ಉಡುಪಿ: ಸೈಬರ್ ಅಪರಾಧಗಳು, ದಂಧೆಗಳು ಹೆಚ್ಚುತ್ತಲೇ ಇವೆ. ಎಲ್ಲೋ ಕುಳಿತು ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡುವುದೂ ಅಲ್ಲಲ್ಲಿ ನಡೆಯುತ್ತಿರುತ್ತವೆ. ಆದರೆ ಕರಾವಳಿ ಭಾಗದ ಉಡುಪಿ ಜಿಲ್ಲೆಯಲ್ಲಿ ಹೊಸ ವಂಚನೆ ಪ್ರಕರಣ ನಡೆದಿದೆ. ವ್ಯಕ್ತಿಯೊಬ್ಬರ ಫಿಕ್ಸೆಡ್ ಡಿಪಾಸಿಟ್ ಅನ್ನೇ ಅನಾಮತ್ತಾಗಿ ಲಪಟಾಯಿಸಲಾಗಿದೆ. ಈ ಪ್ರಕರಣದಲ್ಲಿ ಎಸ್ಬಿಐ ಬ್ಯಾಂಕ್ ಬೇಜವಾಬ್ದಾರಿ ಮತ್ತು ಸೇವಾ ನ್ಯೂನತೆಯೂ ಸಾಬೀತಾಗಿದ್ದು ಗ್ರಾಹಕರ ನ್ಯಾಯಾಲಯ ಕಸ್ಟಮರ್ಗೆ ಪೂರ್ತಿ ಹಣ ಪಾವತಿಸುವಂತೆ ತೀರ್ಪು ನೀಡಿದೆ.
ಹೀಗೆ ಬ್ಯಾಂಕ್ ನಿಂದ ಮೋಸ ಹೋದವರು ಹರೀಶ ಗುಡಿಗಾರ್. ಉಡುಪಿಯ ಉಪ್ಪೂರಿನವರು. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಗ ಮಲ್ಲೇಶ್ವರಂನ ಸ್ಟೇಟ್ ಬ್ಯಾಂಕಿನಲ್ಲಿ ಸೇವಿಂಗ್ಸ್ ಬ್ಯಾಂಕ್ ಖಾತೆ ಹೊಂದಿದ್ದರು. ಬಹಳಷ್ಟು ವರ್ಷ ದುಡಿದು ಆರೋಗ್ಯದ ಸಮಸ್ಯೆ ಎದುರಾದಾಗ ಬೆಂಗಳೂರು ತೊರೆದು ಉಡುಪಿಯಲ್ಲಿರುವ ಉಪ್ಪೂರು ಗ್ರಾಮಕ್ಕೆ ಬಂದು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಉಡುಪಿಯ ಸಂತೆಕಟ್ಟೆಯಲ್ಲಿರುವ ಬ್ರಾಂಚಿಗೆ ಅಕೌಂಟ್ ವರ್ಗಾವಣೆ ಮಾಡಿದ್ದರು. ತನ್ನ ದುಡಿಮೆಯ ಐದೂವರೆ ಲಕ್ಷ ರೂಪಾಯಿ ಹಣವನ್ನ ಫಿಕ್ಸಡ್ ಡಿಪಾಸಿಟ್ ಇಟ್ಟರು. ಹೀಗೆ ಕೆಲವು ವರ್ಷಗಳ ಬಳಿಕ ತನ್ನದೊಂದು ಗುಡಿ ಕೈಗಾರಿಕೆ ಉದ್ಯಮ ನಡೆಸಬೇಕೆಂದು ಕನಸು ಕಟ್ಟಿಕೊಂಡಿದ್ದರು. ಹೀಗೆ ಕನಸು ಕಾಣೋ ಸಮಯದಲ್ಲೇ ಮೊಬೈಲ್ ಗೆ ಹಣ ವರ್ಗಾವಣೆ ಮೆಸೇಜ್ ಬರಲು ಶುರುವಾಗಿದೆ. ನೋಡಿದರೆ ಹರೀಶ್ ಅವರ ಫಿಕ್ಸಡ್ ಡೆಪಾಸಿಟ್ ನಲ್ಲಿದ್ದ ಹಣವೇ ಮಾಯವಾಗಿತ್ತು. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ನವರು ಗ್ರಾಹಕರ ನೆರವಿಗೆ ಬರಬೇಕು. ದುರದೃಷ್ಟವಶಾತ್ ಬ್ಯಾಂಕ್ ನವರು ನೆರವಿಗೆ ಬರಲಿಲ್ಲ. ಹರೀಶ್ ತಮ್ಮ ಐದು ಲಕ್ಷದ 50 ಸಾವಿರ ಹಣ ಕಳೆದುಕೊಂಡು ಹೈರಾಣಾದರು.
ಪೊಲೀಸ್ ಠಾಣಗೆ ದೂರು ಕೊಟ್ಟರು. ಬ್ಯಾಂಕ್ ಮ್ಯಾನೇಜರ್ ಗೆ ದುಂಬಾಲು ಬಿದ್ದರು. ಬ್ಯಾಂಕಲ್ಲೂ ಸಮರ್ಪಕ ಉತ್ತರ ಬಾರದೇ ಇದ್ದ ಕಾರಣ, ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಎಲ್ಲ ತನಿಖೆ ನಂತರ ಹರೀಶ್ ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ಜೊತೆಗೆ 50 ಸಾವಿರ ದಂಡ ಸಹಿತ ನೀಡಬೇಕು ಎಂದು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಇನ್ನು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಅಂದರೆ ಸೇವಿಂಗ್ ಅಕೌಂಟ್ ನಲ್ಲಿರೋ ಹಣವಾದರೂ ಲಪಾಟಿಯಿಸೋದು ಸುಲಭ. ಆದ್ರೆ ಫಿಕ್ಸಡ್ ಡೆಪಾಸಿಟ್ ಹಣ ಆಫ್ ಲೈನ್ ಮೂಲಕ ಬ್ಯಾಂಕ್ ಮೂಲಕವೇ ಪಡೆಯಬೇಕು. ಪಾಸ್ ವರ್ಡ್ ಇದ್ರೂ ಸಾಧ್ಯವಿಲ್ಲ. ಆದ್ರೆ ಆನ್ ಲೈನ್ ಮೂಲಕವೇ ಹರೀಶ್ ಅವರ ಸೇವಿಂಗ್ ಅಕೌಂಟ್ ಗೆ ಎಫ್ ಡಿ ಹಣ ವರ್ಗಾವಣೆ ಆಗಿ, ಮತ್ತೆ ದೆಹಲಿ ಶಾಖೆಗೆ ವರ್ಗಾವಣೆ ಆಗಿದೆ. ಇದಾದ ಬಳಿಕ ಹರೀಶ್ ಪೊಲೀಸರ ಮೊರೆ ಹೋದ ಮೇಲೆ ದೆಹಲಿ ಹೋದ ಹಣ ಬ್ಲಾಕ್ ಮಾಡಲಾಗಿದೆ. ಅಲ್ಲಿಯವರೆಗೂ ಬ್ಯಾಂಕ್ ಮ್ಯಾನೇಜರ್ ಕೌಶಲ್ ಆಸಕ್ತಿ ತೋರಿಸದಿರುವುದು ಬ್ಯಾಂಕ್ ಸಿಬ್ಬಂದಿಗಳ ಶಾಮೀಲು ಇಲ್ಲಿ ದಟ್ಟವಾಗಿ ಗೋಚರಿಸುತ್ತಿದೆ.
ಇದನ್ನು ಓದಿ: Youngest Pilot of India; ದೇಶದ ಅತ್ಯಂತ ಕಿರಿಯ ಪೈಲೆಟ್ ಹೆಗ್ಗಳಿಗೆ ಪಾತ್ರಳಾದ ರೈತನ ಮಗಳು!
ಇನ್ನು ಆಶ್ಚರ್ಯದ ಸಂಗತಿ ಎಂದರೆ ಹರೀಶ್ ಅವರು ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ದಂಡ 50 ಸಾವಿರ ಹಣದೊಂದಿಗೆ 30 ದಿನಗಳೊಳಗೆ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡಿದ್ದರೂ 40 ದಿನಗಳಾದರೂ ಬ್ಯಾಂಕ್ ನವರು ಹಣ ನೀಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಹರೀಶ್ ಮಾನವ ಹಕ್ಕು ಹೋರಾಟಗಾರ ರವೀಂದ್ರನಾಥ್ ಶಾನುಭಾಗ್ ಮೊರೆ ಹೋಗಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ವರದಿ: ಪರೀಕ್ಷಿತ್ ಶೇಟ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ