HOME » NEWS » District » RR NAGAR JDS CANDIDATE V KRISHNAMURTHY CONFIDENT OF WINNING BYPOL SNVS

ನಾನು ಈ ಕ್ಷೇತ್ರದ ಮಗ, ಆರ್ ಆರ್ ನಗರದಲ್ಲಿ ಗೆಲುವು ನನ್ನದೇ: ವಿ. ಕೃಷ್ಣಮೂರ್ತಿ

ಜೆಡಿಎಸ್ ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ, ಬಿಜೆಪಿ-ಕಾಂಗ್ರೆಸ್ನವರು ನಮ್ಮ ಪಕ್ಷದಿಂದ ಎಷ್ಟೇ ಮಂದಿಯನ್ನು ಸೆಳೆದರೂ ಗೆಲುವು ಮಾತ್ರ ಜೆಡಿಎಸ್​ಗೆ ಎಂದು ಅಭ್ಯರ್ಥಿ ವಿ. ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

news18-kannada
Updated:October 21, 2020, 8:31 PM IST
ನಾನು ಈ ಕ್ಷೇತ್ರದ ಮಗ, ಆರ್ ಆರ್ ನಗರದಲ್ಲಿ ಗೆಲುವು ನನ್ನದೇ: ವಿ. ಕೃಷ್ಣಮೂರ್ತಿ
ಆರ್ ಆರ್ ನಗರ ಜೆಡಿಎಸ್ ಅಭ್ಯರ್ಥಿ ವಿ ಕೃಷ್ಣಮೂರ್ತಿ ಜೊತೆ ಹೆಚ್ ಡಿ ಕುಮಾರಸ್ವಾಮಿ
  • Share this:
ಬೆಂಗಳೂರು: ನಾನು ಈ ಕ್ಷೇತ್ರದ ಮಗ. ನಿಮ್ಮೆಲ್ಲರ ಕಷ್ಟ ಸುಖಗಳನ್ನು ನೋಡಿಕೊಂಡೇ ಬೆಳೆದವನು. ಜೆಡಿಎಸ್‌ ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ. ಈ ಚುನಾವಣೆಯಲ್ಲಿ ನಾವೇ ಗೆಲ್ಲುವುದು ಎಂದು ರಾಜರಾಜೇಶ್ವರಿ ನಗರ ಜೆಡಿಎಸ್‌ ಅಭ್ಯರ್ಥಿ ವಿ. ಕೃಷ್ಣಮೂರ್ತಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಆರ್‌ ಆರ್‌ ನಗರ ವ್ಯಾಪ್ತಿಯ ಸಜ್ಜೆಪಾಳ್ಯದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ, ನಾನು ಎಂದೆಂದಿಗೂ ನಿಮ್ಮ ಜೊತೆ ಇರುತ್ತೇನೆ. ಬಿಜೆಪಿ-ಕಾಂಗ್ರೆಸ್‌ನವರು ಎಷ್ಟೇ ಜನರನ್ನು ಜೆಡಿಎಸ್‌ನಿಂದ ಸೇರಿಸಿಕೊಂಡರೂ ನಮ್ಮ ಮೇಲೆ ಯಾವ ಪರಿಣಾಮ ಬೀರಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮುಂದುವರಿಸೋಣ ಎಂದು ಹುರಿದುಂಬಿಸಿದರು.

ಬೆಳಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದ ಕೃಷ್ಣಮೂರ್ತಿ, ಬಿಇಎಂಎಲ್‌ ಲೇಔಟ್‌ನ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದಿನವಿಡೀ ಪ್ರೆಸ್ ಲೇಔಟ್ ಪಾರ್ಕ್, ಬಿಇಎಂಎಲ್‌ ಲೇಔಟ್‌, ಲಗ್ಗೆರೆ, ಕೊಟ್ಟಿಗೆಪಾಳ್ಯ ಹಾಗೂ ಜ್ಞಾನಭಾರತಿ ವಾರ್ಡ್‌ಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಜೆಡಿಎಸ್‌ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಸೇರಿ ಅನೇಕ ಮುಖಂಡರು ಅಭ್ಯರ್ಥಿಯ ಜೊತೆ ಇದ್ದರು.

ಇದನ್ನೂ ಓದಿ: ಗಂಡ, ಅತ್ತೆ ಮತ್ತು ಮಾವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಗೃಹಿಣಿ ; ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ

ಆರ್‌ಆರ್‌ ನಗರ ಗೆಲ್ಲಲು 50 ತಂಡ, 10 ಶಾಸಕರ ಉಸ್ತುವಾರಿ:

ಮೂರು ಪಕ್ಷಗಳಿಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆರ್‌ಆರ್‌ ನಗರ ಗೆಲ್ಲಲು ಜೆಡಿಎಸ್‌ ಕೂಡ ರಣತಂತ್ರ ರೂಪಿಸಿದೆ. ಒಟ್ಟು 50 ತಂಡಗಳನ್ನು ರಚಿಸಿರುವ ಜೆಡಿಎಸ್‌ ಪ್ರತಿ ತಂಡಕ್ಕೆ 10 ರಿಂದ 15 ಬೂತ್‌ಗಳ ಉಸ್ತುವಾರಿ ನೀಡಿದೆ. ಜೊತೆಗೆ 10 ಶಾಸಕರಿಗೆ ವಾರ್ಡ್‌ವಾರು ಉಸ್ತುವಾರಿ ನೀಡಲಾಗಿದೆ ಎಂದು ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಹೇಳಿದರು.

ಕೊರೋನಾ ವೈರಸ್‌ ಕಾರಣದಿಂದ ಅಬ್ಬರದ ಪ್ರಚಾರಕ್ಕೆ ಮಣೆ ಹಾಕದೇ ಪ್ರತಿ ಮತದಾರರನ್ನು ತಲುಪುವ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಹೇಳಿದ ಅವರು, ಶಾಸಕರು ಹಾಗೂ ನಾಯಕರಿಂದ ವಾರ್ಡ್‌ವಾರು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಮತಯಾಚಿಸಲಾಗುವುದು. ಬೆಂಗಳೂರು ಹಾಗೂ ರಾಜ್ಯಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಕೊಡುಗೆಯನ್ನು ಜನರಿಗೆ ತಲುಪಿಸಲಾಗುವುದು ಎಂದರು.
Published by: Vijayasarthy SN
First published: October 21, 2020, 8:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories