ಗದಗ : ಗದಗ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು (Crime Cases In Gadaga District) ನಡೆಯೋದು ಅಪರೂಪ. ಆದರೆ ಇತ್ತೀಚೆಗೆ ಕಳ್ಳತನದ ಪ್ರಕರಣಗಳು (Robbery Cases) ಹೆಚ್ಚಾಗ್ತಿವೆ. ಅದು ಹಗಲಿನಲ್ಲಿಯೇ ರಾಜಾರೋಷವಾಗಿ ದರೋಡೆಗಳು ಕಂಡು ಬರ್ತಿವೆ. ಇಷ್ಟು ದಿನ ಇಲ್ಲದ ಪ್ರಕರಣಗಳು ಈಗ ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಅದು ಪ್ಲಾಸ್ಟಿಕ್ ವಸ್ತುಗಳ ಮಾರಾಟದ ಸೋಗಿನಲ್ಲಿ ಕಳ್ಳತನಕ್ಕೆ ಇಳಿದಿದ್ದಾರೆ. ಇದರಿಂದ ಗದಗ ಜಿಲ್ಲೆಯ ಜನ ಬೆಚ್ಚಬಿದ್ದಿದ್ದಾರೆ.
ಹೌದು, ಗದಗ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕಳ್ಳತನದ ಪ್ರಕರಣಗಳು ಹೆಚ್ಚಾಗಿವೆ. ಅದು ವ್ಯಾಪಾರಸ್ಥರ ಸೋಗಿನಲ್ಲಿ ಬರುವ ದರೋಡೆಕೋರರ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿ ನಗರದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟದ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸಂಗೀತ ಗಾಜಿವಾರ ಮತ್ತು ಶೃತಿ ಗಾಜಿವಾರ ಬಂಧಿತರು. ಆಗಸ್ಟ್ 11 ರಂದು ಕಾರವಾರ ಜಿಲ್ಲೆಯ ಕುಮುಟಾ ತಾಲೂಕಿನ ಹೇರವಟ್ಟಿ ನಿವಾಸಿಯಾಗಿದ್ದ ಸೌಮ್ಯ ಸಾನು ಎಂಬುವರ ವ್ಯಾನಿಟಿ ಬ್ಯಾಗಿನಲ್ಲಿದ್ದ ಸುಮಾರು 3.15 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದಿದ್ದ ಬೆಟಗೇರಿ ಬಡಾವಣೆ ಪೊಲೀಸರಿಗೆ ಹೊಸ ಬಸ್ ನಿಲ್ದಾಣದ ಬಳಿ ತಡ ರಾತ್ರಿ ಹೊತ್ತು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು. ಅನುಮಾನ ಬಂದು ಗಸ್ತಿನಲ್ಲಿದ್ದ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಕದ್ದಿರುವ ಎಲ್ಲಾ ವಸ್ತುಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರಿಂದ 40 ಗ್ರಾಂ ಚಿನ್ನದ ತಾಳಿ , 40 ಗ್ರಾಂ ಚಿನ್ನದ ಸರ, 6 ಗ್ರಾಂ ಕಿವಿಯೋಲೆ ಮತ್ತು 2 ಉಂಗುರ ಸೇರಿದಂತೆ ಒಟ್ಟು 3.15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಮಹಾರಾಷ್ಟ್ರ ಮೂಲದವರಾಗಿದ್ದು ನಗರದ ಕಳಸಾಪುರ ರಸ್ತೆಯಲ್ಲಿ ಜೋಪಡಿ ಹಾಕಿಕೊಂಡು ವಾಸ್ತವ್ಯ ಹೂಡಿದ್ದರು. ಇವರದು ದೊಡ್ಡ ಗ್ಯಾಂಗ್ ಇದೆ ಅಂತ ಹೇಳಲಾಗ್ತಿದೆ. ವ್ಯಾಪಾರಸ್ಥರ ಸೋಗಿನಲ್ಲಿ ಕಳ್ಳತನಕ್ಕೆ ಇಳಿದಿದ್ದಾರೆ. ಇನ್ನು ಉಳಿದವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದರೆ ಇನ್ನೂ ಕೆಲವು ಪ್ರಕರಣಗಳು ಹೊರಬರಬಹುದು.
ಇನ್ನು ಇದೇ ರೀತಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಳ್ಳತನದ ಪ್ರಕರಣ ಬಯಲಿಗೆ ಬಿದ್ದಿದೆ. ಜುಲೈ 20 ಮತ್ತು 25 ರಂದು ಪಟ್ಟಣದ ರಂಭಾಪುರಿ ನಗರ ಮತ್ತು ಕೆಂಪಗೆರೆ ಪ್ರದೇಶದಲ್ಲಿ ರಾತ್ರಿ ಕಳ್ಳತನ ನಡೆದಿತ್ತು. ರಂಬಾಪುರಿ ನಗರದ ನಿವಾಸಿ ಸುಲೆಮಾನ್ ಗತ್ತರಗಿಯವರ ಮನೆಯಲ್ಲಿ ಜುಲೈ 20 ರಂದು ರಾತ್ರಿ ಕಳ್ಳತನ ಮಾಡಿ ಬೀರಿನಲ್ಲಿದ್ದ ಸುಮಾರು 15 ತೊಲೆ ಬಂಗಾರ, 25 ಸಾವಿರ ನಗದು ದೋಚಿ ಕಳ್ಳರು ಪರಾರಿಯಾಗಿದ್ದರು. ಜುಲೈ 25 ರಂದು ಕೆಂಪಗೆರೆ ನಿವಾಸಿ ನಿಂಗಪ್ಲ ಗೌಡನಾಯ್ಕರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿ 8 ಗ್ರಾಂ ಚಿನ್ನಾಭರಣ ಮತ್ತು 25 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಪ್ರಕರಣದ ಜಾಡು ಹಿಡಿದ ಹೊರಟ ಪೊಲೀಸರು ಕಳ್ಳತನದ ಬಳಿಕ ತಲೆ ಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಅಶೋಕ ಶ್ರೀನಾಥ ರಾಜು ಕಾಂಚಿ ಬೋಸಲೆಯನ್ನ ಬಂಧಿಸಿ ಲಕ್ಷಾಂತರ ರೂ. ಚಿನ್ನಾಭರಣ ಮತ್ತು ನಗದು ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈತ ಪಟ್ಟಣದಲ್ಲಿ ಪ್ಲಾಸ್ಟಿಕ್ ಹೂವಿನ ಕುಂಡಲಿ ವ್ಯಾಪಾರ ಮಾಡುವ ನೆಪದಲ್ಲಿ ಪಟ್ಟಣದಲ್ಲಿ ಕಳ್ಳತನದ ಬಗ್ಗೆ ಪ್ಲಾನ್ ಮಾಡುತ್ತಿದ್ದ.
ಇದನ್ನು ಓದಿ: ಎಐಎಡಿಎಂಕೆ ಮಾಜಿ ಸಚಿವನಿಗೆ ಸೇರಿದ Rolls Royce, 34 ಲಕ್ಷ ಹಣ, 5 ಕೆಜಿ Gold, Diamonds ಜಪ್ತಿ!
ಇನ್ನು ಇದೇ ರೀತಿ ಜಿಲ್ಲೆಯಾದ್ಯಂತ ಹೊರ ರಾಜ್ಯಗಳಿಂದ ಬಂದು ತಂಡೋಪತಂಡವಾಗಿ ಬೀಡುಬಿಟ್ಟಿದ್ದಾರೆ. ವ್ಯಾಪಾರಸ್ಥರ ಸೋಗಿನಲ್ಲಿ ಮನೆಗೆ ಕಣ್ಣ ಹಾಕಲು ಹೊಂಚು ಹಾಕುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತರಾಗಬೇಕಾಗಿದೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ