ರಸ್ತುತ ನೂರಾರು ಗಿಡಗಳು ಶಾಲೆಯ ಹೊರನೋಟಕ್ಕೆ ಹಸಿರು ಹೊದಿಕೆಯನ್ನು ಹೊದಿಸುವ ಮೂಲಕ, ಇಡೀ ಶಾಲೆಯ ವಾತಾವರಣವನ್ನು ಹಸಿರುಮಯವಾಗಿಸಿದೆ.

ಹೂವಿನ ಗಿಡಗಳನ್ನೆ ಅಲ್ಲದೆ ವಿವಿಧ ಬಗೆಯ ತರಕಾರಿಗಳನ್ನ ಶಾಲೆಯ ಆವರಣದಲ್ಲಿ ಬೆಳೆಸಲಾಗಿದೆ.  ಟೊಮ್ಯಾಟೋ, ನುಗ್ಗೆಕಾಯಿ, ಕುಂಬಳಕಾಯಿ, ಆಲೂಗಡ್ಡೆ, ಬದನೆಯಂತಹ ಹಲವು ಬಗೆಯ ತರಕಾರಿಗಳನ್ನು ಹಾಗೂ ಸೊಪ್ಪನ್ನು ಸಾವಯವ ಪದ್ದತಿಯಲ್ಲಿ ಬೆಳೆಯಲಾಗಿದೆ. ಬಿಂದಿಗೆ, ಒಂದೆಲಗ, ಕಾಡುಬಸಳೆ ಸೇರಿ ಸುಮಾರು 20 ಬಗೆಯ ಔಷಧೀಯ ಗುಣಗಳು ಇರುವಂತಹ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ.

ಕಸದಿಂದಲೇ ರಸ, ನಿರುಪಯುಕ್ತ ವಸ್ತುಗಳ ಅಚ್ಚು ಕಟ್ಟಾದ ಬಳಕೆ: ಸಾರ್ವಜನಿಕರು ಬಳಸಿ ಬಿಸಾಡಿದಂತಹ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಹಲವು ಬಗೆಯ ಹೂವಿನ ಗಿಡಗಳನ್ನು ನೆಟ್ಟು, ಶಾಲೆಯ ಮುಂಭಾಗದ ದ್ವಾರದಲ್ಲಿ ನೇತು ಹಾಕಲಾಗಿದೆ. ಇದು ಶಾಲೆಯಲ್ಲಿ ಪ್ರಮುಖವಾದ  ಆಕರ್ಷಣೆಯ ಕೇಂದ್ರವಾಗಿವೆ. ಶಾಲೆಯಲ್ಲಿ ಹೊರಬೀಳುವ ಕಸ, ಇನ್ನಿತರೆ ತ್ಯಾಜ್ಯಗಳನ್ನು ಸಾವಯವ ಗೊಬ್ಬರವನ್ನಾಗಿಸಿ ಸಸಿಗಳಿಗೆ ನೀಡಲಾಗುತ್ತಿದೆ.

ಸ್ವಚ್ಛತೆಗೆ ಮಹತ್ವ ನೀಡುವ ಜತೆಗೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಅನ್ನು ಮುಕ್ತಗೊಳಿಸಲಾಗಿದೆ. ಶಾಲಾ ಕಟ್ಟಡದ ಹೊರಭಾಗದ ಗೋಡೆಯ ಮೇಲೆ ಕೆಂಪು ಬಣ್ಣದಲ್ಲಿ ರೈಲು ಎಂಜಿನ್‌ ಚಿತ್ರ ಬರೆದು ಶಾಲಾ ಕೊಠಡಿಗಳನ್ನು ರೈಲು ಬೋಗಿಗಳನ್ನಾಗಿ ಬಣ್ಣ ಬಳಿಯಲಾಗಿದ್ದು, ಶಾಲೆಯ ಮುಂಭಾಗ ರೈಲು ನಿಂತಿರುವಂತೆಯೇ ಭಾಸವಾಗುವುದು ಮತ್ತೊಂದು ಆಕರ್ಷಕವಾಗಿದೆ.

ನಿಗದಿತ ಅವಧಿಯಲ್ಲಿ ಅತ್ಯುತ್ತಮ ಪರಿಸರ ಸ್ನೇಹಿ ಶಾಲೆಯನ್ನಾಗಿಸುವಲ್ಲಿ ಶಿಕ್ಷಕರ ಹಾಗೂ ಮಕ್ಕಳ ಪರಿಶ್ರಮ ಮಹತ್ವದ್ದಾಗಿದೆ. ಜಿಲ್ಲಾ ಮಟ್ಟದ ತಂಡ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ವಾತಾವರಣವನ್ನು ಗಮನಿಸಿ ಅತ್ಯುತ್ತಮ ಇಕೋ ಕ್ಲಬ್ ಶಾಲೆಯೆಂದು ಘೋಷಣೆ ಮಾಡಿದ್ದಾರೆ.  ಶಾಲೆಗೆ ದೊರೆತ ಪ್ರಶಸ್ತಿಯ ಹಿಂದೆ ಪ್ರತಿಯೊಬ್ಬ ಶಿಕ್ಷಕರ ಶ್ರಮವಿದ್ದು, ಉತ್ತಮ ಕೆಲಸ ಮಾಡುವಂತಹ ಶಿಕ್ಷಕರಿಗೆ ಪ್ರೋತ್ಸಾಹ ಸಿಗುವುದರ ಜತೆಗೆ ಇತರೆ ಶಾಲೆಗಳ ಶಿಕ್ಷಕರಿಗೆ ಪ್ರೇರಣೆ ಸಿಗುವಂತಾಗಿದೆ.

ಶಾಲೆಯನ್ನು ಪರಿಸರ ಮಿತ್ರ ಶಾಲೆಯನ್ನಾಗಿಸಲು ಮಕ್ಕಳಿಗೆ‌ ಶಿಕ್ಷಕರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದ್ದು,  ಶಾಲೆಯು ಗಡಿಭಾಗದಲ್ಲಿದ್ದು ಮಕ್ಕಳಿಗೆ ಭೋಧನೆಯ ಜತೆಗೆ ಗಿಡಮರ ಬೆಳೆಸುವುದು, ಕಸ ನಿರ್ವಹಣೆ, ನೀರಿನ ಬಳಕೆ, ಸ್ವಚ್ಛತೆ, ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತಿದೆ.  ಮಕ್ಕಳಿಂದಲೇ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದ್ದು, ಮನೆಯಲ್ಲಿ ಸಹ ಗಿಡಗಳನ್ನು ಬೆಳೆಸುವಂತೆ ಪ್ರೇರೇಪಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ. ಜೊತೆಗೆ  ಗುಲ್ಲಹಳ್ಳಿ ಶಾಲೆಗೆ ಅತ್ಯುತ್ತಮ ಇಕೋ ಕ್ಲಬ್ ಶಾಲೆ ಪ್ರಶಸ್ತಿ ದೊರಕಿರುವುದಕ್ಕೆ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಓದು, ಬರಹ, ಆಟದ ಬಗ್ಗೆಯೇ ಮಾರ್ಗದರ್ಶನ ನೀಡುವುದರ ಜೊತೆಗೆ,  ಪರಿಸರದ ಮಹತ್ವವನ್ನ ಮಕ್ಕಳಿಗೆ ಮಾರ್ಗದರ್ಶನ ನೀಡುವ ಅಗತ್ಯತೆ ಎಲ್ಲೆಡೆ ಇದೆಯೆಂ‌ಬ  ಅಭಿಪ್ರಾಯವು ಕೇಳಿಬರುತ್ತಿದೆ.
Published by:Soumya KN
First published: