ಹಸಿದವರ ಹೊಟ್ಟೆ ತುಂಬಿಸುವ ‘ಸಂಚಿಗೊಂದು’ ಕಾರ್ಯಕ್ರಮ ಬೆಂಗಳೂರಲ್ಲಿ ಯಶಸ್ವಿ

ಒಂದು ಊಟ ನನಗೆ, ಮತ್ತೊಂದು ಊಟ ಹಸಿದಿರುವ ಇನ್ನೊಬ್ಬರಿಗೆ ಎಂಬ ಕಲ್ಪನೆಯೊಂದಿಗೆ ಹೋಟೆಲ್ನಲ್ಲಿ ಗ್ರಾಹಕರು ಎರಡು ಊಟದ ಟೋಕನ್ ತೆಗೆದುಕೊಳ್ಳುವ ಒಂದು ವಿಶೇಷ ಸಾಮಾಜಿಕ ಕಾಳಜಿಯ ಕಾರ್ಯಕ್ರಮವೇ ಸಂಚಿಗೊಂದು….

news18-kannada
Updated:October 30, 2020, 7:09 AM IST
ಹಸಿದವರ ಹೊಟ್ಟೆ ತುಂಬಿಸುವ ‘ಸಂಚಿಗೊಂದು’ ಕಾರ್ಯಕ್ರಮ ಬೆಂಗಳೂರಲ್ಲಿ ಯಶಸ್ವಿ
ಸಂಚಿಗೊಂದು ಕಾರ್ಯಕ್ರಮ
  • Share this:
ಬೆಂಗಳೂರು: ಹಸಿದವರ ಹೊಟ್ಟೆ ತುಂಬಿಸೋಕೆ ಬೆಂಗಳೂರಿನ ಹೋಟೆಲುಗಳು ಕಂಡುಕೊಂಡ ಹೊಸಾ ದಾರಿ ಸಂಚಿಗೊಂದು ಬಗ್ಗೆ ಕೆಲ ದಿನಗಳ ಹಿಂದೆ ನಾವು ವರದಿ ಮಾಡಿದ್ದೆವು. ಈ ಹೊಸ ಕಾರ್ಯಕ್ರಮ ಈಗ ಹೇಗೆ ನಡೆಯುತ್ತಿದೆ? ಜನರಿಗೆ ಇದು ಎಷ್ಟರ ಮಟ್ಟಿಗೆ ಇಷ್ಟವಾಗಿದೆ?

ಸಂಚಿಗೊಂದು... ಒಂದು ಊಟ ತನಗೆ, ಮತ್ತೊಂದು ಹಸಿದಿರುವ ಇನ್ನೊಬ್ಬರಿಗೆ.. ತಾನು ಕೊಟ್ಟದ್ದು ಆತನಿಗೆ ತಿಳಿಯಬೇಕಿಲ್ಲ... ಹಣವಿಲ್ಲದ್ದಕ್ಕಾಗಿ ಆತ ಹಸಿದಿರಬೇಕಿಲ್ಲ.. ಹೀಗೆ ಹಂಚಿಕೊಳ್ಳುವ ಅಭ್ಯಾಸವನ್ನು ಉತ್ತೇಜಿಸೋಕೆ.. ದಾನಿಗಳು ಮತ್ತು ಅವಶ್ಯಕವಿರುವ ಹಸಿದವರ ನಡುವಿನ ಕೊಂಡಿಯಾಗೋಕೆ ಅಂತಲೇ ಶುರುವಾದ ಒಂದೊಳ್ಳೆ ಕೆಲ್ಸ ಸಂಚಿಗೊಂದು.

ಬೃಹತ್ ಬೆಂಗಳೂರು ಹೋಟೆಲ್ ಅಸೊಶಿಯೇಶನ್ ಶುರುಮಾಡಿದ ಈ ಕಾರ್ಯಕ್ರಮ ಈಗ ಯಶಸ್ವಿಯಾಗಿ ನಡೆಯುತ್ತಿದೆ. ಹೋಟೆಲುಗಳ ಸಂಚಿಗಳಲ್ಲಿ ಇಡೀ ದಿನ ಧಾರಾಳವಾಗಿ ಕೆಂಪು ಮತ್ತು ನೀಲಿ ಟೋಕನ್​ಗಳು ಬಂದು ಬೀಳುತ್ತಿವೆ. ಅದೇ ರೀತಿ ಹಸಿದ ಅನೇಕರು ಬೇಡುವ ಬದಲು ಧನ್ಯವಾದದೊಂದಿಗೆ ಆಹಾರ ಪಡೆಯುತ್ತಿದ್ದಾರೆ. ಹೋಟಲುಗಳ ಈ ವಿನೂತನ ಪ್ರಯತ್ನಕ್ಕೆ ಅದೆಷ್ಟು ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ ಅಂದ್ರೆ ಕೆಲವು ಉದಾರ ಮನಸ್ಸಿನವರು ದಿನಕ್ಕೆ ಒಂದು ಊಟದಂತೆ ತಿಂಗಳಿಡೀ ತನ್ನ ಲೆಕ್ಕದಲ್ಲಿ ಹಸಿದವರ ಹೊಟ್ಟೆ ತುಂಬಿಸಿ ಅಂತ ಇಡೀ ತಿಂಗಳ ಹಣ ಕೊಟ್ಟವರಿದ್ದಾರೆ. ಇನ್ನು ಕೆಲವರು ಹೋಟೆಲಿನಲ್ಲಿರೋ ಸಂಚಿಗೊಂದು ಬೋರ್ಡ್ ನೋಡಿ, ಅದ್ರ ಬಗ್ಗೆ ತಿಳಿದುಕೊಂಡು ಜೊತೆಯವರಿಗೂ ತಿಳಿಸಿ ಟೋಕನ್ ಪಡೆದು ಕೊಟ್ಟವರಿದ್ದಾರೆ. ಅನೇಕ ಹೋಟೆಲುಗಳಲ್ಲಿ ಊಟ ಪಡೆಯುವರಿಗಿಂತ ದಾನ ನೀಡುವವರ ಸಂಖ್ಯೆ ಹೆಚ್ಚಿದೆ.

ಇದನ್ನೂ ಓದಿ: ಆರ್​ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣ: ಎಲ್ಲಾ 12 ಮಂದಿಗೆ ಜೀವಾವಧಿ ಶಿಕ್ಷೆ

ಈಗ ಶಾಲಾ ಕಾಲೇಜುಗಳು ಮುಚ್ಚಿರೋದ್ರಿಂದ ವಿದ್ಯಾರ್ಥಿಗಳಿಲ್ಲ... ಆದ್ದರಿಂದ ಅವಶ್ಯಕವಿರುವ ವೃದ್ಧಾಶ್ರಮ, ಅನಾಥಾಶ್ರಮ ಅಥವಾ ಹಸಿದವರು ಇರುವ ಸ್ಥಳಗಳನ್ನು ತಿಳಿದು ಹೆಚ್ಚುವರಿ ಟೋಕನ್​ಗಳ ಲೆಕ್ಕದ ಆಹಾರವನ್ನು ತಾವೇ ಅಲ್ಲಿಗೆ ಹೋಗಿ ನೀಡೋ ಆಲೋಚನೆ ಮಾಡುತ್ತಿದ್ದಾರೆ ಕೆಲ ಹೋಟೆಲ್ ಮಾಲೀಕರು.

ಒಂದು ಒಳ್ಳೆ ಉದ್ದೇಶ ಇಟ್ಟುಕೊಂಡು ಶುರುಮಾಡಿದ ಕಾರ್ಯಕ್ರಮ ಇಂದು ನಿಧಾನಕ್ಕೆ ಯಶಸ್ವಿಯಾಗ್ತಿದೆ.‌ ಮತ್ತಷ್ಟು ಹೋಟೆಲುಗಳು ಇದಕ್ಕೆ ಕೈಜೋಡಿಸಲು ಆಸಕ್ತಿ ವಹಿಸುತ್ತಿವೆ. ದಿನಕ್ಕೆ ಕನಿಷ್ಠ 10 ಜನರಾದರೂ ದಾನ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಒಳ್ಳೆಯತನಕ್ಕೆ ಇದಕ್ಕಿಂತ ಮತ್ತೇನು ಉದಾಹರಣೆ ಬೇಕು ಹೇಳಿ?

ವರದಿ: ಸೌಮ್ಯಾ ಕಳಸ
Published by: Vijayasarthy SN
First published: October 30, 2020, 7:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading