ಮಂಡ್ಯ(ಸೆ.5): ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟು, ಪುಟ್ಟ ಮಕ್ಕಳ ತಾಯಿ ಗಂಭೀರಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗುಡ್ಡೇನಹಳ್ಳಿ ಕ್ರಾಸ್ ಬಳಿಯ ತುಮಕೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.
ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮದ ಜೆಡಿಎಸ್ ಮುಖಂಡ ಹಾಗೂ ಮಾಜಿ ತಾ.ಪಂ.ಸದಸ್ಯ ಆನಂದಕುಮಾರ್(62) ಹಾಗೂ ಮೊಮ್ಮಕ್ಕಳಾದ ಆರಾಧ್ಯ(10) ಹಾಗೂ ಗೌರವ್(5) ಮೃತ ದುರ್ದೈವಿಗಳಾಗಿದ್ದು, ಘಟನೆಯಲ್ಲಿ ಆನಂದ್ಕುಮಾರ್ ಸೊಸೆ ಮೋನಿಕಾ ಗಂಭೀರ ಸ್ವರೂಪರದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ತವರು ಮನೆಯಿಂದ ಸೊಸೆ, ಮೊಮ್ಮಕ್ಕಳನ್ನ ಕರೆತರುವಾಗ ದುರ್ಘಟನೆ
ತವರು ಮನೆಯಲ್ಲಿ ಇದ್ದ ಸೊಸೆ ಮೋನಿಕಾ ಹಾಗೂ ಇಬ್ಬರು ಮೊಮ್ಮಕಳನ್ನು ಮನೆಗೆ ಕರೆದುಕೊಂಡು ಹೊಣಕೆರೆ ಗ್ರಾಮಕ್ಕೆ ಬರುವಾಗ ಗುಡ್ಡೆನಹಳ್ಳಿ ಕ್ರಾಸ್ ಬಳಿ ನಿಂತಿದ್ದ ಲಾರಿಯನ್ನ ಗಮನಿಸದೆ ಲಾರಿಗೆ ಗುದ್ದಿದ್ದಾರೆ. ಹೀಗಾಗಿ ಡಿಕ್ಕಿಯ ರಭಸಕ್ಕೆ ಆನಂದ್ಕುಮಾರ್ ಚಾಲನೆ ಮಾಡುತ್ತಿದ್ದ ಸ್ಕೂಟರ್ ಲಾರಿ ಮುಂಭಾಗಕ್ಕೆ ಅಪ್ಪಳಿಸಿ ಸಿಲುಕಿಕೊಂಡಿದೆ. ಇದ್ರಿಂದ ಮೊಮ್ಮಕ್ಕಳಾದ ಹತ್ತು ವರ್ಷದ ಆರಾಧ್ಯ ಮತ್ತು ಐದು ವರ್ಷದ ಗೌರವ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಅತಿಯಾದ ರಕ್ತಸ್ರಾವ ಆಗಿದ್ದರಿಂದ ಆರಾಧ್ಯ ಸ್ಥಳದಲ್ಲೇ ಮೃತಪಟ್ಟರೆ, ಗೌರವ್ನನ್ನು ಆಸ್ಪತ್ರೆಗೆ ದಾಖಲು ಮಾಡಲು ತೆರಳುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ.
ಇನ್ನು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಆನಂದ್ಕುಮಾರ್ ಮತ್ತು ಸೊಸೆ ಮೋನಿಕಾಗೆ ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗೆಂದು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆನಂದ್ಕುಮಾರ್ ಮೃತಪಟ್ಟಿದ್ದಾರೆ.
ಇಬ್ಬರು ಮಕ್ಕಳನ್ನ ಕಳೆದುಕೊಂಡ ತಾಯಿ, ಸಾವು ಬದುಕಿನ ನಡುವೆ ಹೋರಾಟ....
ಇನ್ನು ಅಪಘಾತದಿಂದ ಗಂಭೀರವಾಗಿ ಗಾಯಗೊಂಡ ಸೊಸೆ ಮೋನಿಕಾ ಸಾವು ಬದುಕಿನ ನಡುವೆ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅತ್ತ ಘಟನೆಯಿಂದ ಇಡೀ ಗ್ರಾಮಕ್ಕೆ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಂದು ಹೊಣಕೆರೆ ಗ್ರಾಮದಲ್ಲಿ ಮೂವರ ಅಂತ್ಯಕ್ರಿಯೆ ನಡೆಯಲಿದೆ.
ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಪಾಲ್ಗೊಳ್ಳುವ ಸಾಧ್ಯತೆ
ಇನ್ನು ಮೃತ ಆನಂದ್ ಕುಮಾರ್ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಸಾಕಷ್ಟು ಕೆಲಸಗಳನ್ನ ಮಾಡಿದ್ದರು. ಹೀಗಾಗಿ ಇಂದು ನಡೆಯುವ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಭಾಗವಹಿಸುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.
ಇನ್ನು, ಈ ಅಪಘಾತ ನಾಗಮಂಗಲದ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ, ಜವರಾಯನ ಹಟ್ಟಹಾಸಕ್ಕೆ ಬಾಳಿ ಬದುಕಬೇಕಿದ್ದ ಎರಡು ಎಳೆ ಜೀವಗಳು ಅಂತ್ಯ ಕಂಡಿದ್ದು ಮಾತ್ರ ದುರಂತವೆ ಸರಿ.
(ವರದಿ - ಸುನೀಲ್ ಗೌಡ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ