news18-kannada Updated:January 5, 2021, 9:55 PM IST
ಸಿದ್ದಲಿಂಗ ಮಹಾಸ್ವಾಮಿಗಳು
ತುಮಕೂರು: ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕೆ ಇರುವ ನಿಯಮಗಳನ್ನು ಸಡಿಲಗೊಳಿಸಬೇಕು. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಗೊಳಿಸದಿದ್ದರೆ ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.
ಸಿದ್ದಗಂಗಾ ಮಠದಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ತಮ್ಮನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಜತೆ ಜತೆಯಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಅಷ್ಟೇ ಮಹತ್ವಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ನಾಡಿನ ಶೈಕ್ಷಣಿಕ ಪ್ರಗತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆಯೂ ಅಪಾರವಾಗಿದೆ. ಮಠಮಾನ್ಯಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಅಷ್ಟೇ ಪ್ರಮುಖವಾಗಿ ಸೇವೆ ಸಲ್ಲಿಸುತ್ತಾ ಬಂದಿವೆ ಎಂದರು.
ಕೋವಿಡ್-19 ಬಂದ ಮೇಲೆ ಎಲ್ಲ ಕ್ಷೇತ್ರವೂ ಸ್ಥಗಿತಗೊಂಡಿವೆ. ಹಾಗೆಯೇ ಶಿಕ್ಷಣ ಕ್ಷೇತ್ರವೂ ಸ್ಥಗಿತಗೊಂಡಿದೆ. ಇಂತಹ ಸನ್ನಿವೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರಿಗೆ ಸಂಬಳ ಕೊಡಲು ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರ ಅನೇಕ ರೀತಿಯ ಪ್ಯಾಕೇಜ್ ಘೋಷಣೆ ಮಾಡಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಸಹ ತಮಗೂ ಪ್ಯಾಕೇಜ್ ಘೋಷಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸುತ್ತದೆ ಎಂದು ಭಾವಿಸುತ್ತೇನೆ ಎಂದರು.
ಪ್ರಸ್ತುತ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಕಾನೂನಾತ್ಮಕ ತೊಡಕುಗಳು ಉಂಟಾಗುತ್ತಿವೆ. ಶಿಕ್ಷಣ ಸಂಸ್ಥೆಗಳ ನವೀಕರಣ ಮಾಡಲು ಅನೇಕ ದಾಖಲಾತಿಗಳನ್ನು ಕೊಡಬೇಕಾಗಿದೆ. ಈ ದಾಖಲಾತಿಗಳನ್ನು ಪಡೆದುಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ. ಆದ್ದರಿಂದ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಹೇಳಿದರು.
ಇದನ್ನು ಓದಿ: ಬೆಂಗಳೂರಿನ ಮತ್ತೊಬ್ಬರಲ್ಲಿ ರೂಪಾಂತರಿ ಕೊರೋನಾ ಪತ್ತೆ: 11ಕ್ಕೆ ಏರಿದ ಬ್ರಿಟನ್ ಸೋಂಕಿತರ ಸಂಖ್ಯೆ
ದಾಖಲಾತಿ ಒದಗಿಸಲಾಗದಂತಹ ಅನೇಕ ನಿರ್ಬಂಧಗಳನ್ನು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂಬ ನೆಪವೊಡ್ಡಲಾಗುತ್ತಿದೆ. ಇದನ್ನು ಸರಳೀಕರಣಗೊಳಿಸಬೇಕು. ಈ ಸಂಬಂಧ ತಜ್ಞರ ಸಮಿತಿ ರಚಿಸಿ ಅನುಕೂಲ ಮಾಡಿಕೊಡಬೇಕು. ನಾವೆಲ್ಲಾ ಮಕ್ಕಳ ಸುರಕ್ಷತಾ ಕ್ರಮಕ್ಕೆ ಹೆಚ್ಚು ಒತ್ತು ಕೊಡೋಣ. ಈಗಾಗಲೇ ಸಂಸ್ಥೆಗಳವರು ಸಾಲ ಸೋಲ ಮಾಡಿದ್ದಾರೆ. ಬ್ಯಾಂಕ್ಗಳು ಇಎಂಐ ಕಟ್ಟಲು ಒತ್ತಡ ಹಾಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಇಎಂಐ ಕಟ್ಟಲು ಕಾಲಾವಕಾಶ ಕೊಡಿಸಬೇಕು ಎಂದು ಆಗ್ರಹಿಸಿದರು. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ಕೊರೋನಾ ಇನ್ನು ಮುಗಿದಿಲ್ಲ. ರಾಜ್ಯದ ಜನತೆ ಜಾಗೃತರಾಗಬೇಕು. ಕೊರೋನಾ ಬಹಳ ಕೆಟ್ಟ ಕಾಯಿಲೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಗುಂಪು ಗುಂಪು ಸೇರದೆ ಸಾಮಾಜಿಕ ಅಂತರ ಕಾಯ್ದುಕೊಂಡು ಓಡಾಡಬೇಕು. ನಮ್ಮ ಆರೋಗ್ಯಕ್ಕಾಗಿ, ನಮ್ಮ ಹಿತಕ್ಕಾಗಿ ಮುಂಜಾಗ್ರತೆಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದ ಅವರು ಹೇಳಿದರು. ಸಿದ್ದಗಂಗಾ ಮಠಕ್ಕೆ ದಾಸೋಹವೇ ಜೀವಾಳ. ಹಾಗಾಗಿ ಕೋವಿಡ್ ಸಂದರ್ಭದಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದಾಸೋಹ ನಡೆಸಿಕೊಂಡು ಬಂದಿದ್ದೇವೆ ಎಂದರು.
Published by:
HR Ramesh
First published:
January 5, 2021, 9:55 PM IST