news18-kannada Updated:January 26, 2021, 4:01 PM IST
ಮೈಸೂರಿನಲ್ಲಿ ಶುರುವಾಗಿರುವ ಶ್ರೀಗಂಧ ಮರದ ಸಂಗ್ರಹಾಲಯ.
ಮೈಸೂರು; ಕರ್ನಾಟಕವನ್ನು ಶ್ರೀಗಂಧದ ನಾಡು ಎಂದು ಕರೆಯುತ್ತಾರೆ. ಇದಕ್ಕಾಗಿಯೇ ಕನ್ನಡ ಚಿತ್ರರಂಗಕ್ಕೆ ಸ್ಯಾಂಡಲ್ವುಡ್ ಅಂತ ಹೆಸರು ಬಂದಿದೆ. ದೇಶದಲ್ಲೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ ಹಾಗೂ ಮಾರಾಟ ಮಾಡುವ ರಾಜ್ಯ ಕರ್ನಾಟಕ. ಅಂತ ಕರ್ನಾಟಕಕ್ಕೆ ಮತ್ತಷ್ಟು ಘನತೆ ಹೆಚ್ಚಿಸುವ ಸ್ಯಾಂಡಲ್ವುಡ್ ಮ್ಯೂಸಿಯಂವೊಂದು ಅರಮನೆ ನಗರಿ ಮೈಸೂರಿನಲ್ಲಿ ಆರಂಭವಾಗಿದೆ. ಕರ್ನಾಟಕ ಅರಣ್ಯ ಇಲಾಖೆ ಮೈಸೂರಿನಲ್ಲಿ ದೇಶದ ಮೊಟ್ಟಮೊದಲ ಶ್ರೀಗಂಧದ ವಸ್ತು ಸಂಗ್ರಹಾಯ ಆರಂಭವಾಗಿದ್ದು, ಮೈಸೂರಿನ ಈ ಸ್ಯಾಂಡಲ್ವುಡ್ ಮ್ಯೂಸಿಯಂ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
ಹೌದು, ರಾಜ್ಯದ ಸುಗಂಧದ ಪ್ರತೀಕವಾಗಿದ್ದ ಶ್ರೀಗಂಧದ ಮರಗಳು ಇದೀಗಾ ಎಲ್ಲಿವೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಣ್ಮರೆಯಾಗುತ್ತಿರುವ ಅತ್ಯಂತ ಬೆಲೆಬಾಳುವ ಮತ್ತು ಬೇಡಿಕೆ ಇರುವ ಇಂತಹ ಶ್ರೀಗಂಧಕ್ಕೆ ಮತ್ತೆ ಹಿಂದಿನ ವೈಭವ ತರಲು ಅರಣ್ಯ ಇಲಾಖೆ ಶ್ರೀಗಂಧದ ಮ್ಯೂಸಿಯಂ ತೆರೆದಿದೆ. ಮೈಸೂರಿನ ಅರಣ್ಯ ಭವನದಲ್ಲಿರುವ ದೇಶದ ಮೊದಲ ಶ್ರೀಗಂಧದ ಮ್ಯೂಸಿಯಂ ಲೋಕಾರ್ಪಣೆಗೊಂಡಿದ್ದು, ಮೈಸೂರು ಉಸ್ತುವಾರಿ ಸಚಿವ ಹಾಗೂ ಇಲ್ಲಿನ ಜನಪ್ರತಿನಿಧಿಗಳು ಈ ಅಪರೂಪದ ಮ್ಯೂಸಿಯಂ ಅನ್ನು ಸಾರ್ವಜನಿಕರ ವಿಕ್ಷಣೆಗೆ ಮುಕ್ತವಾಗಿಸಿದ್ದಾರೆ.
ಶ್ರೀಗಂಧದ ಮರದ ತುಂಡುಗಳು ಭಿನ್ನ-ವಿಭಿನ್ನವಾದ ವಸ್ತುಗಳು. ಸುಂದರ ಸುಗಂಧ ಭರಿತವಾದ ಶ್ರೀಗಂಧದ ಮ್ಯೂಸಿಯಂ ಮೈಸೂರಿನ ಅರಣ್ಯಭವನದಲ್ಲಿ ಆರಂಭವಾಗಿದೆ. ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ಸ್ಥಾಪನೆಯಾಗಿರುವ ಈ ಮ್ಯೂಸಿಯಂ ದೇಶದ ಮೊದಲ ಶ್ರೀಗಂಧದ ಮ್ಯೂಸಿಯಂ ಎನಿಸಿಕೊಂಡಿದೆ. ಹೌದು, ಶ್ರೀಗಂಧದ ನಾಡು ನಮ್ಮ ಕರುನಾಡು ಈ ಅಮೂಲ್ಯವಾದ ಶ್ರೀಗಂಧವನ್ನು ಹೇರಳವಾಗಿ ಹೊಂದಿದೆ. ಈ ಸಂಪತ್ತು ನಮ್ಮ ರಾಜ್ಯದಿಂದ ಇದೀಗಾ ಕಣ್ಮರೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಶ್ರೀಗಂಧವನ್ನು ನಾವು ಫೋಟೋಗಳಲ್ಲಿ ಹಾಗೂ ವಸ್ತು ಸಂಗ್ರಹಾಲಯಗಳಲ್ಲಿ ಮಾತ್ರ ನೋಡಬೇಕಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗಾಗಲೇ ಶ್ರೀಗಂಧದ ಕೊರತೆಯಿಂದಾಗಿ ಅದರ ಬೆಲೆಯು ಗಗನಕ್ಕೇರಿದ್ದು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅದನ್ನು ಬೆಳೆಸಿ - ಉಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅದಕ್ಕಾಗಿಯೇ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ತೆರೆದಿದೆ. ಇಲ್ಲಿ ಗಂಧದ ತುಂಡುಗಳಿಂದ ಹಿಡಿದು ಅದರ ಪ್ರತಿಯೊಂದು ಹಂತದ ಮರದ ಚೂರುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರು ಮ್ಯೂಸಿಯಂಗೆ ಭೇಟಿ ನೀಡಿದ ಶ್ರೀಗಂಧದ ಮಾಹಿತಿಯನ್ನು ಪಡೆಯಬಹುದಾಗಿದೆ.
ಇದನ್ನು ಓದಿ: Farmers Protest | ದೆಹಲಿಯ ಐತಿಹಾಸಿಕ ಕೆಂಪುಕೋಟೆ ಮುತ್ತಿಗೆ ಹಾಕಿದ ರೈತ ಪ್ರತಿಭಟನಾಕಾರರು!
ಇನ್ನು ಭಾರತೀಯ ಶ್ರೀಗಂಧದ ಬೆಳೆಯ ಬಗ್ಗೆ ಬೆಳೆಗಾರರಿಗೆ, ರೈತರಿಗೆ ಮತ್ತು ಸಂಘ ಸಂಸ್ಥೆಗಳಿಗೆ ವೈಜ್ಞಾನಿಕ, ತಾಂತ್ರಿಕ ಮತ್ತು ಮಾರುಕಟ್ಟೆ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ. ಆಸಕ್ತರು ವೀಡಿಯೋ ಮೂಲಕ ಮಾಹಿತಿ ಪಡೆಯಲು ಪ್ರೋಜೆಕ್ಟರ್ ಕೊಠಡಿ ಕೂಡ ನಿರ್ಮಾಣ ಮಾಡಲಾಗಿದೆ. ಇನ್ನು ವಾರದ ಏಳು ದಿನಗಳ ಕಾಲ ಕೂಡ ಪ್ರವಾಸಿಗರಿಗೆ ಉಚಿತವಾಗಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಶ್ರೀಗಂಧದ ಕಳ್ಳತನದ ಬಗ್ಗೆ ಸಾಕಷ್ಟು ದೂರುಗಳಿರುವುದರಿಂದ ಅದನ್ನು ಸರಿಪಡಿಸಲು ಶ್ರೀಗಂಧದ ಮರಕ್ಕೆ ಮೈಕ್ರೋ ಚಿಪ್ ಅಳವಡಿಸುವ ತಂತ್ರಜ್ಞಾನ ಕೂಡ ಪ್ರಾಯೋಗಿಕ ಹಂತದಲ್ಲಿದ್ದು ಕೆಲವೆಡೆ ಇದು ಸಕ್ಸಸ್ ಆಗಿದೆಯಂತೆ. ಈ ಮೂಲಕ ಶ್ರೀಗಂಧ ಬೆಳೆಯುವವರು ಯಾವುದೇ ಅಂಜಿಕೆ ಇಲ್ಲದೆ ಬೆಳೆಯಬಹುದಾಗಿದೆ.
ಒಟ್ಟಿನಲ್ಲಿ ಆಧುನಿಕತೆ ಜೊತೆ ಕೃಷಿ ಅಭಿವೃದ್ದಿ ಹಾಗೂ ಅರಣ್ಯ ಸಂರಕ್ಷಣೆ ಜೊತೆಗೆ ಶ್ರೀಗಂಧದ ಅಭಿವೃದ್ದಿಗೆ ಅರಣ್ಯ ಇಲಾಖೆ ಮುಂದಾಗಿದೆ. ನಮ್ಮ ಕರುನಾಡು, ಮತ್ತೆ ಶ್ರೀಗಂಧಮಯವಾಗಲಿ. ನಾಡಿನ ತುಂಬೆಲ್ಲ ಶ್ರೀಗಂಧದ ಕಂಪು ಪಸರಿಸಲಿ ಅನ್ನೋದೆ ನಮ್ಮ ಎಲ್ಲರ ಆಶಯ.
Published by:
HR Ramesh
First published:
January 26, 2021, 4:01 PM IST