HOME » NEWS » District » RIYAN MURDER CASE IN NELAMANGALA ACCUSED UNCLE DADAPEER ARRESTED ANLM SBVS

ರಿಯಾನ್ ಕೊಲೆ ಪ್ರಕರಣ: ಅಣ್ಣನ ಮೇಲಿನ ದ್ವೇಷಕ್ಕೆ ಆತನ ಮಗನ ಬಲಿಪಡೆದ ಆರೋಪಿ ಬಂಧನ

ತಾನು ಜೈಲಿಗೆ ಹೋಗುವುದನ್ನ ತಪ್ಪಿಸಲು ಪ್ರಯತ್ನಿಸಲಿಲ್ಲ ಎಂದು ಅಣ್ಣನ ಮೇಲೆ ಸಿಟ್ಟುಗೊಂಡಿದ್ದ ದಾದಾಪೀರ್ ತನ್ನ ಅಣ್ಣನ ಮಗನನ್ನು ಕೊಂದು ಹೋಗಿದ್ದ. ಬೆಂಗಳೂರಿನ ಬೀದಿಗಳಲ್ಲಿ ಅಲೆಯುತ್ತಿದ್ದ ಆರೋಪಿಯನ್ನು ಪೊಲೀಸರು ಹಿಡಿದಿದ್ದಾರೆ.

news18-kannada
Updated:October 29, 2020, 7:31 AM IST
ರಿಯಾನ್ ಕೊಲೆ ಪ್ರಕರಣ: ಅಣ್ಣನ ಮೇಲಿನ ದ್ವೇಷಕ್ಕೆ ಆತನ ಮಗನ ಬಲಿಪಡೆದ ಆರೋಪಿ ಬಂಧನ
ಮೃತ ಬಾಲಕ ರಿಯಾನ್ ಮತ್ತು ಕೊಲೆ ಆರೋಪಿ ದಾದಾಪೀರ್
  • Share this:
ನೆಲಮಂಗಲ: ಪ್ರೇಮದ ವಿಚಾರದಲ್ಲಿ ತಾನು ಜೈಲಿಗೆ ಹೋಗೋದನ್ನ ತಪ್ಪಿಸಲು ಅಣ್ಣ ಸಹಾಯ ಮಾಡಲಿಲ್ಲ ಎಂಬ ಸಿಟ್ಟನ್ನ ಮನಸಲ್ಲಿಟ್ಟುಕೊಂಡು ತನ್ನ ಅಣ್ಣನ ಮಗ ಮೊಹಮದ್ ರಿಯಾನ್ (6) ಕೊಲೆ ಮಾಡಿದ್ದ ಆರೋಪಿ ದಾದಾಪೀರ್​ನನ್ನು (22) ನೆಲಮಂಗಲ ನಗರ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ದಾದಾಪೀರ್ ಲೇಔಟ್ ನಲ್ಲಿ ಅಕ್ಟೋಬರ್ 22ರಂದು ನಡೆದ ಆ ಘಟನೆ ಇಡೀ ನೆಲಮಂಗಲವನ್ನೆ ಬೆಚ್ಚಿ ಬಿಳಿಸಿತ್ತು. ಕಳೆದು 20 ವರ್ಷಗಳಿಂದ ಜೀವನ ಕಟ್ಟಿಕೊಳ್ಳಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ದಾದಾಪೀರ್ ಲೇಔಟ್ ನಿವಾಸಿ ಚಮನ್ ಹಾಗೂ ಆಯಿಷಾ ವಾಸಿಸುತ್ತಿದ್ದರು. ತಮ್ಮ ಪುಟ್ಟ ಸಂಸಾರಕ್ಕೆ ಸಾಕ್ಷಿಯಂತೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಸಹ ಇತ್ತು. ಅಂದು ಅಕ್ಟೋಬರ್ 22, ತಾನಾಯ್ತು ತನ್ನ ಪಾಡಾಯ್ತು ಅಂತ ಮನೆಯ ಬಳಿ ಆಡಿಕೊಳ್ಳುತ್ತಿದ್ದ ಮೃತ ಬಾಲಕ ಮೊಹಮದ್ ರಿಯಾನ್. ಸುಮಾರು 15ದಿನಗಳ ಬಳಿಕೆ ಮನೆಗ ಬಂದ ಆರೋಪಿ ಚಿಕ್ಕಪ್ಪನ್ನನ್ನು ಚಾಚು ಚಾಚು ಎಂದು ಹಿಂದಿಂದೆ ಓಡಿದ್ದ. ಆದರೆ ಮೊಹಮದ್ ರಿಯಾನ್ ನನ್ನು ತನ್ನ ರೂಮಿನ ಬಳಿ ಕರೆದೊಯ್ದ ಆರೋಪಿ ದಾದಾಪೀರ್ ರಾಡ್‌ನಿಂದ ತಲೆಗೆ ಬಲವಾಗಿ ಹೊದೆದು ಕೊಲೆಗೈದು ಮನೆಯ ಮುಂದಿದ್ದ ನೀರಿನ ಟ್ಯಾಂಕ್‌ಗೆ ಮೃತ ದೇಹವನ್ನು ಎಸೆದು ಪರಾರಿಯಾಗಿದ್ದ.

ಇದನ್ನೂ ಓದಿ: ಹಾಸನ, ಅರಸೀಕೆರೆ ನಗರಸಭೆ ಅಧ್ಯಕ್ಷ ಚುನಾವಣೆ ನಡೆಯಲಿ; ಆದರೆ ಫಲಿತಾಂಶ ಪ್ರಕಟಿಸಬೇಡಿ: ಸುಪ್ರೀಂ

ನಲ್ಲಿ ನೀರು ಕೊಟ್ಟ ಸುಳಿವು: ಮಧ್ಯಾಹ್ನ ಮನೆಯಿಂದ ಹೊರಗೆ ಹೋದ ಮಗು ಇನ್ನೂ ಮನೆಗೆ ಬರಲಿಲ್ಲ ಎಂದು ಹುಡುಕಾಡುವ ವೇಳೆ ಆರೋಪಿ ದಾದಾಪೀರ್ ಮೊಬೈಲ್ ಇದ್ದಕ್ಕಿದ್ದ ಆಗೆ ಸ್ವಿಚ್ ಆಫ್ ಆಗಿರುವ ವಿಚಾರ ಗೊತ್ತಾಗುತ್ತೆ. ಈ ವೇಳೆ ಇದೇ ವಠಾರದ ನೆರೆಮನೆಯವರೊಬ್ಬರು ನಲ್ಲಿಯಲ್ಲಿ ನೀರು ಬಿಟ್ಟಾಗ, ನಲ್ಲಿಯಲ್ಲಿ ಬಂದ ರಕ್ತಸಿಕ್ತ ವಾಸನೆಯುಕ್ತ ನೀರಿನ ವಾಸನೆ ಮೃತ ದೇಹದ ಸುಳಿವು ನೀಡಿದೆ. ತಕ್ಷಣ ಮೇಲಿನ ನೀರೀನ ಟ್ಯಾಂಕರ್ ತೆಗೆದು ನೋಡಿದಾಗ ಮೊಯಮದ್ ರಿಯಾನ್ ಮೃತ ದೇಹ ದೊರೆತಿದ್ದು ರಿಯಾನ್ ಪೋಷಕರು ತಕ್ಷಣ ನೆಲಮಂಗಲ ನಗರ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುತ್ತಾರೆ.

ಆರೋಪಿ ಪತ್ತೆ: ಪೋಷಕರ ದೂರಿನನ್ವಯ ಪೋಲಿಸರು ಎಸ್ಪಿ ರವಿ ಡಿ. ಚನ್ನಣ್ಣವರ ಮಾರ್ಗದರ್ಶನದಲ್ಲಿ ಇನ್ಸ್​ಪೆಕ್ಟರ್ ಶಿವಣ್ಣ, ಪಿಎಸ್‌ಐ ಸುರೇಶ್, ಪೇದೆಗಳಾದ ನರೇಶ್, ಬಸವರಾಜು ಸೇರಿದಂತೆ ಸಿಬ್ಬಂದಿಯ ಪ್ರತ್ಯೇಕ ತಂಡ ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದ ವೇಳೆ ಆರೋಪಿ ಸುಳಿವು ಸಿಕ್ಕಿರುತ್ತದೆ. ಕೊಲೆ ಮಾಡಿದ ದಿನದಿಂದಲೂ ಆರೋಪಿ ಕೇವಲ 150 ರುಪಾಯಿಗೆ ತನ್ನ ಮೊಬೈಲ್ ಮಾರಿಕೊಂಡು, ಉಟ್ಟ ಬಟ್ಟೆಯಲ್ಲಿ ಬೆಂಗಳೂರು ನಗರದ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಯಶವಂತಪುರ ಸೇರಿದಂತೆ ವಿವಿಧೆಡೆ ಅಲೆದಾಡುತ್ತಿರುವ ವೇಳೆ ಖಚಿತ ಮಾಹಿತಿ ಮೇರೆಗೆ ನೆಲಮಂಗಲ ನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಕೊಲೆಗೆ ಕಾರಣ: ಆ ಪುಟ್ಟ ಕಂದನನ್ನ ಆತ ಕೊಲ್ಲಲು ಹಳೆ ದ್ವೇಷ ಕಾರಣ ಎನ್ನಲಾಗುತ್ತಿದೆ. ನೆಲಮಂಗಲದ ಸುತ್ತಮುತ್ತ ಚಮನ್ ಗಾರೆ ಕೆಲಸ ಮಾಡಿಸುತ್ತಾನೆ, ತನ್ನ ಕೆಲಸಕ್ಕೆ ಕೂಲಿಯಾಳುಗಳು ಬೇಕೆಂದು ತಮ್ಮ ಊರಿನವರನ್ನ ಕರೆಸಿಕೊಳ್ಖುತ್ತಾನೆ. ಅದೇ ತಂಡದಲ್ಲಿ ಆರೋಪಿ ದಾದಾಪೀರ್ ಸಹ ಬರುತ್ತಾನೆ. ದಾದಾಪೀರ್‌ಗೆ ತನ್ನದೇ ಊರಿನ ಅನ್ಯಕೋಮಿನ ಯುವತಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಈ ವಿಷಯ ಎಲ್ಲರಿಗೂ ತಿಳಿಯುವ ಮುಂಚೆಯೇ ಆರೋಪಿ ದಾದಾಪೀರ್ ಹಾಗೂ ಯುವತಿಯ ಕುಟುಂಬ ಹರಪ್ಪನಹಳ್ಳಿಗೆ ತೆರಳಿದ್ದು, ಅಲ್ಲಿ ಗಲಾಟೆ ಗದ್ದಲಗಳಾಗಿ ಯುವತಿಯ ಪೋಷಕರ ದಾದಾಪೀರ್ ವಿರುದ್ದ ಅತ್ಯಾಚಾರ ಪ್ರಕರಣದ ದೂರು ದಾಖಲಿಸಿ ಜೈಲಿಗಟ್ಟುತ್ತಾರೆ. ಈತ ಜೈಲಿಗೆ ಹೋಗುವುದನ್ನು ತಪ್ಪಿಸಲು ಅಣ್ಣ ಚಮನ್ ಪ್ರಯತ್ನಿಸಲಿಲ್ಲ ಎಂದು  ಹೇಳಲಾಗುತ್ತಿದೆ.

ಒಟ್ಟಾರೆ, ತನ್ನದಲ್ಲದ ತಪ್ಪಿಗೆ ಆ ಪುಟ್ಟ ಕಂದ ಇಹಲೋಕ ತ್ಯಜಿಸಿದೆ. ಕುಡಿದ ನಶೆಯಲ್ಲಿ ನಾನು ನನ್ನ ಅಣ್ಣನ ಮಗನನ್ನೇ ಕೊಂದುಬಿಟ್ಟೆ ಸಾರ್, ನನಗೆ ಜಿಗುಪ್ಸೆಯಾಗುತ್ತಿದೆ ಎಂದು ಆರೋಪಿ ಪೊಲೀಸರ ಬಳಿ ತನ್ನ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ
Published by: Vijayasarthy SN
First published: October 29, 2020, 7:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading