ಚಿಕ್ಕಮಗಳೂರು : ಕೊರೋನಾ ಸೋಂಕು ಮಾನವೀಯತೆಯನ್ನೇ ಮಣ್ಣಾಗಿಸುತ್ತಿದೆ. ಕಾಫಿನಾಡಿನಲ್ಲಿ ನಡೆದಿರುವ ಘಟನೆ ಎಂಥವರ ಕರಳು ಚುರುಕ್ ಎನ್ನುವಂತೆ ಮಾಡುತ್ತಿದೆ. ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಸೋಂಕು ತಗುಲಿದೆ. ನನ್ನ ಕಣ್ಣೆದುರೇ ಅವರಿಗೇನಾದರೂ ಆದರೆ ಸಹಿಸಲು ಆಗುವುದಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ನಿವೃತ್ತ ಉಪ ತಹಶೀಲ್ದಾರ್ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. 72 ವರ್ಷದ ಸೋಮಾ ನಾಯಕ್ ಎಂಬುವರು ತರೀಕೆರೆ ತಾಲೂಕಿನ ಬೇಲೆನಹಳ್ಳಿ ತಾಂಡ್ಯಾ ಸಮೀಪ ತಮ್ಮ ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಕುಟುಂಬದವರು ಸೋಂಕಿನಿಂದ ನರಳುವುದನ್ನು ನೋಡುವುದಕ್ಕಿಂತ ಸಾಯುವುದೇ ಲೇಸು ಎಂದು ಬರೆದಿಟ್ಟು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.
2 ಪುಟಗಳ ಆತ್ಮಹತ್ಯೆ ಪತ್ರ ಬರೆದಿರುವ ಸೋಮಾ ನಾಯಕ್ ಅವರು ಕುಟುಂಬದವರಿಗೆ ಅಂತ್ಯಸಂಸ್ಕಾರ ಮಾಡಲು ಕಷ್ಟವಾಗಬಾರದೆಂದು ಕಾಫಿತೋಟದ ಸಮೀಪವೇ ಸಾವನ್ನಪ್ಪುತ್ತಿರುವುದಾಗಿ ತಿಳಿಸಿದ್ದಾರೆ. ನನ್ನಿಂದಲೇ ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಕೊರೋನಾ ಬಂತು. ನನಗೆ ವಯಸ್ಸಾಗಿದ್ದು, ಬದುಕುವ ಭರವಸೆ ಕಡಿಮೆ ಇದೆ. ಆದರೆ ಮಕ್ಕಳು, ಮೊಮ್ಮಕ್ಕಳಿಗೆ ನನ್ನ ಕಣ್ಣೆದುರೇ ಏನಾದರೂ ಆದರೆ ಅದನ್ನ ನನ್ನಿಂದ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಬರೆದಿಟ್ಟು ತೋಟಕೋವಿಯಿಂದ ಶೂಟ್ ಮಾಡಿಕೊಂಡಿದ್ದಾರೆ.
ಮೃತ ಸೋಮಾ ನಾಯಕ್ ಅವರಿಗೆ ಮೇ 7ರಂದು ಸೋಂಕು ಇರುವುದು ದೃಢಪಟ್ಟಿತ್ತು. ಅಂದಿನಿಂದಲೂ ಅವರು ಖಿನ್ನತೆಗೆ ಒಳಗಾಗಿದ್ದರು. ಕುಟುಂಬಸ್ಥರ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದ್ದರು. ಇನ್ನು ವಯಸ್ಸಾದ ನಾನು ಕೊರೋನಾದಿಂದ ಸಾಯುವುದು ಖಚಿತ ಎಂದು ನಂಬಿಬಿಟ್ಟಿದ್ದರು. ನರಳಿ ನರಳಿ ಸಾಯುವುದಕ್ಕಿಂತ ಒಮ್ಮೆಯೇ ಆತ್ಮಹತ್ಯೆಗೆ ಶರಣಾಗುವುದು ಉತ್ತಮ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮಾ ನಾಯಕ್ ಅವರ ಸಾವಿನ ಸುದ್ದಿ ತಿಳಿಯುತ್ತಲೇ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ಮೊದಲ ದಿನವೇ ತಗ್ಗಿದ ಸೋಂಕು, ಆದರೆ ಸಾವಿನ ಸಂಖ್ಯೆ 600ರ ಸಮೀಪ!
ಬೆಳ್ಳಂಬೆಳಗ್ಗೆ ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿರೋ ವಿಚಾರ ತಿಳಿಯುತ್ತಲೇ ಬೇಲೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನ ದಿಗ್ಬ್ರಾಂತರಾಗಿದ್ದಾರೆ. ಇನ್ನು ನಿನ್ನೆ ತರೀಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ಸುಂದರಮ್ಮ ಅನ್ನೋ ಮಹಿಳೆ ಕೊರೊನಾ ಸೋಂಕಿನಿಂದ ಮನೆಯ ಹಿತ್ತಲಲ್ಲೇ ಸಾವನ್ನಪ್ಪಿದ್ದರು. ಸುಮಾರು 5 ಗಂಟೆಗಳ ಕಾಲ ಮೃತದೇಹ ಅನಾಥವಾಗಿ ಬಿದ್ದಿದ್ರೂ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿರಲಿಲ್ಲ. ಈ ಸಾವಿಗೂ 2 ದಿನ ಮುನ್ನ ನಂದಿಹೊಸಳ್ಳಿ ಗ್ರಾಮದಲ್ಲಿ ಇಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಇಷ್ಟೆಲ್ಲಾ ಸಾವು ಸಂಭವಿಸುತ್ತಿದ್ದರು ಆರೋಗ್ಯ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಳ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸೋಮವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 362 ಪಾಸಿಟಿವ್ ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯ ಒಟ್ಟು ಕೊರೋನಾ ಕೇಸ್ಗಳ ಸಂಖ್ಯೆ 23,070ಕ್ಕೆ ಏರಿಕೆಯಾಗಿದೆ. ಜೊತೆಗೆ ಒಂದೇ ದಿನ ಜಿಲ್ಲೆಯಲ್ಲಿ ಸೋಂಕಿಗೆ ಐವರು ಬಲಿಯಾಗಿದ್ದು. ಈವರೆಗೆ 180 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಾಫಿನಾಡಿನಲ್ಲಿ ಸೋಮವಾರ 499 ಮಂದಿ ಗುಣಮುಖರಾಗಿದ್ದು, 4486 ಸಕ್ರಿಯ ಪ್ರಕರಣಗಳು ಇವೆ. ಸೋಮಾ ನಾಯಕರಂತೆ ಕೊರೋನಾ ಪಾಸಿಟಿವ್ ಬಂದೊಡನೆ ಖಿನ್ನತೆಗೆ ಒಳಗಾಗಿ ಕೆಟ್ಟ ನಿರ್ಧಾರ ಮಾಡುವುದಕ್ಕಿಂತ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗುವಂತೆ ಗಮನ ಹರಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ