ಚಿತ್ರದುರ್ಗದ ವೇದಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ: ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಗುತ್ತಿಗೆ ಪಡೆದ ಮೈಸೂರು ಮೂಲದ ವ್ಯಕ್ತಿಗಳು ಕೆಲವು  ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಮರಳುಗಾರಿಕೆ ಮಾಡುತಿದ್ದಾರೆ. ಅಕ್ರಮವಾಗಿ ಹಗಲು- ರಾತ್ರಿಯೆನ್ನದೇ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಹತ್ತು ಅಡಿಗಳಿಗಿಂತಲೂ ಹೆಚ್ಚು ಆಳದವರೆಗೆ ಮರಳು ಬಗೆಯುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ ಸರ್ಕಾರದ ಕಾಮಗಾರಿ ಮತ್ತು ಸ್ಥಳೀಯರಿಗೆ ಕೊಡಬೇಕಾದ ಮರಳನ್ನು ರಾತ್ರಿ ಸಮಯದಲ್ಲಿ ಬೇರೆ ಜಿಲ್ಲೆಗಳಿಗೆ ಸಾಗಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅಕ್ರಮ ಮರಳು ಸಾಗಾಣಿಕೆ

ಅಕ್ರಮ ಮರಳು ಸಾಗಾಣಿಕೆ

  • Share this:
ಚಿತ್ರದುರ್ಗ(ಜೂ.06): ಕೊರೋನಾ ಮಹಾಮಾರಿಯಿಂದಾಗಿ ಇಡೀ ದೇಶವೇ ತಲ್ಲಣಗೊಂಡಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿದ ಬಳಿಕ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಸರ್ಕಾರಿ ಅಧಿಕಾರಿಗಳೇ ದಂಧೆಕೋರರ ಬೆನ್ನಿಗೆ ನಿಂತಿದ್ದಾರಾ ಎನ್ನುವ ಅನುಮಾನಗಳು ಬಲವಾಗಿ ಕಾಡತೊಡಗಿವೆ. ಯಾಕೆಂದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಸದ್ದಿಲ್ಲದೇ ಮತ್ತೆ ಶುರುವಾಗಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕನ್ನಾಗೊಂದಿ ಗ್ರಾಮದ ಸಮೀಪ ಇರುವ ವೇದಾವತಿ ನದಿ ಪಾತ್ರದ ಸದ್ದಿಲ್ಲದೇ ಅಕ್ರಮ ಮರಳು ಗಣಿಗಾರಿಕೆ‌ ಶುರುವಾಗಿದೆ. ಮರಳು ದಂಧೆಕೋರರು ಹರಿಯವ ನದಿ ಪಾತ್ರದಲ್ಲಿ ನಿಯಮ ಮೀರಿ ಹಿಟಾಚಿ, ಜೆಸಿಬಿ ಮೂಲಕ ಅಕ್ರಮವಾಗಿ ಮರಳು ಸಾಗಾಟ  ಮಾಡುತ್ತಿದ್ದಾರೆ.  ಅವೈಜ್ಞಾನಿಕವಾಗಿ ಅಕ್ರಮವಾಗಿ  ಮರಳು ತೆಗೆಯದಂತೆ ತಡೆಯಲು  ರೈತರು ಮುಂದಾದರೆ ಅವರಿಗೂ ಕ್ಯಾರೇ ಅಂದಿಲ್ಲ ಆ ಗುತ್ತಿಗೆದಾರರು.

ಅಂದಹಾಗೆ ಹೊಸದುರ್ಗ ತಾಲೂಕಿನ ಹಲವೆಡೆ ವೇದಾವತಿ ನದಿಯಲ್ಲಿ ಮರಳು ತೆಗೆಯಲು ಅಧಿಕೃತ ಮರಳು ಪಾಯಿಂಟ್​​ಗಳಲ್ಲಿ ಅನುಮತಿ ನಿಡಿದ್ದು, ನಿಯಮಗಳನ್ನು ಪಾಲಿಸುವಂತೆ ಆದೇಶ ಮಾಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮದ ಪ್ರಕಾರ ಹಗಲು ಹೊತ್ತಿನಲ್ಲಿ ಮಾತ್ರ ಮರಳು ತೆಗೆಯಬೇಕು. ನೀರು ಹರಿಯುವವಾಗ ಮಳೆಗಾಲದಲ್ಲಿ ಮರಳು ಗಣಿಗಾರಿಕೆ ಮಾಡುವಂತಿಲ್ಲ.  ಮೂರು ಅಡಿ ಆಳದವರೆಗೆ ಮಾತ್ರ ಸಮಾನಾಂತರದಲ್ಲಿ ಮರಳು ತೆಗೆಯಬೇಕು. ಸಂಜೆ ಆರು ಗಂಟೆಯ ನಂತರ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ನಿಯಮಗಳನ್ನ ವಿಧಿಸಿದೆ.

ಆದರೆ ಹೊಸದುರ್ಗ ತಾಲೂಕಿನ ವೇದಾವತಿ ನದಿಯಲ್ಲಿ ಹಗಲು ರಾತ್ರಿಯೆನ್ನದೇ ಮರಳು ಗಣಿಗಾರಿಕೆ ನಡೆಯುತ್ತಿದೆ. ಗುತ್ತಿಗೆ ಪಡೆದ ಮೈಸೂರು ಮೂಲದ ವ್ಯಕ್ತಿಗಳು ಕೆಲವು  ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಮರಳುಗಾರಿಕೆ ಮಾಡುತಿದ್ದಾರೆ. ಅಕ್ರಮವಾಗಿ ಹಗಲು- ರಾತ್ರಿಯೆನ್ನದೇ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಹತ್ತು ಅಡಿಗಳಿಗಿಂತಲೂ ಹೆಚ್ಚು ಆಳದವರೆಗೆ ಮರಳು ಬಗೆಯುತ್ತಿದ್ದಾರೆ. ಅಷ್ಟು ಮಾತ್ರವಲ್ಲದೇ ಸರ್ಕಾರದ ಕಾಮಗಾರಿ ಮತ್ತು ಸ್ಥಳೀಯರಿಗೆ ಕೊಡಬೇಕಾದ ಮರಳನ್ನು ರಾತ್ರಿ ಸಮಯದಲ್ಲಿ ಬೇರೆ ಜಿಲ್ಲೆಗಳಿಗೆ ಸಾಗಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರಿನಲ್ಲಿ 1.48 ಕೋಟಿ ರೂ. ವೆಚ್ಚದಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ನಿರ್ಮಾಣಕ್ಕೆ ಚಾಲನೆ

ಇನ್ನು, ವೇದಾವತಿ ನದಿ ಕಳೆದ ಹಲವಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿತ್ತು, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಆದ ಉತ್ತಮ ಮಳೆ ಹಾಗೂ, ಇದೀಗ ತಡವಾಗಿ ಆರಂಭವಾಗಿರುವ ಮುಂಗಾರು ಮಳೆಯಿಂದಾಗಿ ನದಿಯಲ್ಲಿ ನೀರುಹರಿಯುತ್ತಿದೆ. ಆದರೆ ಇಪ್ಪತ್ತು ಅಡಿಗಳಷ್ಟು ಆಳದವರೆಗೆ ಮರಳು ತೆಗೆದು ಗುಂಡಿಗಳಾಗುತ್ತಿರುವುದರಿಂದ ನದಿಯಲ್ಲಿ ನೀರು ಸರಾಗವಾಗಿ ಹರಿಯದೆ ಮಡುವುಗಳಾಗುತ್ತಿವೆ. ನೀರು ಕುಡಿಯಲು ನದಿಗೆ ಇಳಿದ ಜನ-ಜಾನುವಾರುಗಳು ಆಳದ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪುತ್ತಿವೆ.

ಅಷ್ಟೆ ಅಲ್ಲದೇ ನದಿ ಪಾತ್ರದ ರೈತರಿಗೂ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ಬಗ್ಗೆ  ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಣಿಗಾರಿಕೆಗೆ ಗುತ್ತಿಗೆ ಪಡೆದವರು ಈಗ ಮತ್ತೆ ಅಕ್ರಮವಾಗಿ ಬೇರೆ ಬೇರೆ ಜಾಗಗಳಲ್ಲಿ‌ ಮರಳು ಬಗೆದು  ದಂಧೆ ಮಾಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳೇ ಅಕ್ರಮ ಮರಳು ದಂಧೆಕೋರರ ಜೊತೆ ಶಾಮೀಲಾಗಿರಬಹುದು ಎಂದು ನದಿ ಪಾತ್ರದ ರೈತರು ಆರೋಪ ಮಾಡುತ್ತಿದ್ದಾರೆ.

ಒಟ್ಟಾರೆ ಲಾಕ್ ಡೌನ್ ಸಮಯದಲ್ಲಿ ಸ್ಥಬ್ದಗೊಂಡಿದ್ದ ಹಲವು ರೀತಿಯ ಅಕ್ರಮ ಚಟುವಟಿಕೆಗಳು ಲಾಕ್ ಡೌನ್ ಸಡಿಲಿಕೆ ಬಳಿಕ ಮತ್ತೆ ಪ್ರಾರಂಭವಾಗಿವೆ. ಅದರಲ್ಲೂ ಸರ್ಕಾದ ಅಧಿಕೃತ ಮರಳು ಪಾಯಿಂಟ್ ಗಳ ‌ಹೆಸರಲ್ಲಿ  ಅಕ್ರಮ ಮರಳು ಗಾರಿಕೆ ಮುಂದುವರಿದಿದೆ. ಆದರೆ ಇದನ್ನು ತಡೆಯಬೇಕಾದ  ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡಿ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನಾದರೂ ಇಂತ ಇಂತ ಅಕ್ರಮಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಿದೆ.
First published: