ತುಮಕೂರಿನಲ್ಲಿ ಗ್ರಾ.ಪಂ ಅಧ್ಯಕ್ಷರು. ಪಿಡಿಒಗಳ ಕಾರ್ಯಾಗಾರ ನಡೆಸಿದ ಸಚಿವ ಈಶ್ವರಪ್ಪ

ಗ್ರಾಮಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಸಿಕ್ಕಿರುವ 5 ವರ್ಷಗಳ ಅಧಿಕಾರಾವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ತುಮಕೂರು: ಜಿಲ್ಲೆಯಲ್ಲಿ ಮುಂದಿನ 6 ತಿಂಗಳೊಳಗಾಗಿ ಎಲ್ಲಾ 330 ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಎಸ್.ಐ.ಟಿ ಕಾಲೇಜಿನ ಬಿರ್ಲಾ ಆಡಿಟೋರಿಯಂನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮೈಸೂರಿನ ಅಬ್ದುಲ್ ನಜೀತ್ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಂಸ್ಥೆ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಗ್ರಾಮಪಂಚಾಯ್ತಿಗಳ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ಧಿಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೊಸದಾಗಿ ಆಯ್ಕೆಯಾಗಿರುವ ಗ್ರಾಮಪಂಚಾಯತಿ ಅಧ್ಯಕ್ಷರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ, ಕುಡಿಯುವ ನೀರಿನವ್ಯವಸ್ಥೆ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುವುದರೊಂದಿಗೆ ತ್ಯಾಜ್ಯ ನಿರ್ವಹಣೆ ಮಾಡಲು ಸೂಕ್ತ ಕಟ್ಟಡ ಗುರುತಿಸಬೇಕು ಎಂದು ನಿರ್ದೇಶನ ನೀಡಿದರು. ಗ್ರಾಮಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಸಿಕ್ಕಿರುವ 5 ವರ್ಷಗಳ ಅಧಿಕಾರಾವಕಾಶವನ್ನು ಬಳಸಿಕೊಳ್ಳಬೇಕು. ಉತ್ತಮ ಕೆಲಸವನ್ನು ಮಾಡುವುದರ ಮೂಲಕ ನಂಬಿಕೆ ಇಟ್ಟು ಗೆಲ್ಲಿಸಿರುವ ಜನರ ಋಣವನ್ನುತೀರಿಸಬೇಕು. ಪ್ರತಿ ದಿನ ಗ್ರಾಮಪಂಚಾಯತಿ ಕಚೇರಿಗೆ ಭೇಟಿನೀಡಿ, ಪಂಚಾಯತಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಜನರವಿಶ್ವಾಸವನ್ನು ತೆಗೆದುಕೊಂಡು ಪರಿಹರಿಸಬೇಕು ಎಂದು ಗ್ರಾ.ಪಂ. ಅಧ್ಯಕ್ಷರಿಗೆ ಅವರು ಕಿವಿಮಾತು ಹೇಳಿದರು.

ದೇಶದ ಯಾವುದೇ ಉದ್ಯೋಗರಹಿತ ಪ್ರಜೆ ಉಪವಾಸವಿರಬಾರದೆಂದು ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಬಡವರಿಗೆ ಉದ್ಯೋಗ ನೀಡುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು.ನರೇಗಾ ಯೋಜನೆಯಡಿ ಅಂಗನವಾಡಿ ದುರಸ್ತಿಯಲ್ಲದೆ ಶಾಲಾ ಕಟ್ಟಡ ದುರಸ್ತಿಗೂ ಅವಕಾಶ ಮಾಡಿಕೊಡಲಾಗುವುದು. ನರೇಗಾ ಯೋಜನೆಯಡಿ ಕೇಂದ್ರದಿಂದ 13 ಕೋಟಿ ಮಾನವ ದಿನಗಳನ್ನು ಸೃಜಿಸಲು ಗುರಿ ನೀಡಲಾಗಿತ್ತು. ಕಳೆದ ನವೆಂಬರಲ್ಲಿಯೇ ರಾಜ್ಯದಲ್ಲಿ ಮಾನವ ದಿನಗಳನ್ನು ಸೃಜಿಸುವಲ್ಲಿ ಗುರಿ ಮೀರಿ ಸಾಧನೆ ಮಾಡುವ ಮೂಲಕ ರಾಜ್ಯವು ಮೊದಲ ಸ್ಥಾನದಲ್ಲಿದೆ. ಗುರಿ ಮೀರಿದ ಸಾಧನೆಗಾಗಿ ಪ್ರಧಾನ ಮಂತ್ರಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ನರೇಗಾ ಯೋಜನೆಯಡಿ ಪ್ರತಿಯೊಬ್ಬರಿಗೂ ಕೆಲಸ ನಿರ್ವಹಿಸುವ ಅವಕಾಶವಿದ್ದು, ಉದ್ಯೋಗ ಚೀಟಿಯನ್ನುಪಡೆದುಕೊಳ್ಳಬಹುದು. ಕಲ್ಯಾಣಿ, ಗೋಕಟ್ಟೆ, ಕೊಳವೆ ಬಾವಿಗೆ ಮರುಪೂರಣ ಗುಂಡಿ, ಕೃಷಿ ಹೊಂಡ, ಕೆರೆಗಳ ಹೂಳೆತ್ತುವುದುಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕೆರೆ-ಕಟ್ಟೆ, ಕಲ್ಯಾಣಿಗಳು ಒತ್ತುವರಿಯಾಗದಂತೆ ಕ್ರಮವಹಿಸುವುದು ಪ್ರತೀ ಸದಸ್ಯನ ಹೊಣೆಗಾರಿಕೆಯಾಗಿದೆ ಎಂದರು.

ಇದನ್ನೂ ಓದಿ: ಲೇಡಿ ಪೊಲೀಸ್​ನಿಂದ ರೇಪ್ ಬೆದರಿಕೆ; ಜನತಾ ದರ್ಶನ ವೇಳೆ ಸಿಎಂ ಮುಂದೆ ಮಹಿಳೆ ಅಳಲು

ಪ್ರತಿ ಹಳ್ಳಿಗಳಲ್ಲೂ ಬಯಲು ಶೌಚಾಲಯ ಮುಕ್ತಗೊಳಿಸಲುವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಗ್ರಾಮಪಂಚಾಯ್ತಿಯ ಸದಸ್ಯರು, ಪಿಡಿಓಗಳು ಜನರಲ್ಲಿ ಅರಿವುಮೂಡಿಸಬೇಕು. ವಿಶೇಷ ಘಟಕ ಯೋಜನೆಯಡಿ ಎಸ್.ಸಿ., ಎಸ್.ಟಿ ಸಮುದಾಯಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲುನೀಡಲಾಗುತ್ತಿದ್ದ 15 ಸಾವಿರ ರೂ.ಗಳ ಸಹಾಯಧನವನ್ನು 20ಸಾವಿರ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಪಕ್ಷಭೇದ ಮರೆತು ತಮ್ಮ ಗ್ರಾಮದ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು.ಗ್ರಾಮಪಂಚಾಯತಿಗಳಲ್ಲಿ ಪ್ರತಿವರ್ಷ ಹೊಸ ಯೋಜನೆಗಳನ್ನು ರೂಪಿಸಿ ಜನಪರ ಕೆಲಸಗಳನ್ನುಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವರು ತಿಳಿಸಿದರು.

ಕ.ರಾ.ವಿ.ಯೋ.ಅ. ಸಮಿತಿಯ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಉಡುಪಿ ಜಿ.ಪಂ. ಯೋಜನಾಧಿಕಾರಿ ಶ್ರೀನಿವಾಸರಾವ್, ಪರಿಸರವಾದಿ ಶಿವಾನಂದ ಕಳವೆ, ಗ್ರಾಮಪಂಚಾಯತಿ ಆಯುಕ್ತಾಲಯದ ನಿರ್ದೇಶಕ ಯಾಲಕ್ಕಿಗೌಡಮಾತನಾಡಿದರು. ಕಾರ್ಯಾಗಾರಕ್ಕೆ ಗೈರುಹಾಜರಾಗಿದ್ದ ಮಧುಗಿರಿ ತಾಲ್ಲೂಕು ಚಂದ್ರಗಿರಿ ಗ್ರಾ.ಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತ್ತು ಮಾಡಲು ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ಅವರಿಗೆ ನಿರ್ದೇಶನ ನೀಡಿದರು.

ವರದಿ: ವಿಠಲ್ ಕುಮಾರ್
Published by:Vijayasarthy SN
First published: