news18-kannada Updated:April 8, 2021, 2:00 PM IST
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪನವರ ಪಾತ್ರ ಮಹತ್ವದ್ದು- ಡಿಸಿ ಕವಿತಾ ಎಸ್ ಮನ್ನಿಕೇರಿ
ಚಿತ್ರದುರ್ಗ: ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಪಾತ್ರ ಮಹತ್ವದಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಚಿತ್ರದುರ್ಗ ಜಿಲ್ಲೆಯ ಕೆಲವೇ ಕೆಲವು ಮಹನಿಯರ ಹೆಸರುಗಳು ಮಾತ್ರ ನಮಗೆ ಗೊತ್ತಿದೆ. ಆದರೆ ಗ್ರಾಮೀಣ ಪ್ರದೇಶದ ಮೂಲೆ ಮೂಲೆಯಿಂದಲೂ ಅನೇಕ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಭಾರತವು ಸ್ವತಂತ್ರ ದೇಶವಾಗಲು ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ “ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಕೊಡುಗೆ” ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ಹಾಗೂ ದೇಶದ ಸಂಸ್ಕೃತಿ, ನಡೆ-ನುಡಿ, ಆಚಾರ ವಿಚಾರಗಳ ಹಾಗೂ ಕಟ್ಟಡ, ಸ್ಮಾರಕಗಳ ಬಗ್ಗೆ ಯುವಜನತೆಯಲ್ಲಿ ಅಭಿಮಾನ ಹಾಗೂ ಜ್ಞಾನ ಬೆಳೆಸಬೇಕೆಂಬ ಉದ್ದೇಶದಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವನ್ನು ಆಚರಿಸಲಾಗುತ್ತಿದೆ. ನಮ್ಮ ದೇಶ, ನಾಡು ಮತ್ತು ಸ್ಥಳೀಯ ಪ್ರದೇಶಗಳ ಬಗ್ಗೆ ಅಭಿಮಾನ ಬೆಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: ಮುಷ್ಕರ ನಿಲ್ಲಿಸದಿದ್ದರೆ ಹೊರ ರಾಜ್ಯಗಳಿಂದ ಬಸ್: ಸಾರಿಗೆ ಇಲಾಖೆ ಅಧಿಕಾರಿ ಅಂಜುಂ ಪರ್ವೇಜ್
ವಿದ್ಯಾರ್ಥಿ ಜೀವನದಲ್ಲಿ ಕಾಲಹರಣ ಮಾಡದೇ ಉತ್ತಮ ವಿಷಯಗಳ ಕಡೆ ಹೆಚ್ಚಿನ ಗಮನಕೊಡುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೂ ಅವರು ಕಿವಿಮಾತು ಹೇಳಿದರು.
ಇನ್ನು, “ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಕೊಡುಗೆ” ಎಂಬ ವಿಷಯ ಕುರಿತು ಹಿರಿಯ ಪತ್ರಕರ್ತರಾದ ಜಿ.ಎಸ್. ಉಜ್ಜಿನಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಭೀಮಪ್ಪ ನಾಯಕ, ಎಸ್. ವಾಸುದೇವರಾಂ, ಎಸ್. ನಿಜಲಿಂಗಪ್ಪ, ನಾಗರತ್ನಮ್ಮ ಹಿರೇಮಠ್, ರಾಮರೆಡ್ಡಿ, ಕೊಟ್ರೆ ನಂಜಪ್ಪ ಇವರೆಲ್ಲರೂ ಸೇರಿದಂತೆ ಇನ್ನೂ ಹಲವಾರು ಮಂದಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟಿತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರಾಗಿದ್ದಾರೆ, ಅಲ್ಲದೆ ಹೊಳಲ್ಕೆರೆ ತಾಲ್ಲೂಕಿನ ರಂಗಾಪುರದಲ್ಲಿ ಪ್ರಥಮವಾಗಿ ಸಾವಿರಾರು ರೈತರು ಸಭೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕಾಗಿ ರೂಪರೇಷೆ ರೂಪಿಸಿದ್ದರು. ನಂತರ 1939ರಲ್ಲಿ ತುರುವನೂರಿನಲ್ಲಿ ಕರ ನಿರಾಕರಣೆ ಚಳುವಳಿ ಹಾಗೂ ಈಚಲು ಮರದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಇದರ ನೇತೃತ್ವವನ್ನು ಮಾಜಿ ಸಿಎಂ ಎಸ್. ನಿಜಲಿಂಗಪ್ಪನವರು ವಹಿಸಿಕೊಂಡಿದ್ದರು. ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ಮುಂದಾದವರನ್ನು ಬ್ರಿಟಿಷರು ಬಂಧಿಸಿದರು ಎಂದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಎಸ್. ನಿಜಲಿಂಗಪ್ಪ ಅವರ ಪಾತ್ರ ಮಹತ್ವದಾಗಿದೆ. ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಕುವೆಂಪು ಅವರಿಂದ ಹಾಡುಗಳನ್ನು ಹಾಡಿಸುವ ಮೂಲಕ ಕನ್ನಡಿಗರನ್ನು ಒಂದುಗೂಡಿಸಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ಎಂದು ಉಜ್ಜಿನಪ್ಪ ಹೇಳಿದರು.
ವರದಿ: ವಿನಾಯಕ ತೊಡರನಾಳ್
Published by:
Vijayasarthy SN
First published:
April 8, 2021, 2:00 PM IST