ರಾಯಚೂರು (ಫೆ.25): ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವೆ ಯುದ್ಧ (War) ನಡೆಯುತ್ತಿದ್ದು, ಉಕ್ರೇನ್ನಲ್ಲಿ ಎಲ್ಲೆಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ. ಮನೆಗಳ ಸುತ್ತಮುತ್ತ ಕೇಳಿ ಬರ್ತಿರೋ ಸಿಡಿಮದ್ದುಗಳ ಸದ್ದು ಜನರನ್ನ ಭಯಭೀತರನ್ನಾಗಿ ಮಾಡಿದೆ. ಇನ್ನು ನಮ್ಮ ರಾಜ್ಯದ ವಿದ್ಯಾರ್ಥಿಗಳು (Students) ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದು, ಉಕ್ರೇನ್ನಿಂದ ಹೊರ ಬರಲಾರದೇ ಪರದಾಡುತ್ತಿದ್ದಾರೆ. ರಾಯಚೂರು ಜಿಲ್ಲೆಯ ಒಟ್ಟು 8 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತಕ್ಕೆ ವಾಪಾಸ್ಸಾಗಲು ಫ್ಲೈಟ್ ಬುಕ್ ಮಾಡಲಾಗಿದೆ. ಆದರೆ ಪ್ಲೈಟ್ಗಳು ರದ್ದಾಗಿದ್ದರಿಂದ ವಿದ್ಯಾರ್ಥಿಗಳು ಆತಂಕದಲ್ಲೇ ಬಂಕರ್ನಲ್ಲಿಯೇ (Bunker) ರಾತ್ರಿಯಿಡಿ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. ಒಟ್ಟು 30 ಮಂದಿ ಭಾರತೀಯ ವಿದ್ಯಾರ್ಥಿಗಳು ರಾತ್ರಿ ಬಂಕರ್ನಲ್ಲಿ ಕುಳಿತಿದ್ರು ಅನ್ನೋ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ.
ರಾಯಚೂರಿನ 8 ವಿದ್ಯಾರ್ಥಿಗಳ ಪರದಾಟ
ರಷ್ಯಾ ಉಕ್ರೇನ್ ಮೇಲೆ ಯುದ್ದ ಘೋಷಣೆ ಮಾಡಿದ ನಂತರ ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳ ಪಾಲಕರು ಆತಂಕಗೊಂಡಿದ್ದಾರೆ. ಆದರೆ ವಿದ್ಯಾರ್ಥಿಗಳೆಲ್ಲರೂ ಅಲ್ಲಿ ಸುರಕ್ಷಿತವಾಗಿದ್ದಾರೆ. ಫೆಬ್ರವರಿ 27ರಂದು ಭಾರತಕ್ಕೆ ವಾಪಾಸ್ಸಾಗಲು ಫ್ಲೈಟ್ ಬುಕ್ ಮಾಡಲಾಗಿದೆ. ಆದರೆ ಪ್ಲೈಟ್ಗಳು ರದ್ದಾಗಿದ್ದರಿಂದ ವಿದ್ಯಾರ್ಥಿಗಳು ಆತಂಕದಲ್ಲೇ ಬಂಕರ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಯಚೂರು ಜಿಲ್ಲೆಯ 8 ವಿದ್ಯಾರ್ಥಿಗಳು ಉಕ್ರೇನ್ಲ್ಲಿ ಸಿಲುಕಿಕೊಂಡಿದ್ದು, ಲಿಂಗಸಗೂರು ತಾಲೂಕಿನ ಹಟ್ಟಿ ಗ್ರಾಮದ ರುಬೀನ್ ಎಂಬ ವಿದ್ಯಾರ್ಥಿನಿ ಕೂಡ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಕ್ಕಾಕೊಂಡಿದ್ದಾರೆ.
ಇದನ್ನೂ ಓದಿ: Ukraine: ಭಾರತೀಯರ ಸ್ಥಳಾಂತರಕ್ಕೆ ಉಕ್ರೇನ್ ಗಡಿಗೆ ತಂಡ ಕಳುಹಿಸಿದ ಕೇಂದ್ರ; ಇಲ್ಲಿದೆ ಸಂಪರ್ಕದ ಮಾಹಿತಿ
ಪೋಷಕರಲ್ಲಿ ಮನೆ ಮಾಡಿದೆ ಆತಂಕ
ಹಟ್ಟಿ ಗ್ರಾಮದಲ್ಲಿ ಇರುವ ರುಬೀನ್ ಅವರ ಪಾಲಕರು ಆತಂಕಗೊಂಡಿದ್ದಾರೆ. ಮೆಡಿಕಲ್ ಮಾಡುತ್ತೇನೆ ಎಂದು ಹಠಮಾಡಿದ್ದಳು. ಅದಕ್ಕಾಗಿ ಉಕ್ರೇನ್ನ ಕಾರಕೀವ್ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಬ್ಯಾಸಕ್ಕಾಗಿ ಕಳುಹಿಸಿಕೊಟ್ಟಿದ್ದೇವೆ. ಮೂರು ತಿಂಗಳಿಂದಷ್ಟೆ ಕಾಲೇಜಿಗೆ ತೆರಳಿದ್ದು, ಯುದ್ದ ನಡೆಯುತ್ತಿರುವುದರಿಂದ ಮರಳಿ ಭಾರತಕ್ಕೆ ಬರಲು ಹೇಳಿದ್ದೇವೆ. 27ರಂದು ಫ್ಲೈಟ್ ಬುಕ್ ಮಾಡಲಾಗಿತ್ತು. ವಿಮಾನ ರದ್ದಾದ ಕಾರಣ ಅದೇ ಕಾಲೇಜಿನಲ್ಲಿ ಸುರಕ್ಷಿತವಾಗಿದ್ದಾಳೆ ಎಂದು ರುಬೀನ್ ತಂದೆ ಹುಸೇನ್ ಬಾಷಾ ಹೇಳಿದ್ದಾರೆ.
ಬಂಕರ್ನಲ್ಲಿ ಕಾಲಕಳೆದ ವಿದ್ಯಾರ್ಥಿಗಳು
ದೇವದುರ್ಗ ತಾಲೂಕಿನ ಜಾಗಟಕಲ್ ಗ್ರಾಮದ ಅಭೀಷೇಕ್, ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ಆರ್.ಸೂಮು, ಬಾದರ್ಲಿಯ ನಂದೀಶ, ಲಿಂಗಸಗೂರಿನ ಪ್ರಜ್ವಲ್, ರಾಯಚೂರು ತಾಲೂಕಿನ ದೇವಸ್ಗೂರು ಗ್ರಾಮದ ಚನ್ನವೀರ, ನಗರದ ಅಸೈರ್ ಹುಸೈನ್, ಮತ್ತು ಸಿಂಧನೂರಿನ ಶಂಶಾಂಕ ಎಂಬ ಎಂಬುವವರು ಉಕ್ರೇನ್ನಲ್ಲಿ ಇರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Russia-Ukraine War: ಪರದೇಶದಲ್ಲಿ ಪರದಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು! ಮರಳಿ ಬರುವುದು ಹೇಗೆೆ?
ಭಾರತೀಯ ಮೂಲದ 30 ವಿದ್ಯಾರ್ಥಿಗಳು ನಿನ್ನೆ ರಾತ್ರಿಯಿಂದ ಬಂಕರ್ನಲ್ಲಿ ಉಳಿದುಕೊಂಡಿದ್ದು ತಮ್ಮ ತಮ್ಮ ಪಾಲಕರಿಗೆ ಕರೆ ಮಾಡುತ್ತಿದ್ದಾರೆ. ಉಕ್ರೇನ್ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿರುವ ವಿದ್ಯಾರ್ಥಿಗಳ ಪಾಲಕರು ಆತಂಕದಲ್ಲಿದ್ದಾರೆ. ಆದಷ್ಟೂ ಬೇಗನೆ ನಮ್ಮ ಮಕ್ಕಳನ್ನು ಮರಳಿ ನಮ್ಮ ಭಾರತ ದೇಶಕ್ಕೆ ಕರೆಸಿಕೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಉಕ್ರೇನ್ನಲ್ಲಿ ವಿಜಯಪುರದ ವಿದ್ಯಾರ್ಥಿನಿ
ವಿಜಯಪುರ: ಎಂಬಿಬಿಎಸ್ ವ್ಯಾಸಂಗ ಮಾಡಲು ಉಕ್ರೇನ್ಗೆ ತೆರಳಿದ್ದ ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ಉಕ್ರೇನ್ನಲ್ಲಿ ಓದುತ್ತಿರುವ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಕಳೆದ ಒಂದೂವರೆ ವರ್ಷದ ಹಿಂದೆ ಉಕ್ರೇನ್ನ ಕಾರ್ಕೀವ್ ನಗರಕ್ಕೆ ತೆರಳಿದ್ದರು. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದವರಾದ ಇವರ ಪಾಲಕರು ವಿಜಯಪುರ ನಗರದಲ್ಲಿದ್ದಾರೆ. ಸುಚಿತ್ರಾ ತಂದೆ ಮಲ್ಲನಗೌಡ ಕವಡಿಮಟ್ಟಿ ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿದ್ದು, ತಾಯಿ ಕಮಲಾ ಕವಡಿಮಟ್ಟಿ ಗೃಹಿಣಿಯಾಗಿದ್ದಾರೆ. ಇಬ್ಬರು ಮಕ್ಕಳ ಪೈಕಿ ಸುಚಿತ್ರಾ ಹಿರಿಯ ಮಗಳು, ಕಿರಿಯ ಪುತ್ರ ಅಭಿಷೇಕ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ. ಮಗಳ ಬಗ್ಗೆ ಪೋಷಕರು ಆತಂಕಗೊಂಡಿದ್ದು, ಸದ್ಯ ಸುರಕ್ಷಿತವಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ