ಜೈಪುರ (ಆಗಸ್ಟ್ 10); ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಪಡಿಸಲು ಅಧಿವೇಶನ ಕರೆದಿದ್ದು, ಅಧಿವೇಶನಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದ್ದಂತೆ, ಪಕ್ಷದಿಂದ ಬಂಡಾಯವೆದ್ದು ಸರ್ಕಾರವನ್ನೇ ಬೀಳಿಸಲು ಮುಂದಾಗಿದ್ದ ಸಚಿನ್ ಪೈಲಟ್ ಇದೀಗ ದಿಢೀರ್ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿರುವುದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯ ಅಧಿವೇಶನದ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಅಧಿವೇಶನಕ್ಕೂ ಮುನ್ನ ತಾನು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬೇಕು ಎಂದು ಭೇಡಿಕೆ ಇಟ್ಟಿದ್ದರು. ಆಗಸ್ಟ್ 14ರಂದು ಇಬ್ಬರೂ ನಾಯಕರು ಭೇಟಿಯಾಗುವುದು ಖಚಿತ ಎನ್ನಲಾಗಿತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಇಂದು ಸಂಜೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಗ ಗಾಂಧಿ ಸಚಿನ್ ಪೈಲಟ್ರನ್ನು ಭೇಟಿಯಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರರಾದ ಅಹ್ಮದ್ ಪಟೇಲ್ ಮತ್ತು ಕೆ.ಸಿ ವೇಣುಗೋಪಾಲ್ ಖಚಿತಪಡಿಸಿದ್ದಾರೆ.
ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬುದು ತಿಳಿದುಬಂದಿಲ್ಲ, ಆದರೆ ಕಾಂಗ್ರೆಸ್ ಪಾಲಿಗೆ ಸಕರಾತ್ಮಕ ಅಂಶಗಳು ಹೊರಬೀಳಲಿವೆ ಎಂದು ಹಿರಿಯ ಮುಖಂಡರು ತಿಳಿಸಿದ್ದಾರೆ. ಇದೇ 14 ರಿಂದ ರಾಜಸ್ಥಾನ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಕಾಂಗ್ರೆಸ್ ತಾನು ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯೆಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ.
ಇನ್ನು ಬಿಜೆಪಿ ತನ್ನ ಶಾಸಕರನ್ನು ಗುಜರಾತ್ ರೆಸಾರ್ಟ್ಗೆ ಸ್ಥಳಾಂತರಿಸಿದೆ. ಒಟ್ಟಾರೆಯಾಗಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆ ಮಾತನಾಡಿರುವುದು ಕಾಂಗ್ರೆಸ್ಗೆ ಮತ್ತಷ್ಟು ಸಮಾಧಾನ ತಂದಿದೆ ಎಂದು ಹೇಳಲಾಗುತ್ತಿದೆ.
ಆದರೆ, ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹಲವು ಶಾಸಕರು ಪಕ್ಷಕ್ಕೆ ದ್ರೋಹವೆಸಗಿದ ಬಂಡಾಯವೆದ್ದವರನ್ನು ಮರಳಿ ಪಕ್ಷಕ್ಕೆ ಕರೆತರಬಾರದು ಎಂದು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ ಗೆಹ್ಲೋಟ್ ಮೇಲೆ ಕ್ರಮ ಆಗದ ಹೊರತು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಪೈಲಟ್ ಬಣ ಹೇಳಿಕೊಂಡಿದೆ.
ಅಸಲಿಗೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಬೇಕು, ಆನಂತರ ಬಿಜೆಪಿ ಸೇರ್ಪಡೆಯಾಗಿ ಅಧಿಕಾರ ಹಿಡಿಯಬೇಕು ಎಂಬುದು ಸಚಿನ್ ಪೈಲಟ್ ಮಹತ್ವಾಕಾಂಕ್ಷೆಯಾಗಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್ನ 18 ಬಂಡಾಯ ಶಾಸಕರ ಜೊತೆಗೆ ಪೈಲಟ್ ಬಿಜೆಪಿ ಜೊತೆಗೆ ಮಾತುಕತೆ ನಡೆಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ