ಹೆಣ್ಣೆಂದು ಧಿಕ್ಕರಿಸಿದ ಪಾಲಕರಿಗೆ ಸಾಧನೆಯೇ ಉತ್ತರ: ಪ್ರಥಮ ಪ್ರಯತ್ನದಲ್ಲಿ 3 ಚಿನ್ನದ ಪದಕ ಪಡೆದ ಸಾಧಿಕಾ!

ಪ್ರಧಾನಿ ಮೋದಿ ಅವರ 'ಬೇಟಿ ಬಚಾವೋ, ಬೇಟಿ ಪಡಾವೋ' ಮಾತು, ಪಾಲಕರ ನಿರಾಕರಣೆಯೇ ನನ್ನ ಸಾಧನೆಗೆ ಸ್ಫೂರ್ತಿ. ಇದೇ ಹಠದಿಂದ ಸದ್ಯ ಕರ್ನಾಟಕಕ್ಕೆ ಮೂರು ಚಿನ್ನದ ಪದಕ ತಂದಿರುವೆ. ಬರುವ ಏಷಿಯನ್-ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಬಂಗಾರ ಪದಕ ಗೆದ್ದು ಭಾರತದ ಕೀರ್ತಿ ಬೆಳಗುವೆ ಎನ್ನುತ್ತಾಳೆ ಸಾಧಿಕಾ. 

ತರಬೇತಿನಿರತ ಸಾಧಿಕಾ

ತರಬೇತಿನಿರತ ಸಾಧಿಕಾ

  • Share this:
ಧಾರವಾಡ; ಆಕೆಗಿನ್ನು ಮೈದಾನದಲ್ಲಿ ಆಡುವ ವಯಸ್ಸು. ಅದರಲ್ಲಿಯೂ ಆ ಬಾಲಕಿ ಮಾಡಿರುವ ಸಾಧನೆ ಕೇಳಿದರೆ ಎಲ್ಲರೂ ಸಹ ಅಚ್ಚರಿ ಪಡಬೇಕು. ಹೌದು 13 ವರ್ಷದ ಬಾಲಕಿ  'ಸ್ಟ್ರೆಂಥ್ ಲಿಫ್ಟಿಂಗ್' ನಲ್ಲಿ ಸದ್ಯ ರಾಷ್ಟ್ರಮಟ್ಟ ತಲುಪಿದ್ದಾಳೆ. ಧಾರವಾಡದ ದಾನೇಶ್ವರಿ ನಗರ ನಿವಾಸಿಯಾದ ಸಾಧಿಕಾ ಅತ್ತಾರ. 8ನೇ ತರಗತಿ ಓದುವ ಸಾಧಿಕಾ, 'ಸ್ಟ್ರೆಂಥ್ ಲಿಫ್ಟಿಂಗ್' ನಲ್ಲಿ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಹೊಸ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.

ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಶನ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್‌ನ ಪ್ರಥಮ ಪ್ರಯತ್ನದಲ್ಲೇ 3 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ನೋಡುಗರ ಕಣ್ಣಿಗೆ ಈ ಬಾಲಕಿ ಬಡಕಲು, ಒಣಗಿದ ಕಡ್ಡಿಯಂತೆ ಕಾಣುವ ಈ ಪೋರಿ, ಮಹಿಳಾ ವಿಭಾಗದ 52 ಕೆಜಿ ಸ್ಪರ್ಧೆಯಲ್ಲಿ ಜೂನಿಯರ್, ಸಬ್ ಜೂನಿಯರ್, ಹಿರಿಯ ವಿಭಾಗದಲ್ಲಿ ಸಲೀಸಾಗಿ ಭಾರ ಎತ್ತಿ ನೆರೆದ ಪ್ರೇಕ್ಷಕರನ್ನು ನಿಬ್ಬೆರಗು ಮಾಡಿದ್ದಾಳೆ.

ಸಾಧಿಕಾ ಮಗುವಾಗಿದ್ದಾಗ ಹೆಣ್ಣು ಮಗುವೆಂದು ತಂದೆ ಕುಟುಂಬಸ್ಥರು ಸಾಧಿಕಾ ಹತ್ಯೆಗೆ ಯತ್ನಿಸಿದ್ದರು. ಬಳಿಕ ಸಾಧಿಕಾ ತಾತ (ತಾಯಿ ತಂದೆ) ರೆಹಮಾನ ಸಾಬ್ ಕಳಸಾಪೂರ ಮುಸ್ಲಿಂ ಸಮುದಾಯದಲ್ಲಿ ದತ್ತು ಪದ್ಧತಿ ಇರದಿದ್ದರೂ, ಎಂಓಯುನಿಂದ  ಸಾಧಿಕಾಳನ್ನು ದತ್ತು ಪಡೆದಿದ್ದಾರೆ. ಹುಟ್ಟಿನಿಂದ ಇವರೆಗೂ ಪಾಲಕರ ಮುಖವನ್ನೇ ನೋಡದ ಸಾಧಿಕಾ ಅತ್ತಾರ, ಪೋಷಣೆಯ ಜವಾಬ್ದಾರಿ ಹೊತ್ತಿರುವ ಕಳಸಾಪೂರ ಕುಟುಂಬದ ಮುದ್ದಿನ ಕುಡಿಯಾಗಿ, ಉತ್ತಮ ಲಾಲನೆ-ಪಾಲನೆಯೊಂದಿಗೆ ಅಕ್ಕರೆಯಿಂದ ಬೆಳೆಯುತ್ತಿದ್ದಾಳೆ.

ಚಿನ್ನದ ಪದಕಗಳೊಂದಿಗೆ ಸಾಧಿಕಾ ಅತ್ತಾರ.


ಸಯ್ಯದ್ ಅಲಿ ಮಾಲೀಕತ್ವದ ಸ್ಫಾರ್ಕ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯುವ ಬಾಲಕಿಯು, ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಸೋದರ ಮಾವನಾದ ಮಹಮ್ಮದ್ ಗೌಸ್ ಕಳಸಾಪೂರ ತರಬೇತಿಯ ಗರಡಿಯಲ್ಲಿ ಪಳಗುತ್ತಿದ್ದಾಳೆ. ಮಾರ್ಚ್ ನಲ್ಲಿ ಪಶ್ಚಿಮ ಬಂಗಾಳದ ಕೋಚಬಿಹಾರದಲ್ಲಿ ನಡೆಯುವ ರಾಷ್ಟ ಮಟ್ಟದ 'ಸ್ಟ್ರೆಂಥ್ ಲಿಫ್ಟಿಂಗ್' ಸ್ಪರ್ಧೆಯಲ್ಲಿ ಸಾಧಿಕಾ ಕರ್ನಾಟಕ ಪ್ರತಿನಿಧಿಸಲಿದ್ದಾಳೆ.‌

ಇದನ್ನು ಓದಿ: ಸಾಂಪ್ರದಾಯಿಕ ಉಡುಗೆ ತೊಟ್ಟು ಅಮೆರಿಕದಲ್ಲಿ ಸ್ಕೀಯಿಂಗ್ ಮಾಡಿದ ಭಾರತೀಯ ಮೂಲದ ದಂಪತಿ; ವಿಡಿಯೋ ವೈರಲ್

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. 'ಹೆಣ್ಣು ಹುಣ್ಣಲ್ಲ, ಸಂಸಾರ ಕಣ್ಣು'. ಆದರೆ, ಸಮಾಜಕ್ಕೆ ಅಂಟಿದ ಹೆಣ್ಣು ಭ್ರೂಣ ಹತ್ಯೆ ಪಿಡುಗು ತೊಲಗಿಲ್ಲ. ಪ್ರಧಾನಿ ಮೋದಿ ಅವರ 'ಬೇಟಿ ಬಚಾವೋ, ಬೇಟಿ ಪಡಾವೋ' ಮಾತು, ಪಾಲಕರ ನಿರಾಕರಣೆಯೇ ನನ್ನ ಸಾಧನೆಗೆ ಸ್ಫೂರ್ತಿ. ಇದೇ ಹಠದಿಂದ ಸದ್ಯ ಕರ್ನಾಟಕಕ್ಕೆ ಮೂರು ಚಿನ್ನದ ಪದಕ ತಂದಿರುವೆ. ಬರುವ ಏಷಿಯನ್-ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಬಂಗಾರ ಪದಕ ಗೆದ್ದು ಭಾರತದ ಕೀರ್ತಿ ಬೆಳಗುವೆ ಎನ್ನುತ್ತಾಳೆ ಸಾಧಿಕಾ.

ಛಲ-ಕಠಿಣ ಪರಿಶ್ರಮಕ್ಕೆ ಸಾಧನೆ ಸುಲಭ. ಇದಕ್ಕೆ ಸಾಧಿಕಾ ಸಾಕ್ಷಿ. ಭಾರ ಎತ್ತುವ ಆಕೆ ಹುಮ್ಮಸ್ಸು ಕಂಡು, ತರಬೇತಿ ನೀಡುವ ಆಸೆ ನನಗೂ ಬಂತು. ವೆಟ್ ಲಿಫ್ಟಿಂಗ್, ಬೆಂಚ್ ಲಿಫ್ಟಿಂಗ್, ಸ್ಟ್ರೆಂಥ್ ಲಿಫ್ಟಿಂಗ್‌ನಲ್ಲಿ ಏಳೆಂಟು ತಿಂಗಳಷ್ಟೇ ತರಬೇತಿ ನೀಡಿದ್ದೇನೆ. ಆಕೆ ಮೊದಲ ಪ್ರಯತ್ನದಲ್ಲೇ ರಾಜ್ಯಮಟ್ಟದಲ್ಲಿ 3 ಚಿನ್ನದ ಪದಕ ಜಯಿಸಿದ್ದು ನಮಗೂ ಸಂತಸ ತಂದಿದೆ ಎನ್ನುತ್ತಾರೆ ತರಬೇತಿದಾರ ಮಹಮ್ಮದ್ ಗೌಸ್ ಕಳಸಾಪೂರ.

ವರದಿ: ಮಂಜುನಾಥ ಯಡಳ್ಳಿ
Published by:HR Ramesh
First published: