ಮಂಗಳೂರಿನಲ್ಲಿ ಹೊಸದಾಗಿ ಕಮರ್ಷಿಯಲ್ ಕೋಸ್ಟಲ್ ಬರ್ತ್ ಅನ್ನು ನಿರ್ಮಿಸ ಲಾಗುತ್ತಿದೆ. ಈ ಕಮರ್ಷಿಯಲ್ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ಈಗ ಅದೊಂದು ಪ್ರದೇಶದ ಜನರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ರೆ ಜಿಲ್ಲಾಡಳಿತ ಪೊಲೀಸರ ಬಿಗಿ ಬಂದುಬಸ್ತ್ ನಲ್ಲಿ ಇಲ್ಲಿ ಕಾಮಗಾರಿ ಆರಂಭಿಸಲು ಮುಂದಾಗಿದೆ. ಮಂಗಳೂರಿನ ಕಸಬ ಬೆಂಗ್ರೆಯಲ್ಲಿ ಬಂದರು ಮಾದರಿಯಲ್ಲಿ ಒಂದು ಕಮರ್ಷಿಯಲ್ ಕೋಸ್ಟಲ್ ಬರ್ತ್ ಅನ್ನು ನಿರ್ಮಿಸಲು ಕಳೆದ ವಾರ ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್ ಮತ್ತು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಶಂಕುಸ್ಥಾಪನೆ ಮಾಡಿದ್ದರು. 40 ರಿಂದ 50 ಕೋಟಿ ವೆಚ್ಚದ ಈ ಯೋಜನೆಯಿಂದ ನದಿ ನೀರಿನ ಮಟ್ಟ ಏರುತ್ತದೆ. ಇದ್ರಿಂದ ಸ್ಥಳೀಯ ಮೀನುಗಾರರಿಗೆ ತೊಂದರೆಯಾಗುವುದಲ್ಲದೇ, ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಅಂತಾ ಜನರು ಆಕ್ರೋಶಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕಸಬಾ ಬೆಂಗ್ರೆಯನ್ನು ಬಂದ್ ಮಾಡಿ ಕೆಲಸ ನಡೆಯುತ್ತಿರುವ ಕಡೆ ಜನರು ಜಮಾಯಿಸಿದ್ದಾರೆ.
ಪೊಲೀಸ್ ಭದ್ರತೆ ಯಲ್ಲಿ ಇಂದು ಕೆಲಸ ಆರಂಭಿಸಲಾಗಿದೆ. ಇದ್ರಿಂದ ಕಸಬಾ ಬೆಂಗ್ರೆ ಜನರೆಲ್ಲಾ ಒಂದೆಡೆ ಸೇರಿ ಪ್ರತಿಭಟನೆ ಮಾಡಿದ್ರು. ಅನಿರ್ಧಿಷ್ಟವದಿವರೆಗೂ ಬಂದ್ ಮಾಡುವ ಎಚ್ಚರಿಕೆ ನೀಡಿದ್ರು. ಇಲ್ಲಿ ಜನರನ್ನು ಒಕ್ಕಲೆಬ್ಬಿಸುವ ಕೆಲಸ ಜಿಲ್ಲಾಡಳಿತದಿಂದ ಆಗುತ್ತಿದೆ. ಸಂಸದ, ಶಾಸಕ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ರು ಕೂಡ ಕೆಲಸ ಮಾಡುತ್ತಿದ್ದಾರೆ.
ನಾವು ಕಾನೂನು ಕೈಗೆತ್ತಿಕೊಳ್ಳಬಾರದು ಅಂದ್ರೆ, ಈ ಯೋಜನೆ ಕೈಬಿಡಿ ಅಂತಾ ಎಚ್ಚಿರಿಸಿದ್ರು. ಇನ್ನು ಈ ವಿರೋಧ ಚಳುವಳಿಗೆ ಕಾರ್ಮಿಕ ಸಂಘಟನೆಗಳು ಕೂಡ ಸಾಥ್ ನೀಡಿವೆ. ಇನ್ನು ಇಲ್ಲಿ ಪ್ರತಿಭಟನೆ ಕಾವು ನಿಧಾನವಾಗಿ ಹೆಚ್ಚಾಗುತ್ತಿದೆ. ಇದೆಲ್ಲ ಗೊಂದಲಗಳನ್ನು ಪರಿಹರಿಸುವ ಜವಾಬ್ದಾರಿ ಜಿಲ್ಲಾಡಳಿತ ಮೇಲಿದೆ. ಇನ್ನು ಇಲ್ಲಿನ ಜನರ ಜೀವನದ ಬಗ್ಗೆ ಕೂಡ ಗಮನಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ.
ಏನಿದು ಕೋಸ್ಟಲ್ ಬರ್ತ್ ಯೋಜನೆ?;
ಸಾಗರಮಾಲ ಯೋಜನೆಯಡಿ ಕೇಂದ್ರ ಸರಕಾರದ 25 ಕೋಟಿ ರೂ. ಮತ್ತು ರಾಜ್ಯ ಸರಕಾರದ 40 ಕೋಟಿ ರೂ. ಸೇರಿ ಒಟ್ಟು 65 ಕೋಟಿ ರೂ. ವೆಚ್ಚದಲ್ಲಿ ಕೋಸ್ಟಲ್ ಬರ್ತ್ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಸಂಪೂರ್ಣ ವಾಣಿಜ್ಯ ದಕ್ಕೆಯಾಗಲಿದ್ದು, ಮೀನುಗಾರಿಕೆಗೆ ಯಾವುದೇ ಸಂಬಂಧ ಇಲ್ಲ.ಪ್ರಸ್ತಾವಿತ ದಕ್ಕೆ 350 ಮೀ. ಉದ್ದ ಮತ್ತು 7 ಮೀ. ಆಳ ಇರಲಿದೆ. ಈಗ ದಕ್ಕೆಯಲ್ಲಿ ಫಲ್ಗುಣಿ ನದಿ 4 ಮೀ. ಆಳವಿದ್ದರೆ, 7 ಮೀ. ಆಳ ಮಾಡುವುದರಿಂದ ಬೃಹತ್ ನೌಕೆಗಳು ಬರಲಿವೆ.
ಇದನ್ನೂ ಓದಿ: ಚುನಾವಣಾ ಆಯೋಗ ಅನುಮತಿ ನೀಡಿದರೆ ಸಂಬಳ ಹೆಚ್ಚಿಸುತ್ತೇವೆ, ಮುಷ್ಕರ ಮಾಡಬೇಡಿ; ಸಾರಿಗೆ ನೌಕರರಿಗೆ ಸವದಿ ಮನವಿ
ಈಗ 500 ಟನ್ ಶಿಪ್ ಬರುತ್ತಿದ್ದರೆ, ಮುಂದೆ ಒಂದು ಸಾವಿರ ಟನ್ ಸಾಮರ್ಥ್ಯದ 100-150 ಮೀ. ಉದ್ದದ ಶಿಪ್ ತರಬಹುದು. ಮಂಗಳೂರು ಹಳೆ ಬಂದರ್ ದಕ್ಕೆ 4 ಮೀ. ಮತ್ತು ಎನ್ಎಂಪಿಟಿಯಲ್ಲಿ 12 ಮೀ. ಆಳ ಇದೆ. ಹಳೆ ಬಂದರಿನಿಂದ ಸಣ್ಣ ಪ್ರಮಾಣದಲ್ಲಿ ಬಹುತೇಕ ಲಕ್ಷದ್ವೀಪಕ್ಕೆ ಮಾತ್ರ ಸರಕು ಸಾಗಾಟ ನಡೆಯುತ್ತದೆ. ಹೊಸ ದಕ್ಕೆ ನಿರ್ಮಾಣವಾದರೆ, ದೊಡ್ಡ ಪ್ರಮಾಣದಲ್ಲಿ ಲಕ್ಷದ್ವೀಪ, ಗುಜರಾತ್, ಮಹಾರಾಷ್ಟ್ರ ಸಹಿತ ಇತರ ರಾಜ್ಯಗಳಿಗೂ ಆಮದು-ರಫ್ತು ಮಾಡಬಹುದು.
ಒಂದು ಬಾರಿಗೆ 5-10 ಸಾವಿರ ಟನ್ ಸರಕು ಕಳುಹಿಸಬಹುದು. ಬೆಂಗರೆ ಬದಿಯಿಂದ ಅಳಿವೆ ಬಾಗಿಲು ತನಕ 7 ಮೀ. ಆಳ ಮಾಡಿ ಹೂಳೆತ್ತುವುದರಿಂದ ಮೀನುಗಾರಿಕೆ ಬೋಟ್ಗಳ ಸಂಚಾರಕ್ಕೆ ತುಂಬಾ ಅನುಕೂಲ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ