Dasara2020: ಕಾಡಿನಿಂದ ನಾಡಿಗೆ ಬಂದ ದಸರಾ ಗಜಪಡೆ: ನಾಳೆ ಅಧಿಕೃತವಾಗಿ ಆನೆಗಳಿಗೆ ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ

ನಾಳೆಯಿಂದ 25 ದಿನಗಳ ಕಾಲ ಮೈಸೂರಿನಲ್ಲೆ ತಾಲೀಮು ನಡೆಸಲಿರುವ ಆನೆಗಳು ಅಕ್ಟೋಬರ್ 25ಕ್ಕೆ ಅರಮನೆ ಅಂಗಳದಲ್ಲೆ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ.

ಗಜಪಡೆ

ಗಜಪಡೆ

  • Share this:
ಮೈಸೂರು(ಅಕ್ಟೋಬರ್​.01): ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ದಸರಾದ ಮೊದಲ ಕಾರ್ಯಕ್ರಮವಾದ ಗಜಪಯಣ ಸಾಂಪ್ರದಾಯಿಕವಾಗಿ, ಸರಳವಾಗಿ ನೇರವೇರಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ನೇರವೇರಿಸಲಾಗಿದ್ದು, ಇಂದೇ ಮೈಸೂರಿನ ಅರಣ್ಯ ಭವನಕ್ಕೆ ಬಂದಿಳಿದ ಗಜಪಡೆ, ನಾಳೆ ಅರಮನೆ ಅಂಗಳ ಸೇರಲಿವೆ. ಜನಪ್ರತಿನಿಧಿಗಳೆ ಇಲ್ಲದ ಕಾರ್ಯಕ್ರಮದಲ್ಲಿನ ಅಧಿಕಾರಿಗಳಿಗೆ ಅತಿಥಿಗಳಾಗಿದ್ದು ವಿಶೇಷ. ನಾಡಹಬ್ಬ ದಸರಾ ಕಳೆ‌ಕಟ್ಟುವ ಮೊದಲ ಕಾರ್ಯಕ್ರಮ ಗಜಪಯಣ ಇಂದು ಸಂಭ್ರಮ ಹಾಗೂ ಸಂಪ್ರದಾಯಿಕವಾಗಿ ನೇರವೇರಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೇರವೇರಿದೆ. ಬೆಳಗ್ಗೆ 10.10ರಿಂದ 11 ಗಂಟೆಯೊಳಗಿನ ಶುಭ ಲಗ್ನದಲ್ಲಿ ಗಜಪಡೆಗೆ ಪುಷ್ಪಾರ್ಚನೆ ಮೂಲಕ ಪೂಜೆ ನೇರವೇರಿಸಿದ ಜಿಲ್ಲಾಡಳಿತ ಬಳಿಕ ಗಜಪಯಣಕ್ಕೆ ಚಾಲನೆ ನೀಡಿದರು.

ಸಿಂಗಾರಗೊಂಡ ಅಭಿಮನ್ಯು, ವಿಕ್ರಂ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಫಲತಾಂಬೂಲ‌ ನೀಡಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ ಆನೆ ಮಾವುತರಿಗೆ ಸನ್ಮಾನ ಮಾಡಿ ಆತ್ಮೀಯವಾಗಿ ಗೌರವಿಸಿದರು. ಬಳಿಕ ಅರಣ್ಯ ಇಲಾಖೆಯ ಟ್ರಕ್‌ಗಳ ಮೂಲಕ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ಬಂದಿಳಿದಿವೆ.

ಇನ್ನು ಇಂದು ಮೈಸೂರಿಗೆ ಗಜಪಡೆ ಬಂದರು ಸಹ ಆನೆಗಳಿಗೆ ನಾಳೆ ಅರಮನೆ ಪ್ರವೇಶಕ್ಕೆ ದಿನಾಂಕ ನಿಗಧಿ ಮಾಡಲಾಗಿದೆ. ಹಾಗಾಗಿ ಇಂದು ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲೇ ಇರಿಸಲು ಸಕಲ ವ್ಯವಸ್ಥೆ ಆಗಿದ್ದು, ಇಂದು ಅರಣ್ಯ ಭವನದಲ್ಲೇ ಬೀಡುಬಿಟ್ಟಿದೆ.

ಇದನ್ನೂ ಓದಿ : ಆರ್​ ಆರ್​​ ನಗರ, ಶಿರಾ ಉಪಚುನಾವಣೆ - ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಗೊಂದಲ ಇಲ್ಲ: ಡಿಸಿಎಂ ಅಶ್ವತ್ಥನಾರಾಯಣ

ನಾಳೆ ಬೆಳಗ್ಗೆ ಅರಣ್ಯ ಭವನದಲ್ಲು ವಿಶೇಷ ಪೂಜೆ ನೇರವೇರಿಸಿ, ಮಧ್ಯಾಹ್ನ 12.18 ನಿಮಿಷದ ಶುಭ ಲಗ್ನದಲ್ಲಿ ಅರಮನೆಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಸಿಗಲಿದೆ. ಇದಕ್ಕು ಸಹ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆಗೆ ಗಜಪಡೆಯನ್ನ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಿದ್ದಾರೆ.

ನಾಡಹಬ್ಬ ಕಳೆಕಟ್ಟುವ ದಸರಾದ ಮೊದಲ ಕಾರ್ಯಕ್ರಮ ಗಜಪಯಣ' ಸಂಭ್ರಮ ಹಾಗೂ ಸಾಂಪ್ರದಾಯಿಕವಾಗಿ ನೇರವೇರಿದೆ. ನಾಳೆ ಅರಮನೆಗು ರಾಜಗಾಂಭೀರ್ಯದ ಮೂಲಕ ಗಜಪಡೆ ಎಂಟ್ರಿ ಕೊಡಲಿದ್ದು, ಈ‌ ಮೂಲಕ ನಾಡಹಬ್ಬ ದಸರೆಯ ಸಂಭ್ರಮ ಮೇಳೈಸಲಿದೆ. ನಾಳೆಯಿಂದ 25 ದಿನಗಳ ಕಾಲ ಮೈಸೂರಿನಲ್ಲೆ ತಾಲೀಮು ನಡೆಸಲಿರುವ ಆನೆಗಳು ಅಕ್ಟೋಬರ್ 25ಕ್ಕೆ ಅರಮನೆ ಅಂಗಳದಲ್ಲೆ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ.
Published by:G Hareeshkumar
First published: