ಮಂಗಳೂರು(ಆಗಸ್ಟ್. 16): ಪಂಚ ದ್ರಾವಿಡ ಭಾಷೆಯಾದ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು, ತುಳು ಭಾಷೆಯನ್ನು ಕೂಡ ‘ನೂತನ ಶಿಕ್ಷಣ ನೀತಿ-2020’ರಡಿಯಲ್ಲಿ ಸೇರಿಸುವ ಬಗ್ಗೆ ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲು #EducationInTulu ಅನ್ನುವ ಹ್ಯಾಷ್ಟ್ಯಾಗ್ನಲ್ಲಿ ಟ್ವೀಟ್ ಅಭಿಯಾನ ಆರಂಭವಾಗಿದೆ.
ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ 5 ಅಥವಾ 8ನೇ ತರಗತಿಯವರೆಗೆ ಸ್ಥಳಿಯ ಅಥವಾ ಮಾತೃಭಾಷೆಯೇ ಬೋಧನ ಮಾಧ್ಯಮ ವಾಗಿರಬೇಕೆಂಬ ಅಂಶವನ್ನು ಉಲ್ಲೇಖಿಸಲಾಗಿದೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕು ಎನ್ನುವ ಒತ್ತಾಯ ಹೆಚ್ಚಿರುವ ಬೆನ್ನಲ್ಲೆ ಈಗ ಶಿಕ್ಷಣದಲ್ಲಿ ತುಳು ಸ್ಥಾನಮಾನ ಬೇಡಿಕೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತುಳು ಭಾಷಿಕ ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂದು ಅಭಿಯಾನ ಆರಂಭಿಸಲಾಗಿದೆ. ಈ ಹಿನ್ನಲೆಯಲ್ಲಿ ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಅನೇಕ ಮಂದಿ ಈಗಾಗಲೇ #EducationInTulu ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ನಟ ಜಗ್ಗೇಶ್ ಕೂಡಾ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಟ್ವಿಟ್ ಮಾಡಿದ್ದಾರೆ. ನಾನು ಕೂಡಾ ನಿಮ್ಮೊಂದಿಗೆ ತುಳು ಭಾಷೆ ಅಭಿಯಾನಕ್ಕೆ ಬರುತ್ತೇನೆ ಎಂದು ಜಗ್ಗೇಶ್ ಟ್ವಿಟ್ ಮಾಡಿದ್ದಾರೆ.
— ನವರಸನಾಯಕ ಜಗ್ಗೇಶ್ (@Jaggesh2) August 16, 2020
ಇದನ್ನೂ ಓದಿ : ಬೆಂಗಳೂರು ಗಲಭೆ - ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಸುಳ್ಳು ಹೇಳುವುದು ಸರಿಯಲ್ಲ ; ಡಿಕೆಶಿಗೆ ಗೋವಿಂದ ಕಾರಜೋಳ ತಿರುಗೇಟು
ತುಳುನಾಡಿನ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಸಿಕ್ಕಿದರೆ ತುಳು ಭಾಷೆ ಶೈಕ್ಷಣಿಕ ಭಾಷೆಯಾಗಿ ಹೊರಹೊಮ್ಮಲಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಬಳಿ ತುಳುವನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸುವ ಬಗ್ಗೆ ಮನವಿ ಮಾಡಬೇಕಾಗಿದ್ದು, ಈ ಮೂಲಕ ಸರ್ಕಾರದ ಗಮನ ಸೆಳೆಯುವ ಅಗತ್ಯತೆ ಇದೆ. ಹೀಗಾಗಿ ತುಳು ಅಭಿಮಾನಿಗಳು ಪಾಲ್ಗೊಂಡು #EducationInTulu ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಎಚ್ಚರಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ