ಚಾರ್ಮಾಡಿ ಘಾಟ್ ನಲ್ಲಿ ಮಳೆ ಇಲ್ಲದಿದ್ದರೂ ಉರುಳುತ್ತಿವೆ ಬೃಹತ್ ಬಂಡೆಗಳು: ಭವಿಷ್ಯದಲ್ಲಿ ಚಾರ್ಮಾಡಿ ಉಳಿಯೋದು ಅನುಮಾನ!

ಕಳೆದ ಬಾರಿಯ ಮಳೆಗೆ ಹಾನಿಯಾಗಿರುವ ರಸ್ತೆಯನ್ನ ಸರ್ಕಾರ ಕೂಡ ಶಾಶ್ವತವಾಗಿ ಸರಿಮಾಡುವ ಗೋಜಿಗೆ ಹೋಗಿಲ್ಲ. ಈ ಮಧ್ಯೆ ಮೇಲಿಂದ ಬಂಡೆಗಳು ಉರುಳುತಿರುವುದು ಜನಸಾಮಾನ್ಯರಲ್ಲಿ ಇನ್ನಿಲ್ಲದ ಆತಂಕವನ್ನ ಸೃಷ್ಟಿಸಿದೆ.

ಚಾರ್ಮಾಡಿ ಘಾಟ್

ಚಾರ್ಮಾಡಿ ಘಾಟ್

  • Share this:
ಚಿಕ್ಕಮಗಳೂರು(ಅಕ್ಟೋಬರ್​. 23): ಚಾರ್ಮಾಡಿ ಘಾಟ್ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಬರುವ ಈ ರಮಣೀಯ, ನಯನ ಮನೋಹರ ಘಾಟ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಈ ಮಾರ್ಗದಲ್ಲಿ ಸಂಚರಿಸುವುದು ಒಂದು ರೋಮಾಂಚನ ಅನುಭವ. ಹಸಿರ ಸಿರಿ, ಹಾವು ಬಳುಕಿನ ರಸ್ತೆ, ಆ ರಸ್ತೆಯೂ ಕಾಣದಂತೆ ಕವಿಯೋ ದಟ್ಟ ಮಂಜು. ಅಲ್ಲಲ್ಲಿ ಕಣ್ಮನ ಸೆಳೆಯುವ ಜಲಪಾತಗಳು. ಜಲಲ ಜಲಲ ಜಲಧಾರೆ ಅಂತಾ ಸಾಗುತ್ತಿದ್ರೆ ವಾಹ್ ಕಣ್ಣಿಗೆ ಹಬ್ಬ. ಆದರೆ, ಇಂತಹ ಸುಂದರ ಪಯಣದ ನಡುವೆ ಏನಾದರೂ ನಿಮ್ಮ ಗ್ರಹಚಾರ ಕೆಟ್ಟಿತ್ತು ಅಂತಾ ಇಟ್ಟುಕೊಳ್ಳಿ, ಆಗ ನಿಮ್ಮ ಜೀವಕ್ಕೆ ಕುತ್ತು ಬಂದರೂ ಬರಬಹುದು. ಕಾಫಿನಾಡು ಚಿಕ್ಕಮಗಳೂರು ಹಾಗೂ ಬಂದರು ನಗರಿ ದಕ್ಷಿಣ ಕನ್ನಡ ಜಿಲ್ಲೆಗಳ ಪ್ರಮುಖ ಕೊಂಡಿಯಾಗಿರುವ ಈ ರಸ್ತೆ ಇತ್ತೀಚೆಗೆ ಯಾಕೋ ಅಪಾಯ ಎನ್ನುವ ರೀತಿಯಲ್ಲಿ ಭಾಸವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಚಾರ್ಮಾಡಿ ಘಾಟ್ ಗೆ ಬಿದ್ದಿರುವ ಹೊಡೆತ ಅಷ್ಟಿಷ್ಟಲ್ಲ. 2019ರ ಮಹಾಮಳೆಗೆ ಇಡೀ ಚಾರ್ಮಾಡಿ ಘಾಟ್ ಅಲ್ಲೋಲ ಕಲ್ಲೋಲವಾಗಿತ್ತು.

30ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿತ ಉಂಟಾಗಿ, ಬರೋಬ್ಬರಿ 6 ತಿಂಗಳು ಚಾರ್ಮಾಡಿ ಘಾಟ್ ರಸ್ತೆ ಬಂದ್ ಆಗಿತ್ತು. ಇತಿಹಾಸದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ಈ ರಸ್ತೆ ಘಾಸಿಯಾಗಿತ್ತು. ಆ ಬಳಿಕ ಈ ಬಾರಿಯ ಮಳೆಗಾಲದಲ್ಲೂ ಅಲ್ಲಲ್ಲಿ ಗುಡ್ಡ ಕುಸಿತವಾಗಿ ಅನೇಕ ಸಲ ಚಾರ್ಮಾಡಿ ಘಾಟ್ ಬಂದ ಆಗಿತ್ತು.

ಇದೀಗ ಮಳೆ ಬಿಟ್ಟಿದೆ ಭಾರೀ ವಾಹನಗಳನ್ನ ಹೊರತುಪಡಿಸಿ ಬಸ್, ಕಾರು, ಜೀಪ್, ಟಿಟಿ, ಬೈಕ್ ಸೇರಿದಂತೆ ಲಘು ವಾಹನಗಳು ಸಂಚರಿಸುತ್ತಿವೆ. ಈ ಮಧ್ಯೆ ಮಳೆ ಇಲ್ಲದಿದ್ದರೂ ಅಲ್ಲಲ್ಲಿ ಭಾರೀ ಗಾತ್ರದ ಬಂಡೆಗಳು ರೋಡಿಗೆ ಅಪ್ಪಳಿಸುತ್ತಿವೆ. ಇತ್ತೀಚೆಗೆ ಕೂಡ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ಅಲೇಖಾನ್ ಗ್ರಾಮದ ಬಳಿ ಬೃಹತ್ ಬಂಡೆ ರಸ್ತೆಗೆ ಬಿದ್ದಿರುವುದು ಈ ಭಾಗದ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿದೆ.

ಬಂಡೆಯೊಂದು ಉರುಳಿ ಬೀಳುವಾಗ ವಾಹನಗಳು ಕೂಡ ಸಂಚರಿಸುತ್ತಿದ್ದವು. ಕಾರೊಂದು ಪಾಸಾದ ಕೂದಲೆಳೆ ಅಂತರದಲ್ಲಿ ಬಂಡೆ ರಸ್ತೆಗೆ ಉರುಳಿದೆ. ಬಡಪಾಯಿ, ಜೀವ ಉಳಿದಿದ್ದೇ ಹೆಚ್ಚು ಅಂತಾ ಕಾರಿನ ಸವಾರ ನಿಟ್ಟುಸಿರು ಬಿಟ್ಟಿದ್ದಾನೆ. ಬಂಡೆಗಳು ರಸ್ತೆಗೆ ಉರುಳುತಿರುವುದು ಪ್ರಯಾಣಿಕರಲ್ಲಿ ಜೀವಭಯ ಸೃಷ್ಟಿಸಿದೆ.

ಇದನ್ನೂ ಓದಿ : Mysur Dasara 2020: ಜಂಬೂ ಸವಾರಿಗೆ ತಾಲೀಮು ಈ ಬಾರಿ 300 ಮೀಟರ್ ಮಾತ್ರ ಮೆರವಣಿಗೆ

ಚಾರ್ಮಾಡಿ ಘಾಟ್​​ನ ಹಲವೆಡೆ ಈ ರೀತಿ ಗುಡ್ಡಕ್ಕೆ ಅಂಟಿಕೊಂಡಿರುವ ಬಂಡೆಗಳು ಸಡಿಲಗೊಂಡಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಹಾಗಾಗೀ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಜೀವವನ್ನ ಕೈಯಲ್ಲಿ ಹಿಡಿದುಕೊಂಡೇ ಪಯಣಿಸುವ ಅನಿವಾರ್ಯತೆ ಎದುರಾಗಿದ್ದು ಭವಿಷ್ಯದಲ್ಲಿ ಚಾರ್ಮಾಡಿ ರಸ್ತೆ ಉಳಿಯುತ್ತಾ ಎನ್ನುವ ಅನುಮಾನ ಸ್ಥಳೀಯದ್ದಾಗಿದೆ.

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ಮಳೆಯಾಗುತ್ತಿರುವ ಸಂದರ್ಭದಲ್ಲಿ ಇತ್ತೀಚೆಗೆ ಬಂಡೆಗಳು ಬೀಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಬಿಸಿಲಿನ ಸಂದರ್ಭದಲ್ಲೂ ಬಂಡೆಗಳು ಮೇಲಿಂದ ರಸ್ತೆಗೆ ಬೀಳುತ್ತೆ ಅಂದ್ರೆ ಎಂತವರು ಕೂಡ ಈ ರಸ್ತೆಯಲ್ಲಿ ಸಂಚರಿಸಲು ಒಂದು ಕ್ಷಣ ಯೋಚನೆ ಮಾಡುವಂತಾಗಿದೆ. ಕಳೆದ ಬಾರಿಯ ಮಳೆಗೆ ಹಾನಿಯಾಗಿರುವ ರಸ್ತೆಯನ್ನ ಸರ್ಕಾರ ಕೂಡ ಶಾಶ್ವತವಾಗಿ ಸರಿಮಾಡುವ ಗೋಜಿಗೆ ಹೋಗಿಲ್ಲ. ಈ ಮಧ್ಯೆ ಮೇಲಿಂದ ಬಂಡೆಗಳು ಉರುಳುತಿರುವುದು ಜನಸಾಮಾನ್ಯರಲ್ಲಿ ಇನ್ನಿಲ್ಲದ ಆತಂಕವನ್ನ ಸೃಷ್ಟಿಸಿದೆ.
Published by:G Hareeshkumar
First published: