news18-kannada Updated:September 1, 2020, 2:45 PM IST
ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ
ಬೆಳಗಾವಿ(ಸೆಪ್ಟೆಂಬರ್.01): ಕೊರೋನಾ ವೈರಸ್ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಅಂದನಿಂದ ಬೆಳಗಾವಿಯ ಪ್ರಮುಖ ಶಕ್ತಿ ದೇವಸ್ಥಾನಗಳಾದ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ಹಾಗೂ ಜೋಗುಳಬಾವಿ ಸತ್ಯಮ್ಮ ದೇವಸ್ಥಾನ ಭಕ್ತ ಪ್ರವೇಶ ನಿಷೇಧಿಸಲಾಗಿತ್ತು. ಸದ್ಯ ರಾಜ್ಯದ ಬಹುತೇಕ ದೇವಸ್ಥಾನಗಳು ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ. ಆದರೆ, ಬೆಳಗಾವಿ ಜಿಲ್ಲೆಯ ಮೂರು ದೇವಸ್ಥಾನಗಳು ಮಾತ್ರ ಸೆಪ್ಟೆಂಬರ್ ಅಂತ್ಯದ ವರೆಗೆ ಓಪನ್ ಆಗಲ್ಲ ಎಂದು ಜಿಲ್ಲಾಢಳಿತ ಆದೇಶ ಹೊರಡಿಸಿದೆ.
ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದಲೇ ಅತಿಹೆಚ್ಚು ಭಕ್ತರು ಆಗಮಿಸುತ್ತಾರೆ. ಇನ್ನೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಹಾವಳಿ ಕಡಿಮೆಯೆಯಾಗಿಲ್ಲ. ಇದೇ ರೀತಿಯ ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೂ ಮಹಾರಾಷ್ಟ್ರದಿಂದಲೇ ಹೆಚ್ಚು ಭಕ್ತರು ಆಗಮಿಸುತ್ತಾರೆ. ಹೀಗಾಗಿ ಇನ್ನೂ ಒಂದು ತಿಂಗಳು ದೇವಾಲಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಪರಿಷ್ಕೃತ ಆದೇಶವನ್ನು ಹೊರಡಿಸಿದ್ದಾರೆ.
ಮಾರ್ಚ್ 22ರಿಂದ ಮೂರು ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಆದರೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ಎಂದಿನಂತೆ ನಡೆಯುತ್ತಿವೆ. ಭಕ್ತರು ಇಲ್ಲಿದೇ ಮೂರು ಕ್ಷೇತ್ರಗಳಲ್ಲಿ ಬಿಕೋ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ದೇವಸ್ಥಾನದ ಭಕ್ತರನ್ನು ನಂಬಿಕೊಂಡು ನಿರ್ಮಾಣವಾಗಿದ್ದು, ಅನೇಕ ಮಳಿಗೆಗಳಿಗೆ ಇದೀಗ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಮಳಿಗೆಗಳನ್ನು ನಂಬಿದವರು ಇದೀದ ಜೀವನ ನಡೆಸಲು ಕಷ್ಟಕರವಾಗಿರುವ ಸಂದರ್ಭ ಸಹ ನಿರ್ಮಾಣವಾಗಿದೆ.
ಇದನ್ನೂ ಓದಿ :
ಒಂದು ವರ್ಷದಿಂದ ಮಠದಲ್ಲಿಯೇ ಬದುಕು ನಡೆಸುತ್ತಿದೆ ಸಂತ್ರಸ್ತರ ಕುಟುಂಬ ; ಈಡೇರದ ಸರ್ಕಾರದ ಭರವಸೆ..!
ಕಳೆದ 6 ತಿಂಗಳಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಆದಾಯದಲ್ಲಿಯೂ ದೊಡ್ಡ ಪ್ರಮಾಣ ಹೊಡೆತೆ ಬಿದ್ದಿದೆ. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ 5ರಿಂದ 6 ಕೋಟಿಯಷ್ಟು ಆದಾಯದಲ್ಲಿ ಹೊಡೆತ ಬಿದ್ದಿದೆ. ಅದೇ ರೀತಿ ದೇವಸ್ಥಾನದಲ್ಲಿ 150ಕ್ಕೂ ಹೆಚ್ಚು ಸಿಬ್ಬಂಧಿ ಕಾರ್ಯನಿರ್ವಹಿಸುತ್ತಿದ್ದು. ದೇವಾಸ್ಥಾನದ ಎಫ್ ಡಿ ಹಣದಲ್ಲಿ ಸಿಬ್ಬಂಧಿಗೆ ಸಂಬಳ ನೀಡಲಾಗುತ್ತಿದೆ.
ಈ ತಿಂಗಳು ದೇವಸ್ಥಾನಕ್ಕೆ ಪ್ರವೇಶಕ್ಕೆ ಅವಕಾಶ ನೀಡಲು ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಲಾಗಿತ್ತು. ಆದರೆ, ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ಸೂಚನೆ ಹಿನ್ನೆಲೆಯಲ್ಲಿ ಒಂದು ತಿಂಗಳು ಮತ್ತೆ ದೇಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಹೇಳಿದ್ದಾರೆ.
Published by:
G Hareeshkumar
First published:
September 1, 2020, 2:44 PM IST